ನಿತ್ಯಾನಂದನ ಜಾಮೀನು ರದ್ದು, ಬಾಂಡ್ ಮುಟ್ಟುಗೋಲು – ಅರೆಸ್ಟ್ ವಾರೆಂಟ್ ಜಾರಿ

Public TV
1 Min Read

ರಾಮನಗರ: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ನಿರಂತರವಾಗಿ ನ್ಯಾಯಾಲಯದ ವಿಚಾರವಣೆಗೆ ಗೈರಾಗುತ್ತಿದ್ದ ಹಿನ್ನೆಲೆಯಲ್ಲಿ ರಾಮನಗರದ 3ನೇ ಜಿಲ್ಲಾ ಸತ್ರ ನ್ಯಾಯಾಲಯವು ಜಾಮೀನು ರದ್ದುಗೊಳಿಸಿ ಜಾಮೀನು ರಹಿತಿ ಬಂಧನದ ವಾರೆಂಟ್ ಜಾರಿಗೊಳಿಸಿದೆ.

ರಾಮನಗರ ತಾಲೂಕಿನ ಬಿಡದಿಯ ಧ್ಯಾನಪೀಠದ ನಿತ್ಯಾನಂದ, ಅತ್ಯಾಚಾರ ಪ್ರಕರಣದ ಸುಳಿಯಲ್ಲಿ ಸಿಲುಕಿದ್ದನು. ಜಾಮೀನು ಪಡೆದು, ತಾನು ಆರು ವರ್ಷದ ಬಾಲಕನೆಂದು ಪುರುಷತ್ವ ಪರೀಕ್ಷೆಗೆ ಒಳಗಾಗಿದ್ದ. ನಂತರ ಪ್ರಕರಣದ ಹಿನ್ನೆಲೆಯಲ್ಲಿ ಜಾಮೀನು ಪಡೆದು ದೇಶದಾದ್ಯಂತ ಓಡಾಡ್ತಿದ್ದ ನಿತ್ಯಾನಂದ ಇದೀಗ ದೇಶ ಬಿಟ್ಟು ಪರಾರಿಯಾಗಿದ್ದಾನೆ. ನಿತ್ಯಾನಂದನಿಗಾಗಿ ಸಿಐಡಿ ಅಧಿಕಾರಿಗಳು ತೀವ್ರ ಶೋಧ ಕಾರ್ಯ ನಡೆಸ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಸುಮಾರು 36 ಕ್ಕೂ ಹೆಚ್ಚು ನ್ಯಾಯಾಲಯದ ವಿಚಾರಣೆಗೆ ನಿತ್ಯಾನಂದ ಗೈರಾಗಿದ್ದ. ಈ ಹಿನ್ನೆಲೆಯಲ್ಲಿ ನಿತ್ಯಾನಂದ ವಿಚಾರಣೆಗೆ ಗೈರಾಗುತ್ತಿದ್ದು ಆತನಿಗೆ ನೀಡಿರುವ ಜಾಮೀನನ್ನ ರದ್ದುಗೊಳಿಸುವಂತೆ ಹೈಕೋರ್ಟ್‍ನಲ್ಲಿ ಮನವಿ ಮಾಡಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ನಿತ್ಯಾನಂದನಿಗೆ ನೀಡಿದ್ದ ಜಾಮೀನನ್ನ ರದ್ದುಗೊಳಿಸಿ ಆದೇಶಿಸಿದ್ರು. ಅಲ್ಲದೇ ಪ್ರಕರಣದ ವರ್ಗಾವಣೆ ಮನವಿಯನ್ನ ರದ್ದುಗೊಳಿಸಿ ರಾಮನಗರದ ಜಿಲ್ಲಾ ನ್ಯಾಯಾಲಯದಲ್ಲೇ ವಿಚಾರಣೆ ನಡೆಸುವಂತೆ ಆದೇಶಿಸಿದರು.

ರಾಮನಗರದ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲದಲ್ಲಿ ನಡೆದ ವಿಚಾರಣೆಯಲ್ಲಿ ಇಂದು ಕೂಡಾ ನಿತ್ಯಾನಂದ ಗೈರಾಗಿದ್ದ. ರಾಮನಗರಕ್ಕೆ ಆಗಮಿಸಿದ್ದ ಸಿಐಡಿ ಅಧಿಕಾರಿಗಳು ಸರ್ಕಾರಿ ಪರ ವಕೀಲ ಎಂ.ಡಿ ರಘುರವರ ಬಳಿ ನಿತ್ಯಾನಂದನ ಜಾಮೀನು ರದ್ದುಗೊಳಿಸಿ, ಜಾಮೀನಿನ ಬಾಂಡ್ ಮುಟ್ಟುಗೊಲು ಹಾಗೂ ಜಾಮೀನು ರಹಿತ ವಾರೆಂಟ್‍ಗೆ ಮನವಿ ಮಾಡಿದ್ರು. ಮನವಿ ಹಿನ್ನೆಲೆಯಲ್ಲಿ ವಾದ ಮಂಡಿಸಿದ ಸರ್ಕಾರಿ ವಕೀಲರ ವಾದವನ್ನ ಪುರಸ್ಕರಿಸಿದ ನ್ಯಾಯಾಧೀಶ ಸಿದ್ದಲಿಂಗಪ್ರಭುರವರು ಜಾಮೀನು ರಹಿತ ವಾರೆಂಟ್‍ನ್ನು ಆದೇಶಿಸಿದ್ದಾರೆ.

ನಿತ್ಯಾನಂದ ಜಾಮೀನು ಪಡೆಯುವ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಜಾಮೀನು ಬಾಂಡ್‍ಗಳನ್ನು ಜಪ್ತಿಗೊಳಿಸಿ ಬಂಧಿಸುವಂತೆ ಆದೇಶಿಸಲಾಗಿದೆ. ಇತ್ತ ದೇಶ ಬಿಟ್ಟು ಪರಾರಿಯಾಗಿರುವ ನಿತ್ಯಾನಂದ ಅಜ್ಞಾತ ಸ್ಥಳದಲ್ಲಿದ್ದು ಸಿಐಡಿ ಅಧಿಕಾರಿಗಳು ನಿತ್ಯಾನಂದನಿಗಾಗಿ ಶೋಧ ಕಾರ್ಯವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ನಿತ್ಯಾನಂದನ ಬಂಧನಕ್ಕಾಗಿ ವಿಶೇಷ ತಂಡವನ್ನು ರಚನೆ ಮಾಡಿದ್ದು ಕಾರ್ಯಾಚರಣೆ ನಡೆಸ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *