ನನ್ನನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ, ನಾನು ಪರಮಶಿವ- ನಿತ್ಯಾನಂದನ ವಿಡಿಯೋ ವೈರಲ್

Public TV
3 Min Read

ನವದೆಹಲಿ: ಸ್ವಯಂ ಘೋಷಿತ ದೇವ ಮಾನವ, ಅತ್ಯಾಚಾರ ಆರೋಪಿ ನಿತ್ಯಾನಂದನ ಕುರಿತು ವಿದೇಶಗಳಲ್ಲೂ ಅಪಸ್ವರ ಎದ್ದಿದ್ದು, ಇದರ ಬೆನ್ನಲ್ಲೇ ಇದೀಗ ವಿಡಿಯೋವೊಂದನ್ನು ಹರಿಬಿಟ್ಟಿದ್ದಾನೆ.

ಅಜ್ಞಾತ ಸ್ಥಳದಿಂದ ನಿತ್ಯಾನಂದ ಈ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ನಾನು ಪರಮಶಿವ ಯಾರಿಂದಲೂ ನನ್ನನ್ನು ಮುಟ್ಟಲು ಸಾಧ್ಯವಿಲ್ಲ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ನಿತ್ಯಾನಂದನ ವಿಡಿಯೋದಲ್ಲಿ ದಿನಾಂಕ ಸ್ಪಷ್ಟವಾಗಿಲ್ಲ, ನವೆಂಬರ್ 22ರಂದು ಟ್ವಿಟ್ಟರಿನಲ್ಲಿ ಈ ವಿಡಿಯೋ ಹಾಕಲಾಗಿದೆ.

ಯಾವ ನ್ಯಾಯಾಲಯವೂ ನನ್ನನ್ನು ವಿಚಾರಣೆಗೊಳಪಡಿಸಲು ಸಾಧ್ಯವಿಲ್ಲ. ಅಲ್ಲದೆ ಸತ್ಯವೇನೆಂಬುದನ್ನು ನಾನು ಜಗತ್ತಿಗೆ ತೋರಿಸುತ್ತೇನೆ. ಈ ಮೂಲಕ ನನ್ನ ಅಂತರತ್ವವನ್ನು ತೋರಿಸುತ್ತೇನೆ. ಈಗ ಯಾರೂ ನನ್ನನ್ನು ಮುಟ್ಟಲು ಸಾಧ್ಯವಿಲ್ಲ. ನಾನು ನಿಮಗೆ ನಿಜವನ್ನು ಹೇಳುತ್ತೇನೆ. ನಾನು ಪರಮಶಿವ- ಅರ್ಥವಾಯಿತೇ? ನಿಜವನ್ನು ಬಾಯ್ಬಿಡಿಸಲು ಯಾವುದೇ ಮೂರ್ಖ ನ್ಯಾಯಾಲಯ ನನ್ನನ್ನು ವಿಚಾರಣೆಗೊಳಪಡಿಸಬೇಕಿಲ್ಲ ಎಂದು ವಿಡಿಯೋದಲ್ಲಿ ನಿತ್ಯಾನಂದ ಹೇಳಿಕೊಂಡಿದ್ದಾನೆ.

https://twitter.com/YippeekiYay_DH/status/1197818470349463552?

ಇಲ್ಲಿರುವ ಮೂಲಕ ನೀವು ನಿಮ್ಮ ಸಮಗ್ರತೆ ಹಾಗೂ ನಿಷ್ಠೆಯನ್ನು ಪ್ರದರ್ಶಿಸಿದ್ದೀರಿ. ನಿಮ್ಮೆಲ್ಲರಿಗೂ ಇನ್ನು ಸಾವು ಸಂಭವಿಸುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ತನ್ನ ಅನುಯಾಯಿಗಳಿಗೆ ಸಂದೇಶ ತಿಳಿಸಿದ್ದಾನೆ.

