ಪೊಲೀಸರೇ ಮಕ್ಕಳಿಗೆ ಆಶ್ಲೀಲ ವಿಡಿಯೋ ತೋರಿಸಿದ್ರು: ನಿತ್ಯಾನಂದನ ಶಿಷ್ಯ

Public TV
2 Min Read

– ತನಿಖಾಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲು

ಅಹಮದಾಬಾದ್: ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದನ ವಿರುದ್ಧ ಅಹಮದಾಬಾದ್ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಆಶ್ರಮದಲ್ಲಿನ ಮಕ್ಕಳನ್ನೂ ವಿಚಾರಣೆಗೊಳಪಡಿಸಿದ್ದರು. ಆದರೆ ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ನಿತ್ಯಾನಂದನ ಶಿಷ್ಯ, ತನಿಖಾಧಿಕಾರಿಗಳು ಆಶ್ರಮದ ಮಕ್ಕಳಿಗೆ ಅಶ್ಲೀಲ ವಿಡಿಯೋ ತೋರಿಸಿ, ಭಾವನಾತ್ಮಕವಾಗಿ ಬೆದರಿಸಿ ತಮಗೆ ಬೇಕಾದಂತೆ ಹೇಳಿಕೆ ಪಡೆದಿದ್ದಾರೆ ಎಂದು ಆರೋಪಿಸಿದ್ದಾನೆ.

ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಮಾರ್ಚ್ 6ರಂದು ಮಕ್ಕಳ ಕಲ್ಯಾಣ ಸಮಿತಿ(ಸಿಡಬ್ಲ್ಯುಸಿ)ಯ ಸದಸ್ಯರೂ ಸೇರಿದಂತೆ 14 ಜನ ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಅಹಮದಾಬಾದ್‍ನ ಹೊರವಲಯದಲ್ಲಿರುವ ಗುರುಕುಲ ಹಾಗೂ ಆಶ್ರಮದಲ್ಲಿ ನಿತ್ಯಾನಂದನ ಅನುಯಾಯಿಗಿದ್ದ ಗಿರೀಶ್ ತುರ್ಲಪತಿ ಸಲ್ಲಿಸಿದ್ದ ದೂರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಅಧಿಕಾರಿಗಳ ವಿರುದ್ಧ ಪೊಕ್ಸೊ ಕಾಯ್ದೆ, ಐಪಿಸಿ ಸೆಕ್ಷನ್ಸ್ ಹಾಗೂ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಆದೇಶಿಸಿದೆ. ಅದರಂತೆ ಅಹಮದಾಬಾದ್ ಜಿಲ್ಲೆಯ ವಿವೇಕಾನಂದ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಈ ಮೂಲಕ ಇನ್‍ಸ್ಪೆಕ್ಟರ್ ಆರ್.ಬಿ.ರಾಣಾ, ಡಿಎಸ್‍ಪಿ ಕೆ.ಟಿ.ಕರಿಮಾರಿಯಾ, ರಿಯಾಜ್ ಸರ್ವಾಯಿಯಾ, ಎಸ್.ಎಚ್.ಶಾರದಾ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ದಿಲೀಪ್ ಮೇರ್, ಸಿಡಬ್ಲ್ಯುಸಿ ಅಧ್ಯಕ್ಷರು ಹಾಗೂ ಸದಸ್ಯರ ಆರೋಪಿ ಸ್ಥಾನದಲ್ಲಿದ್ದಾರೆ.

ವಿಚಾರಣೆ ನಡೆಸಿದ್ದಕ್ಕಾಗಿ ನಿತ್ಯಾನಂದನ ಶಿಷ್ಯ ತುರ್ಲಪತಿ ಪೊಲೀಸರು ಹಾಗೂ ಸಿಡಬ್ಲ್ಯುಸಿ ಸದಸ್ಯರ ವಿರುದ್ಧವೇ ಕೇಸ್ ಹಾಕಿದ್ದಾರೆ. ವಿವೇಕಾನಂದ ನಗರ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಆರ್.ಬಿ.ರಾಣಾ ಹಾಗೂ ಸಿಡಬ್ಲ್ಯುಸಿ ಸದಸ್ಯರು ಸೇರಿದಂತೆ ಪೊಲೀಸ್ ಅಧಿಕಾರಿಗಳು ಆಶ್ರಮದ ಅಪ್ರಾಪ್ತರಿಗೆ ಅಸಭ್ಯ ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲದೆ ತನಿಖಾಧಿಕಾರಿಗಳು ಮಕ್ಕಳಿಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ಹಾಗೂ ಸಿಡಬ್ಲ್ಯುಸಿ ಸದಸ್ಯರು ಮಕ್ಕಳಿಂದ ಅನುಕೂಲಕರ ಹೇಳಿಕೆ ಪಡೆಯಲು ಮಕ್ಕಳನ್ನು ಭಾವನಾತ್ಮಕವಾಗಿ ಬ್ಲ್ಯಾಕ್‍ಮೇಲ್ ಮಾಡಲು ಪ್ರಯತ್ನಿಸಿದರು. ಅಲ್ಲದೆ ಅವರಿಗೆ ಪೋರ್ನ್ ವಿಡಿಯೋ ಹಾಗೂ ಫೋಟೋಗಳನ್ನು ತೋರಿಸಿದ್ದಾರೆ. ಈ ಮೂಲಕ ಮಕ್ಕಳಿಗೆ ಮಾನಸಿಕ ಹಿಮಸೆ ನಿಡಿದ್ದಾರೆ ಎಂದು ತುರ್ಲಪತಿ ಆರೋಪಿಸಿದ್ದಾರೆ.

ಕೋರ್ಟ್ ಆದೇಶದ ಮೇರೆಗೆ ಮಾರ್ಚ್ 6ರಂದು ಪೊಲೀಸ್ ಅಧಿಕಾರಿಗಳು ಸೇರಿ ಒಟ್ಟು 14 ಜನರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದೇವೆ. ಈವರೆಗೆ ದೂರುದಾರರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ. ಮುಂದಿನ ತನಿಖೆಯನ್ನು ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್‍ನಲ್ಲಿ ಇದೇ ಪೊಲೀಸ್ ಠಾಣೆಯಲ್ಲಿ ಮೂವರು ಮಕ್ಕಳನ್ನು ಅಪಹರಿಸಿ ಬಂಧಿಸಿರುವ ಕುರಿತು ನಿತ್ಯಾನಂದನ ವಿರುದ್ಧ ಪ್ರಕರಣ ದಾಖಲಾಗಿತ್ತು. ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಹುಡುಗನನ್ನು ಅಪಹರಿಸಲಾಗಿದೆ ಎಂದು ದೂರು ದಾಖಲಾಗಿತ್ತು. ಅಲ್ಲದೆ ಇತ್ತೀಚೆಗೆ ಮಕ್ಕಳನ್ನು ಒತ್ತಾಯಪೂರ್ವಕವಾಗಿ ಬಂಧನದಲ್ಲಿಟ್ಟುಕೊಂಡಿದ್ದ ನಿತ್ಯಾನಂದ ದೇಶದಿಂದ ಪರಾರಿಯಾಗಿದ್ದಾನೆ. ಹೀಗಾಗಿ ನಿತ್ಯಾನಂದನ ಕುರಿತು ಮಾಹಿತಿ ಕೋರಿ ಇಂಟರ್‍ಪೋಲ್ ಬ್ಲ್ಯೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *