ಹರಿಯಾಣದಲ್ಲಿ ಆಪ್‌-ಕಾಂಗ್ರೆಸ್‌ ಮೈತ್ರಿಗೆ ಬ್ರೇಕ್‌? – 20 ಎಎಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್‌

Public TV
1 Min Read

ಚಂಡೀಗಢ: ಆಮ್‌ ಆದ್ಮಿ ಪಕ್ಷ (AAP) ಸೋಮವಾರ ಹರಿಯಾಣ ವಿಧಾನಸಭಾ ಚುನಾವಣೆಗೆ (Haryana Assembly Elections) 20 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ಕುರಿತು ಮಾತನಾಡಿರುವ ಎಎಪಿ ಹರಿಯಾಣ ಘಟಕದ ಮುಖ್ಯಸ್ಥ ಸುಶೀಲ್ ಗುಪ್ತಾ (Sushil Gupta), ಕಾಂಗ್ರೆಸ್‌ ಸೀಟು ಹಂಚಿಕೆಯನ್ನು ಅಂತಿಮಗೊಳಿಸದೇ ಇದ್ದರೆ, ಎಲ್ಲಾ 90 ಕ್ಷೇತ್ರಗಳಿಗೆ ಎಎಪಿ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದು ಹೇಳಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಎಎಪಿ ಮೈತ್ರಿ (AAP-Congress Alliance) ಕುರಿತು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗುಪ್ತಾ, ಆಮ್ ಆದ್ಮಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಎಲ್ಲಾ 90 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಿದ್ದರಾಗಿದ್ದಾರೆ. ಕಾಂಗ್ರೆಸ್‌ ಸೀಟು ಹಂಚಿಕೆಯನ್ನು ಅಂತಿಮಗೊಳಿಸದೇ ಇದ್ದರೆ ಎಲ್ಲಾ 90 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಉಭಯ ಪಕ್ಷಗಳ ನಡುವೆ ಮಾತುಕತೆ ಸ್ಥಗಿತಗೊಂಡಿದೆ. ಎಎಪಿ 10 ಕ್ಷೇತ್ರಗಳಿಗೆ ಬೇಡಿಕೆ ಇಟ್ಟರೆ, ಕಾಂಗ್ರೆಸ್ 5 ಕ್ಷೇತ್ರಗಳನ್ನು ಬಿಟ್ಟು ಕೊಡುವುದಾಗಿ ಹೇಳಿದೆ. ಈ ಕುರಿತು ಕಾಂಗ್ರೆಸ್ ಅಂತಿಮ ಪ್ರತಿಕ್ರಿಯೆಗಾಗಿ ಆಪ್ ಕಾಯುತ್ತಿದೆ. ಚುನಾವಣೆಗೆ ಬಹಳ ಕಡಿಮೆ ಸಮಯವಿದೆ. ಪ್ರತಿ ವಿಧಾನಸಭೆಯಲ್ಲೂ ಆಪ್‌ ಸಂಘಟನೆ ಬಲಿಷ್ಠವಾಗಿದ್ದು, ಪ್ರಾಮಾಣಿಕ ಮೈತ್ರಿಗಾಗಿ ತಾಳ್ಮೆಯಿಂದ ಕಾದಿದ್ದೇವೆ. ಆದರೆ, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.

90 ಸದಸ್ಯ ಬಲದ ಹರಿಯಾಣ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೆಪ್ಟೆಂಬರ್ 12 ಕೊನೆಯ ದಿನವಾಗಿದೆ. ಅಕ್ಟೋಬರ್ 5ರಂದು ಮತದಾನ ನಡೆಯಲಿದೆ. ಅಕ್ಟೋಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.

Share This Article