ನಿತ್ಯಾನಂದನ ವೀಸಾ ಅವಧಿ ಮುಕ್ತಾಯವಾಗಿದ್ದು, ನವೀಕರಿಸುವ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಇದರ ನಡುವೆಯೂ ನಿತ್ಯಾನಂದ ಈಕ್ವೇಡಾರ್ ನಲ್ಲಿ ಅವಿತುಕೊಂಡಿದ್ದಾನೆ ಎಂದು ಹೇಳಲಾಗಿದೆ. ಅಲ್ಲದೆ ಅಲ್ಲಿಯೇ ದೇಶವನ್ನೂ ನಿರ್ಮಿಸಲು ಸಿದ್ಧತೆ ನಡೆಸಿದ್ದಾನೆ ಎಂದು ವರದಿಯಾಗಿದೆ. ಈ ಕುರಿತು ಈಕ್ವೇಡಾರ್ ಸರ್ಕಾರ ಸ್ಪಷ್ಟಪಡಿಸಿದ್ದು, ನಿತ್ಯಾನಂದ ಹಾಗೂ ನಮ್ಮ ದೇಶಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.

ಈಕ್ವೇಡಾರ್ ನಲ್ಲಿ ಖಾಸಗಿ ಹಿಮಪ್ರದೇಶವನ್ನು ಖರೀದಿಸಿ, ಇದು ತನ್ನ ದೇಶ ಎಂಬಂತೆ ನಿತ್ಯಾನಂದ ಬಿಂಬಿಸುತ್ತಿದ್ದಾನೆ. ಅಲ್ಲದೆ ಇದಕ್ಕಾಗಿ ಈಗಾಗಲೇ ಧ್ವಜ, ಲಾಂಛನ, ಪಾಸ್‍ಪೋರ್ಟ್‍ಗಳನ್ನು ಸಹ ಸಿದ್ಧಪಡಿಸಿದ್ದು, ಈ ದೇಶಕ್ಕೆ ಕೈಲಾಸ ಎಂದು ಹೆಸರಿಟ್ಟಿದ್ದಾನೆ ಎಂದು ಆಂಗ್ಲ ಮಾಧ್ಯಮ ವರದಿ ಮಾಡಿತ್ತು.

ಚಿತ್ರ ಕೃಪೆ: ರಿಪಬ್ಲಿಕ್ ಟಿವಿ

ಈ ಹಿಮಪ್ರದೇಶವು ಟ್ರಿನಿಡಾಡ್ ಹಾಗೂ ಟೊಬಾಗೊ ಪ್ರದೇಶಕ್ಕೆ ಹತ್ತಿರವಾಗಿದೆ. ಆ ಪ್ರದೇಶವನ್ನು ಹಿಂದೂ ರಾಷ್ಟ್ರ ಎಂದು ಸ್ವಯಂ ಘೋಷಿತ ದೇವ ಮಾನವ ಕರೆದುಕೊಂಡಿದ್ದಾನೆ. ಪ್ರಧಾನಿ ಸೇರಿದಂತೆ ಸಚಿವ ಸಂಪುಟವನ್ನು ಸಹ ರಚಿಸಿದ್ದಾನೆ. ಅಲ್ಲದೆ ದೇಶಕ್ಕೆ ದೇಣಿಗೆ ನೀಡುವಂತೆ ಸಾರ್ವಜನಿಕ ಪ್ರಕಟಣೆಯನ್ನು ಸಹ ಹೊರಡಿಸಿದ್ದು, ಶ್ರೇಷ್ಠ ಹಿಂದೂ ರಾಷ್ಟ್ರ ಕೈಲಾಸದ ಪೌರತ್ವ ಪಡೆಯುವುದು ಒಂದು ಸದವಕಾಶ ಎಂದು ಹೇಳಿಕೊಂಡಿದ್ದ.

