ಚಂದನ್, ನಿವೇದಿತಾ ಮದ್ವೆ ದಿನಾಂಕ ಫಿಕ್ಸ್

Public TV
2 Min Read

ಬೆಂಗಳೂರು: ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್- 5’ ವಿನ್ನರ್ ಕನ್ನಡದ ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ಬಾರ್ಬಿ ಡಾಲ್ ನಿವೇದಿತಾ ಗೌಡ ಮದುವೆ ದಿನಾಂಕ ಫಿಕ್ಸ್ ಆಗಿದೆ.

ಇತ್ತೀಚೆಗೆ ಸಂದರ್ಶನವೊಂದಲ್ಲಿ ಮಾತನಾಡಿದ ನಿವೇದಿತಾ ಗೌಡ ತಮ್ಮ ಮದುವೆ ದಿನಾಂಕವನ್ನು ಅಧಿಕೃತವಾಗಿ ತಿಳಿಸಿದ್ದಾರೆ. ಚಂದನ್ ಹಾಗೂ ನಿವೇದಿತಾ ಮುಂದಿನ ತಿಂಗಳು ಫೆಬ್ರವರಿ 25 ಮತ್ತು 26 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇವರ ಮದುವೆ ಮೈಸೂರಿನ ಕನ್ವೆನ್ಶನ್ ಹಾಲ್‍ನಲ್ಲಿ ನಡೆಯಲಿದೆ. ಹೀಗಾಗಿ ಈಗಿನಿಂದಲೇ ಎರಡು ಮನೆಯವರು ಮದುವೆಯ ತಯಾರಿ ನಡೆಸುತ್ತಿದ್ದಾರೆ.

ಮದುವೆ ತಯಾರಿ ನಡುವೆಯೂ ನಿವೇದಿತಾ ಗೌಡ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಅಂದರೆ ನಿವೇದಿತಾ ಗೌಡಗೆ ಉದ್ಯೋಗ ಸಿಕ್ಕಿದೆ. ಈ ಖುಷಿಯನ್ನು ಇನ್‍ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.

ನನಗೆ ಏರ್‌ಪೋರ್ಸ್‌ನಲ್ಲಿ ಕೆಲಸ ಮಾಡಬೇಕೆಂಬ ಆಸೆ ಇತ್ತು. ಈಗ ನಾನು ಇಷ್ಟಪಟ್ಟ ಕೆಲಸವೇ ಸಿಕ್ಕಿದೆ. ಏರ್‌ಪೋರ್ಟಿನಲ್ಲಿ ಕೆಲಸ ಮಾಡಲು ತುಂಬಾ ತಾಳ್ಮೆ, ಫ್ಯಾಶನ್ ಮತ್ತು ಆಸಕ್ತಿ ಇರಬೇಕು. ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಸಿಕ್ಕಿದ್ದು, ಆಪರೇಶನ್ ಅಸಿಸ್ಟಂಟ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ತಮ್ಮ ಕೆಲಸದ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ನನ್ನ ಮತ್ತು ಚಂದನ್ ಇಷ್ಟದಂತೆ ಮದುವೆ ನಡೆಯುತ್ತಿದೆ. ಸದ್ಯಕ್ಕೆ ಇಬ್ಬರು ಕೆಲಸದಲ್ಲಿ ಬ್ಯುಸಿಯಿದ್ದೇವೆ. ಮನೆಯವರು ಮದುವೆ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ತಮ್ಮ ಮದುವೆಯ ತಯಾರಿಯ ಬಗ್ಗೆ ನಿವೇದಿತಾ ಹೇಳಿದ್ದಾರೆ.

ಅಕ್ಟೋಬರ್ 21ರಂದು ಚಂದನ್ ಶೆಟ್ಟಿ ತಮ್ಮ ಆತ್ಮೀಯ ಗೆಳತಿ ಬಾರ್ಬಿ ಗರ್ಲ್ ನಿವೇದಿತಾ ಗೌಡ ಜೊತೆ ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಶುಭ ಸಮಾರಂಭದಲ್ಲಿ ಎರಡೂ ಕುಟುಂಬದ ಸದಸ್ಯರು ಹಾಗೂ ಆಪ್ತರಷ್ಟೇ ಭಾಗಿಯಾಗಿದ್ದರು.

ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅಭಿಮಾನಿಗಳ ಮುಂದೆ ಗೆಳತಿ ನಿವೇದಿತಾರಿಗೆ ಪ್ರಪೋಸ್ ಮಾಡಿದ್ದರು. ವೇದಿಕೆಯಲ್ಲಿಯೇ ರಿಂಗ್ ತೊಡಿಸಿ ತಮ್ಮ ಪ್ರೇಮ ವಿಚಾರವನ್ನು ಚಂದನ್ ಅಧಿಕೃತವಾಗಿ ಹೇಳಿಕೊಂಡಿದ್ದರು.

ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ನಿವೇದಿತಾ ಮತ್ತು ಚಂದನ್ ಪ್ರೇಮ ಜೋಡಿಗಳ ರೀತಿಯಲ್ಲಿಯೇ ಬಿಂಬಿತವಾಗಿದ್ದರು. ರಿಯಾಲಿಟಿ ಶೋ ಬಳಿಕ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಹೇಳಿದ್ದರು. ಕಳೆದ ಎರಡು ವರ್ಷಗಳಿಂದ ಚಂದನ್ ಮತ್ತು ನಿವೇದಿತಾ ನಡುವೆ ಪ್ರೇಮಾಂಕುರವಾಗಿದೆ ಎಂಬಿತ್ಯಾದಿ ಸುದ್ದಿಗಳು ಹರಿದಾಡಿದ್ದವು. ಆದ್ರೆ ಎಲ್ಲಿಯೂ ಚಂದನ್ ಮತ್ತು ನಿವೇದಿತಾ ತಮ್ಮ ಸಂಬಂಧದ ಬಗ್ಗೆ ಸ್ಪಷ್ಟವಾಗಿ ಹೇಳಿಕೊಂಡಿರಲಿಲ್ಲ. ಕೊನೆಗೆ ದಸರಾ ಹಬ್ಬದಂದು ತಮ್ಮ ಪ್ರೀತಿಯನ್ನು ಚಂದನ್ ಹೇಳಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *