ಮೈಸೂರು: ಹೃದಯಾಘಾತಗೊಂಡ ಕಾರ್ಮಿಕರೊಬ್ಬರಿಗೆ ಆಂಬುಲೆನ್ಸ್ ಸಿಗದ ಕಾರಣ ಮಾರ್ಗಮಧ್ಯೆ ಮೃತ ಪಟ್ಟ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಸಂಗರಶೆಟ್ಟಿ ಗ್ರಾಮದಲ್ಲಿ ನಡೆದಿದೆ.
ಮೃತ ಪಟ್ಟ ಕಾರ್ಮಿಕ ಗಾಂಧಿ(55) ಆಂಧ್ರಪ್ರದೇಶದ ನಿವಾಸಿಯಾಗಿದ್ದು, ಮೈಸೂರಿಗೆ ತಂಬಾಕು ಕೃಷಿ ಕೆಲಸಕ್ಕಾಗಿ ಬಂದಿದ್ದರು. ಗ್ರಾಮದ ಚಂದ್ರು ಅವರ ಬಳಿ ತಂಬಾಕು ಎಲೆಗಳನ್ನು ಮುರಿದು ಕ್ಯೂರಿಂಗ್ ಮಾಡುವ ಕೆಲಸ ಮಾಡುತ್ತಿದ್ದರು. ಎಂದಿನಂತೆ ಮುಂಜಾನೆ ಎಲೆಗಳನ್ನು ಮುರಿಯುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಚಂದ್ರು ತನ್ನ ಬೈಕಿನಲ್ಲಿ ಕೂರಿಸಿಕೊಂಡು ಬೆಟ್ಟದಪುರದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸೂಚನೆ ನೀಡಿದ್ದು ತಕ್ಷಣವೇ ಚಂದ್ರು ಆಂಬುಲೆನ್ಸ್ ಸಿಬ್ಬಂದಿಗೆ ಸಂಪರ್ಕಿಸಿದ್ದಾರೆ. ಆಂಬುಲೆನ್ಸ್ ಸಿಗದ ಕಾರಣ ಚಂದ್ರು ತನ್ನ ಬೈಕಿನಲ್ಲಿ ಕೂರಿಸಿಕೊಂಡು ಪಿರಿಯಾಪಟ್ಟಣಕ್ಕೆ ಬರುತ್ತಿದ್ದಾಗ ಪಟ್ಟಣದ ಕ್ರೀಡಾಂಗಣ ಬಳಿ ಮತ್ತೊಮ್ಮೆ ತೀವ್ರ ಹೃದಯಾಘಾತಗೊಂಡು ಕಾರ್ಮಿಕ ಮಾರ್ಗಮಧ್ಯೆ ಮೃತ ಪಟ್ಟಿದ್ದಾರೆ.
ಈ ಘಟನೆ ಸಂಭವಿಸಿದ ನಂತರ ಪಿರಿಯಾಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.