ದಾಖಲೆಯ 10ನೇ ಬಾರಿಗೆ ಬಿಹಾರ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್‌ ಕುಮಾರ್‌

2 Min Read
ದಾಖಲೆಯ 10ನೇ ಬಾರಿಗೆ ಬಿಹಾರ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್‌ ಕುಮಾರ್‌

– ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್‌ ಶಾ ಸೇರಿ ಹಲವರು ಭಾಗಿ

ಪಾಟ್ನಾ: ದಾಖಲೆಯ 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್‌ ಕುಮಾರ್‌ (Nitish Kumar) ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.

ಬಿಹಾರದ ಗಾಂಧಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರಿಂದ ಪ್ರಮಾಣ ವಚನ ಬೋಧಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿ ಎನ್‌ಡಿಎ ಆಡಳಿತ ರಾಜ್ಯಗಳ ಸಿಎಂಗಳು ಭಾಗಿಯಾಗಿದ್ದರು. ಇದನ್ನೂ ಓದಿ: 10ನೇ ಬಾರಿಗೆ ಬಿಹಾರ ಸಿಎಂ ಆಗಿ ಇಂದು ನಿತೀಶ್ ಕುಮಾರ್ ಪ್ರಮಾಣವಚನ

ಬಿಜೆಪಿ ನಾಯಕರಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಸಿನ್ಹಾ ಸೇರಿದಂತೆ ಹತ್ತೊಂಬತ್ತು ಶಾಸಕರು ಕೂಡ ಪ್ರಮಾಣ ವಚನ ಸ್ವೀಕರಿಸಿದರು. ಇವರು ಹೊಸ ಸರ್ಕಾರದ ಕೇಂದ್ರಬಿಂದುವಾಗಲಿದ್ದಾರೆ. ಚೌಧರಿ ಮತ್ತು ಸಿನ್ಹಾ ಹಿಂದಿನ ಅವಧಿಯಲ್ಲೂ ಡಿಸಿಎಂ ಆಗಿದ್ದರು. ಈ ಬಾರಿಯೂ ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ವಿಜಯ್ ಚೌಧರಿ, ಬಿಜೇಂದ್ರ ಪ್ರಸಾದ್ ಯಾದವ್, ಶ್ರವೋನ್ ಕುಮಾರ್, ಮಂಗಲ್ ಪಾಂಡೆ, ದಿಲೀಪ್ ಜೈಸ್ವಾಲ್, ಅಶೋಕ್ ಚೌಧರಿ, ಲೇಶಿ ಸಿಂಗ್, ಮದನ್ ಸಾಹ್ನಿ, ನಿತಿನ್ ನಬಿನ್, ರಾಮ್ ಕೃಪಾಲ್ ಯಾದವ್, ಸಂತೋಷ್ ಕುಮಾರ್ ಸುಮನ್, ಸುನಿಲ್ ಕುಮಾರ್, ಎಂಡಿ ಜಮಾ ಖಾನ್, ಸಂಜಯ್ ಸಿಂಗ್ ಟೈಗರ್, ಅರುಣ್ ಶಂಕರ್ ಪ್ರಸಾದ್, ಸುರೇಂದ್ರ ಮೆಹತಾ, ನಾರಾಯಣ ಪ್ರಸಾದ್, ರಾಮ ನಿಶಾದ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣವಚನ ಸಮಾರಂಭದಲ್ಲಿ ಎನ್‌ಡಿಎ ಆಡಳಿತದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸಹ ಉಪಸ್ಥಿತರಿದ್ದರು. ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ನಾಗಾಲ್ಯಾಂಡ್ ಮುಖ್ಯಮಂತ್ರಿ ನೀಫಿಯು ರಿಯೊ, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು. ಬಿಹಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಎಲ್‌ಜೆಪಿ (ಆರ್‌ವಿ) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

2025 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಐತಿಹಾಸಿಕ ಜಯ ಸಾಧಿಸಿ 243 ಸ್ಥಾನಗಳಲ್ಲಿ 202 ಸ್ಥಾನಗಳನ್ನು ಗೆದ್ದರೆ, ಮಹಾಘಟಬಂಧನ್ ಕೇವಲ 35 ಸ್ಥಾನಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಯಿತು. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಆಡಳಿತಾರೂಢ ಮೈತ್ರಿಕೂಟವು ನಾಲ್ಕನೇ ಮೂರು ಭಾಗದಷ್ಟು ಬಹುಮತವನ್ನು ಗಳಿಸಿತು. ಇದು ರಾಜ್ಯ ಚುನಾವಣೆಯಲ್ಲಿ ಎನ್‌ಡಿಎ 200 ಸ್ಥಾನಗಳ ಗಡಿಯನ್ನು ದಾಟಿದ್ದು ಎರಡನೇ ಬಾರಿಯಾಗಿದೆ. 2010 ರಲ್ಲಿ, ಅದು 206 ಸ್ಥಾನಗಳನ್ನು ಗೆದ್ದಿತ್ತು.

Share This Article