ರಾತ್ರಿಯಾದ್ರೆ ಸಾಕು ರಾಯಚೂರು ಬಸ್ ನಿಲ್ದಾಣದಲ್ಲಿ ಸಾರಿಗೆ ಸಿಬ್ಬಂದಿಗೆ ನರಕಯಾತನೆ

Public TV
1 Min Read

ರಾಯಚೂರು: ಹಗಲು ರಾತ್ರಿಯನ್ನದೇ ಪ್ರಯಾಣಿಕರನ್ನ ಒಂದೆಡೆಯಿಂದ ಇನ್ನೊಂದೆಡೆ ಸುರಕ್ಷಿತವಾಗಿ ಕರೆದೊಯ್ಯುವ ಸಾರಿಗೆ ಇಲಾಖೆ ಚಾಲಕ, ನಿರ್ವಾಹಕರ ಪರಸ್ಥಿತಿ ಯಾರಿಗೂ ಬೇಡ. ರಾಯಚೂರಿನಲ್ಲಂತೂ ರಾತ್ರಿಪಾಳೆಯ ಸಿಬ್ಬಂದಿ ನಿಜವಾಗಲೂ ನರಕಯಾತನೆ ಅನುಭವಿಸಿ ತಮ್ಮ ಕುಟುಂಬಗಳನ್ನ ಸಾಕುತ್ತಿದ್ದಾರೆ. ಪ್ರಯಾಣಿಕರಿಗೆ ಸಾರಿಗೆ ಸೇವೆ ನೀಡುವ ಸಿಬ್ಬಂದಿಗಳಿಗೆ ಬಸ್ ನಿಲ್ದಾಣದಲ್ಲಿ ಕನಿಷ್ಠ ಸೌಲಭ್ಯಗಳು ಇಲ್ಲದೆ ನಿತ್ಯ ಕಷ್ಟ ಅನುಭವಿಸುತ್ತಿದ್ದಾರೆ.

ಎಡೆಬಿಡದೆ ಕಚ್ಚುವ ಸೊಳ್ಳೆಗಳು, ಮಲಗಲು ಸುರಕ್ಷಿತ ಸ್ಥಳವಿಲ್ಲದೆ ಬಸ್ಸೇ ಸೂರು, ಪ್ರಯಾಣಿಕರ ಟಿಕೆಟ್ ದುಡ್ಡಿಗೆ ಸುರಕ್ಷತೆಯಿಲ್ಲ. ಕುಡಿಯಲು ನೀರಿಲ್ಲ, ಸ್ನಾನಕ್ಕೆ ಕೋಣೆಯಿಲ್ಲ, ಸಾರ್ವಜನಿಕ ಶೌಚಾಲಯವೇ ಗತಿ. ಇದು ರಾಯಚೂರು ಕೇಂದ್ರ ಬಸ್ ನಿಲ್ದಾಣದಲ್ಲಿ ರಾತ್ರಿ ವಸತಿ ಮಾಡುವ ಸಾರಿಗೆ ಸಿಬ್ಬಂದಿ ದುಸ್ಥಿತಿ. ಹೇಳಿಕೊಳ್ಳಲು ಬಸ್ ನಿಲ್ದಾಣವೇನೋ ದೊಡ್ಡದಿದೆ. ಆದ್ರೆ ರಿಯಾಲಿಟಿಯಲ್ಲಿ ಕನಿಷ್ಠ ಕುಡಿಯಲು ಶುದ್ಧ ನೀರಿಲ್ಲ. ನಿರ್ವಾಹಕ, ಚಾಲಕರಿಗೆ ವಿಶ್ರಾಂತಿ ಕೋಣೆಯ ವ್ಯವಸ್ಥೆಯಿಲ್ಲ. ಹೀಗಾಗಿ ಬಸ್ ನಲ್ಲೆ ಸೊಳ್ಳೆಪರದೆ ಕಟ್ಟಿಕೊಂಡು ಮಲಗುತ್ತಿದ್ದಾರೆ. ತಲೆಯ ಕೆಳಗೆ ಸಾವಿರಾರು ರೂಪಾಯಿ ಇಟ್ಟುಕೊಂಡು ನಿದ್ರೆಗೆ ಜಾರುತ್ತಿದ್ದಾರೆ. ಇಂತಹ ಪರಸ್ಥಿತಿಯಲ್ಲಿ ನಿದ್ದೆ ಹತ್ತಿದರೂ ಕಷ್ಟ ಹತ್ತದಿದ್ದರೂ ಕಷ್ಟ. ರಾಜ್ಯದ ಬಹಳಷ್ಟು ಕಡೆಗಳಲ್ಲಿ ಬಸ್ ನಿಲ್ದಾಣದಲ್ಲಿ ರೆಸ್ಟ್ ರೂಂಗಳು ಇವೆ. ಆದರೆ ರಾಯಚೂರು ಬಸ್ ನಿಲ್ದಾಣ ಮಾತ್ರ ಸಿಬ್ಬಂದಿಗೆ ನರಕಯಾತನೆ ಅನುಭವಿಸುವಂತೆ ಮಾಡುತ್ತಿದೆ. ಅಂತ ಸಾರಿಗೆ ಇಲಾಖೆ ಸಿಬ್ಬಂದಿ ಕಾಶಪ್ಪ ಬಡಿಗೇರ್ ಬೇಸರ ವ್ಯಕ್ತಪಡಿಸಿದ್ದಾರೆ.

ಸಿಬ್ಬಂದಿಗಳ ಕಷ್ಟ ಎಂತವರಿಗೂ ಅಯ್ಯೋ ಪಾಪ ಎನಿಸುವಂತಿದೆ. ಹೀಗಾಗೇ ಸಾರ್ವಜನಿಕರು ಸಹ ಸಿಬ್ಬಂದಿಗೆ ಅಗತ್ಯ ಸೌಲಭ್ಯ ಒದಗಿಸಬೇಕು ಅಂತ ಆಗ್ರಹಿಸಿದ್ದಾರೆ. ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಈ ಕುರಿತು ಸ್ಪಂದಿಸಿದ್ದು ಕೂಡಲೇ ಸಾರಿಗೆ ಸಚಿವರಿಗೆ ಪತ್ರ ಬರೆದು ಗಮನ ಸೆಳೆಯುವುದಾಗಿ ಹೇಳಿದ್ದಾರೆ. ಸಿಬ್ಬಂದಿ ಚಳಿ, ಮಳೆಯನ್ನದೇ ಬಸ್ ನಲ್ಲೆ ರಾತ್ರಿಯಿಡೀ ಕಾಲಕಳೆಯಬೇಕಾದ ಕೆಟ್ಟ ಪರಸ್ಥಿತಿಯಿದೆ ಇದು ಬದಲಾಗಬೇಕಿದೆ ಅಂತ ಹೇಳಿದ್ದಾರೆ.

ಒಟ್ಟಿನಲ್ಲಿ, ಸಾರಿಗೆ ಇಲಾಖೆ ಸಿಬ್ಬಂದಿಗೆ ರಾಯಚೂರು ಬಲ್ದಾಣ ಸೇಫ್ ಅಲ್ಲಾ, ರಾತ್ರಿ ವಸತಿ ಮಾಡುವ ಸಿಬ್ಬಂದಿ ಪ್ರತಿಯೊಂದಕ್ಕೂ ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕಾದ ಕೆಟ್ಟ ಪರಿಸ್ಥಿತಿ ಇದೆ.

Share This Article
Leave a Comment

Leave a Reply

Your email address will not be published. Required fields are marked *