ಜಡ್ಜ್‌ ಮನೆಯಲ್ಲಿ ಕಂತೆ ಕಂತೆ ನೋಟು – ಸಿಜೆಐ ಅನುಮತಿ ನೀಡದ ಹೊರತು ಎಫ್‌ಐಆರ್‌ ದಾಖಲಾಗಲ್ಲ: ಅಮಿತ್‌ ಶಾ

Public TV
2 Min Read

ನವದೆಹಲಿ: ಸುಪ್ರೀಂ ಕೋರ್ಟ್‌ (Supreme Court) ಮುಖ್ಯ ನ್ಯಾಯಮೂರ್ತಿ ಅನುಮತಿ ನೀಡದ ಹೊರತು ಎಫ್‌ಐಆರ್‌ (FIR) ದಾಖಲಾಗುವುದಿಲ್ಲ ಎಂದು ಗೃಹಸಚಿವ ಅಮಿತ್‌ ಶಾ (Amit Shah) ಹೇಳದ್ದಾರೆ.

ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ದೆಹಲಿ ಹೈಕೋರ್ಟ್ (Delhi High Court) ನ್ಯಾಯಾಧೀಶ ಯಶವಂತ್ ವರ್ಮಾ (Yashwant Verma) ಅವರ ನಿವಾಸದಲ್ಲಿ ಭಾರೀ ಪ್ರಮಾಣದ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿತ್‌ ಶಾ ಅವರಲ್ಲಿ ಪ್ರಶ್ನೆ ಕೇಳಲಾಯಿತು.

ಈ ವಿಚಾರ ಈಗ ಸುಪ್ರೀಂ ಕೋರ್ಟ್‌ನಲ್ಲಿದೆ. ಭಾರತದ ಮುಖ್ಯ ನ್ಯಾಯಾಧೀಶರು ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ತನಿಖೆಗಾಗಿ ಸಮಿತಿಯನ್ನು ರಚಿಸಿದ್ದಾರೆ. ಸಮಿತಿಯ ತನಿಖೆ ಪೂರ್ಣಗೊಳ್ಳುವವರೆಗೂ ತಾಳ್ಮೆಯಿಂದ ಇರಬೇಕು ಎಂದರು. ಇದನ್ನೂ ಓದಿ: ದೆಹಲಿ ಹೈಕೋರ್ಟ್ ಜಡ್ಜ್ ಮನೆಗೆ ಬೆಂಕಿ – ನಂದಿಸಲು ಹೋದಾಗ ಸಿಕ್ಕಿದ್ದು ಕಂತೆ ಕಂತೆ ನೋಟು

ಸಮಿತಿ ದೆಹಲಿ ಸರ್ಕಾರ, ದೆಹಲಿ ಪೊಲೀಸರು ಮತ್ತು ಇತರ ಸಂಸ್ಥೆಗಳಿಂದ ದಾಖಲೆಗಳನ್ನು ಕೇಳುತ್ತಿದ್ದಾರೆ ಮತ್ತು ನಾವು ಅವುಗಳನ್ನು ಒದಗಿಸುತ್ತಿದ್ದೇವೆ. ನಾವು ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಶ್ನೆಗಳು ಉದ್ಭವಿಸಿದಾಗ ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ ನ್ಯಾಯಾಧೀಶರ ಸಮಿತಿಯು ನಿರ್ಧರಿಸುತ್ತದೆ ಎಂದು ಹೇಳಿದರು.

ದೊಡ್ಡ ಮೊತ್ತದ ನಗದು ವಶಪಡಿಸಿಕೊಳ್ಳುವ ಕುರಿತ ಅಧಿಕೃತ ವರದಿಗಳಲ್ಲಿ ವಿರೋಧಾಭಾಸಗಳಿವೆಯೇ ಎಂಬ ಪ್ರಶ್ನೆಗೆ, ಅಗ್ನಿಶಾಮಕ ದಳದ ಮುಖ್ಯಸ್ಥರು ಎಂದಿಗೂ ಹಣವನ್ನು ವಶಪಡಿಸಿಕೊಂಡಿದ್ದೇವೆ ಎಂದು ಹೇಳಿಲ್ಲ. ಎಫ್‌ಐಆರ್ ದಾಖಲಿಸಲು ನಮಗೆ ಸಾಧ್ಯವಾಗದ ಕಾರಣ ವಶಪಡಿಸಿಕೊಳ್ಳುವುದು ಹೇಗೆ? ಮುಖ್ಯ ನ್ಯಾಯಮೂರ್ತಿಗಳು ಅನುಮತಿ ನೀಡಿದರೆ ಮಾತ್ರ ಎಫ್‌ಐಆರ್ ದಾಖಲಿಸಬಹುದು ಎಂದು ತಿಳಿಸಿದರು. ಇದನ್ನೂ ಓದಿ: ನ್ಯಾ.ವರ್ಮಾ ಬಂಗ್ಲೆಯಲ್ಲಿ ಕಂತೆ ಕಂತೆ ನಗದು ಪತ್ತೆ ಕೇಸ್‌ – ಪೊಲೀಸರಿಂದ 8 ಮೊಬೈಲ್‌ ಸೀಜ್‌!

ನ್ಯಾಯಾಧೀಶರ ವರ್ಗಾವಣೆಯ ಬಗ್ಗೆ ಕೇಳಲಾದ ಪ್ರಶ್ನೆಗೆ, ಈ ನಿರ್ಧಾರಗಳು ಸುಪ್ರೀಂ ಕೋರ್ಟ್ ಕೊಲಿಜಿಯಂನ ವ್ಯಾಪ್ತಿಗೆ ಬರುತ್ತವೆ. ನಾನು ಅದರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಸುಟ್ಟ ನಗದು ಪತ್ತೆಯಾದ ಆರೋಪದ ಮೇಲೆ ನ್ಯಾ. ಯಶವಂತ್ ವರ್ಮಾ ಮೇಲೆ ಎಫ್‌ಐಆರ್ ದಾಖಲಿಸಬೇಕೆಂದು ಆಗ್ರಹಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

Share This Article