ಚಿತ್ರದುರ್ಗ: ಐತಿಹಾಸಿಕ ಪ್ರವಾಸಿ ತಾಣ ಎನಿಸಿರುವ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಗೆ ಸಾರಿಗೆ ಸಚಿವ ಶ್ರೀರಾಮುಲು ಅವರೇ ಉಸ್ತುವಾರಿ ಸಚಿವರು. ಸಾರಿಗೆ ಸಂಸ್ಥೆಯ ಅಧ್ಯಕ್ಷ ಎಂ.ಚಂದ್ರಪ್ಪ ಕೂಡ ಇದೇ ಜಿಲ್ಲೆಯರು. ಇಷ್ಟಾದರೂ ನಗರದಲ್ಲಿ ಸಿಟಿ ಬಸ್ ಓಡಾಟ ಇಲ್ಲ. ಜನ ಖಾಸಗಿ ವಾಹನಗಳಲ್ಲೇ ಸಂಚರಿಸಬೇಕಿದೆ.
ಚಿತ್ರದುರ್ಗದ ಜನರಿಗೆ ನಗರ ಸಾರಿಗೆ ಮರೀಚಿಕೆಯಾಗಿದೆ. ಪ್ರತಿ ಬಾರಿ ಉಸ್ತುವಾರಿ ಸಚಿವರು ಸಿಟಿ ಬಸ್ ಓಡಾಟಕ್ಕೆ ಚಾಲನೆ ನೀಡುತ್ತಾರೆ. ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಒಂದೇ ತಿಂಗಳಿಗೆ ಇಲ್ಲಿನ ಅಧಿಕಾರಿಗಳು ನಿಲ್ಲಿಸುತ್ತಿದ್ದಾರೆ. ಹೀಗಾಗಿ ದೂರದ ಐಯುಡಿಪಿ ಬಡಾಬಣೆ ಸೇರಿದಂತೆ ನಗರದಲ್ಲಿ ಅಕ್ಕಪಕ್ಕದಲ್ಲಿರುವ ವಿವಿಧ ಹಳ್ಳಿಗಳ ಜನರು ಆಟೋಗಳಲ್ಲಿ ಕುರಿಗಳಂತೆ ಸಂಚಾರ ಮಾಡುತ್ತಿದ್ದಾರೆ. ಈ ಮೂಲಕ ಜಿಲ್ಲಾಡಳಿತವೇ ಕೊರೊನಾ ಹರಡಲು ಸಹಕರಿಸುತ್ತಿದೆ ಎಂಬ ಆರೋಪ ಇಲ್ಲಿನ ಜನರದ್ದಾಗಿದೆ. ಇದನ್ನೂ ಓದಿ: 7 ಕೋಟಿಗೆ ಬೆಂಗಳೂರಲ್ಲಿ ಫ್ಲ್ಯಾಟ್ ಖರೀದಿಸಿದ ದೀಪಿಕಾ
ಸಾರಿಗೆ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಈ ಸ್ಥಿತಿ ನಿರ್ಮಾಣವಾದರೆ ಉಳಿದ ಜಿಲ್ಲೆಗಳ ಪರಿಸ್ಥಿತಿ ಹೇಗೆ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಶಾಲಾ ಕಾಲೇಜುಗಳನ್ನು ಸಹ ಆರಂಭಿಸಿರುವ ಸರ್ಕಾರ, ವಿದ್ಯಾರ್ಥಿಗಳು ಹಾಗೂ ಕೂಲಿಕಾರ್ಮಿಕರಿಗೆ ಅನುಕೂಲವಾಗುವಂತೆ ಸಿಟಿ ಬಸ್ ಬಿಡುವಲ್ಲಿ ನಿರ್ಲಕ್ಷ ತೋರಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿರುವ ಕೆಎಸ್‍ಆರ್‍ಟಿಸಿಯ ಚಿತ್ರದುರ್ಗ ಡಿಸಿ ವಿಜಯ್ ಕುಮಾರ್, ನಗರದಲ್ಲಿನ ಎಲ್ಲ ರಸ್ತೆಗಳು ನಿರ್ಮಾಣ ಆಗಲಿ ಎಂದು ಸಿಟಿ ಬಸ್ ನಿಲ್ಲಿಸಿದ್ದೇವೆ ಎಂದು ನೆಪ ಹೇಳಿದ್ದಾರೆ.
ನಿತ್ಯ ಕೆಲಸ ಕಾರ್ಯಗಳಿಗಾಗಿ ಸೀಟ್ ಆಟೋಗಳನ್ನೇ ಆಶ್ರಯಿಸಿರುವ ಜನರು, ಗುಂಪು ಗುಂಪಾಗಿ ಆಟೋಗಳಲ್ಲಿ ಸಂಚಾರ ಮಾಡುತ್ತಿದ್ದಾರೆ. ಇದರಿಂದಾಗಿ ಕೊರೊನಾ ಹರಡುವ ಭೀತಿ ಕಾಡುತ್ತಿದೆ.