ಇದಕ್ಕಾಗಿ www.kailaasa.org ಹೆಸರಿನಲ್ಲಿ ಪ್ರತ್ಯೇಕ ವೆಬ್ ಸೈಟನ್ನು ಸಹ ತೆರೆಯಲಾಗಿದ್ದು, ಅದರಲ್ಲಿ ಕೈಲಾಸದ ಕುರಿತು ವಿವರಿಸಿದ್ದಾನೆ. ಕೈಲಾಸ ಒಂದು ರಾಜಕೀಯೇತರ ದೇಶವಾಗಿದ್ದು, ಎಲ್ಲ ಮಾನವರು ಪ್ರಬುದ್ಧರಾಗಿ ಬದುಕುವುದು ಇದರ ಗುರಿಯಾಗಿದೆ. ಅಧಿಕೃತ ಹಿಂದೂ ಧರ್ಮದ ಆಧಾರದ ಮೇಲೆ ಪ್ರಭುದ್ಧ ನಾಗರೀಕತೆ ಸಂರಕ್ಷಣೆ, ಪುನರುಜ್ಜೀವನ ನಡೆಸುವುದು ಕೈಲಾಸದ ಉದ್ದೇಶವಾಗಿದೆ ಎಂದು ವೆಬ್‍ಸೈಟ್‍ನಲ್ಲಿ ಬರೆದುಕೊಂಡಿದ್ದಾನೆ.

ಚಿತ್ರ ಕೃಪೆ: ರಿಪಬ್ಲಿಕ್ ಟಿವಿ

ಯುವತಿಯರಿಗೆ ಚಿತ್ರ ಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದನಿಗಾಗಿ ಗುಜರಾತ್ ಪೊಲೀಸರು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ. ಬೆಂಗಳೂರಿನ ದಂಪತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ನಿತ್ಯಾನಂದನಿಗಾಗಿ ಶೋಧ ಕಾರ್ಯ ಪ್ರಾರಂಭಿಸಿದ್ದು, ನಿತ್ಯಾನಂದನ ಆಶ್ರಮದ ಅಹಮದಾಬಾದ್ ಶಾಖೆಯಲ್ಲಿದ್ದ ಹೆಣ್ಣುಮಕ್ಕಳನ್ನು ಹಿಂಸಿಸುತ್ತಿದ್ದ ಎಂದು ದಂಪತಿ ದೂರು ನೀಡಿದ್ದಾರೆ.

ಅಹ್ಮದಾಬಾದ್ ಜಿಲ್ಲೆಯ ಹಿರಾಪುರ ಗ್ರಾಮದಲ್ಲಿರುವ ಶಾಲೆಯೊಂದರ ಆವರಣದಲ್ಲಿ ನಿತ್ಯಾನಂದನ ಆಶ್ರಮವಿದೆ. ಅಲ್ಲದೆ ಬೆಂಗಳೂರಿನ ಬಿಡದಿಯಲ್ಲಿ ಧ್ಯಾನಪೀಠಂ ಎಂಬ ಹೆಸರಿನ ವಿಶಾಲವಾದ ಆಶ್ರಮವನ್ನು ಸಹ ನಡೆಸುತ್ತಿದ್ದಾರೆ. 5 ವರ್ಷಗಳ ಅವಧಿಯಲ್ಲಿ ಶಿಷ್ಯೆ ಮೇಲೆಯೇ ಅತ್ಯಾಚಾರ ಎಸಗಿರುವ ಎಂಬ ಪ್ರಕರಣದಲ್ಲಿ ಆರೋಪಿಯಾಗಿರುವ ನಿತ್ಯಾನಂದ ಒಂದು ವರ್ಷದಿಂದಲೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿಲ್ಲ.

ಸೆಪ್ಟೆಂಬರ್ 2018ರಲ್ಲಿ ನಿತ್ಯಾನಂದನ ಪಾಸ್‍ಪೋರ್ಟ್ ಅವಧಿ ಮುಗಿದ ಕಾರಣ ಅವರು ಅಕ್ರಮವಾಗಿ ದೇಶವನ್ನು ತೊರೆದಿರಬಹುದು ಎಂದು ಗುಜರಾತ್ ಪೊಲೀಸರು ಶಂಕಿಸಿದ್ದಾರೆ. ಸ್ವಯಂ ಘೋಷಿತ ದೇವ ಮಾನವನ ವಿರುದ್ಧ ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಪಾಸ್‍ಪೋರ್ಟ್ ನವೀಕರಿಸುವ ಕುರಿತ ಅರ್ಜಿಯನ್ನು ತಿರಸ್ಕರಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *