2024ರ ವೇಳೆಗೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಒಟ್ಟಿಗೆ ನಡೆಸಿ: ನೀತಿ ಆಯೋಗ

Public TV
1 Min Read

ನವದೆಹಲಿ: 2024ರಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಒಟ್ಟಿಗೆ ನಡೆಸಿ ಎಂದು ನೀತಿ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಚುನಾವಣೆಗಳು ಮುಕ್ತವಾಗಿ ನಡೆಯಬೇಕು. ಅಷ್ಟೇ ಅಲ್ಲದೇ ಕಡಿಮೆ ಅವಧಿಯಲ್ಲಿ ಪ್ರಚಾರ ನಡೆಸಬೇಕು. 2024ರ ವೇಳೆಗೆ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ನಡೆಸಬಹುದು ಎಂದು ತನ್ನ ಮೂರು ವರ್ಷದ ಕಾರ್ಯ ಯೋಜನೆಯಲ್ಲಿ ನೀತಿ ಆಯೋಗ ಹೇಳಿದೆ.

ಈ ಸಲಹೆಯನ್ನು ಪರಿಗಣಿಸಿ ಕಾರ್ಯರೂಪಕ್ಕೆ ತರಲು ಸುಗಮ ದಾರಿಯ ವ್ಯವಸ್ಥೆ ಮಾಡಬೇಕೆಂದು ಚುನಾವಣಾ ಆಯೋಗಕ್ಕೆ ತಿಳಿಸಿದೆ.

ಇದೆ ವೇಳೆ ಸರ್ಕಾರಿ ಕೆಲಸವನ್ನು ಹೊರಗುತ್ತಿಗೆ ನೀಡಿ ಖಾಸಗಿ ವಲಯದಲ್ಲಿರುವ ಪ್ರತಿಭೆಗಳನ್ನು ವ್ಯವಸ್ಥೆಗೆ ತನ್ನಿ ಎಂದು ಸರ್ಕಾರಕ್ಕೆ ಸಲಹೆ ನೀಡಿದೆ. ನೀತಿ ಆಯೋಗದ ಈ ಸಲಹೆಗೆ ಐಎಎಸ್ ಅಧಿಕಾರಿಗಳಿಂದ ವಿರೋಧ ವ್ಯಕ್ತವಾಗಿದೆ.

ಗಣರಾಜ್ಯೋತ್ಸವ ದಿನದಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ವಿಧಾನ ಸಭೆ ಮತ್ತು ಲೋಕಸಭಾ ಚುನಾವಣೆಗಳು ಒಂದೇ ಬಾರಿಗೆ ನಡೆದರೆ ಉತ್ತಮ ಎಂದು ಹೇಳಿದ್ದರು.

ಪ್ರಧಾನಿ ನರೇಂದ್ರಮೋದಿ ಈ ಹಿಂದೆ ಈ ವಿಚಾರವನ್ನು ಪ್ರಸ್ತಾಪಿಸಿದ್ದು ಎಲ್ಲ ಪಕ್ಷಗಳು ಈ ವಿಚಾರದ ಬಗ್ಗೆ ಒಗ್ಗಟ್ಟಾಗಿ ಒಂದೇ ತೀರ್ಮಾನವನ್ನು ತೆಗೆದುಕೊಳ್ಳಬೇಕು ಎಂದು ಕೇಳಿಕೊಂಡಿದ್ದರು. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಚುನಾವಣೆ ಒಟ್ಟಿಗೆ ನಡೆದರೆ ಉತ್ತಮ ಎನ್ನುವ ಅಭಿಪ್ರಾಯವನ್ನು ಈ ಹಿಂದೆ ವ್ಯಕ್ತಪಡಿಸಿದ್ದರು.

ಲಾಭ ಏನು?
ಪ್ರಸ್ತುತ ದೇಶದಲ್ಲಿ ಲೋಕಸಭಾ ಮತ್ತು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಪ್ರತ್ಯೇಕವಾಗಿ ನಡೆಯುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಸರ್ಕಾರಗಳ ಮಂತ್ರಿಗಳು ಪ್ರಚಾರ ಕೈಗೊಳ್ಳುವುದರಿಂದ ಆಡಳಿತ ಕೆಲಸಗಳು ಬಾಕಿಯಾಗುತ್ತದೆ. ಅಷ್ಟೇ ಅಲ್ಲದೇ ಸರ್ಕಾರದ ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗಬೇಕಾಗುತ್ತದೆ. ನೀತಿ ಸಂಹಿತೆ ಜಾರಿ ಸಂದರ್ಭದಲ್ಲಿ ಹೊಸದಾಗಿ ಯೋಜನೆಗಳನ್ನು ಪ್ರಕಟಿಸಲು ಆಗುವುದಿಲ್ಲ. ಈ ಎಲ್ಲ ಕಾರಣಗಳಿಂದ ಸರ್ಕಾರದ ವೆಚ್ಚ, ರಾಜಕೀಯ ಪಕ್ಷಗಳ ಖರ್ಚು ಮತ್ತು ಸಮಯವನ್ನು ಉಳಿಸಲು ಒಂದೇ ಬಾರಿಗೆ ಎರಡು ಚುನಾವಣೆಗಳನ್ನು ಒಟ್ಟಾಗಿ ನಡೆಸುವುದು ಉತ್ತಮ ಎನ್ನುವ ಅಭಿಪ್ರಾಯ ಕೇಳಿಬಂದಿದೆ.

ಇದನ್ನೂ ಓದಿ: 2019ರಲ್ಲಿ ಬಿಜೆಪಿ ಸೋಲಿಸಲು ಲಾಲೂ ಪ್ರಸಾದ್ ಯಾದವ್ ಐಡಿಯಾ

Share This Article
Leave a Comment

Leave a Reply

Your email address will not be published. Required fields are marked *