ನಿರ್ದೇಶನದತ್ತ ‘ರಂಗಿತರಂಗ’ ಚಿತ್ರದ ನಟ ನಿರೂಪ್ ಭಂಡಾರಿ

Public TV
1 Min Read

ರಂಗಿತರಂಗ, ರಾಜರಥ, ವಿಕ್ರಾಂತ್ ರೋಣ (Vikrant Rona) ಸಿನಿಮಾಗಳ ಮೂಲಕ ಗಮನ ಸೆಳೆದ ನಿರೂಪ್ ಭಂಡಾರಿ (Nirup Bhandari) ಇದೀಗ ನಟಿಸಿರುವ ಹೊಸ ಸಿನಿಮಾಗಳ ರಿಲೀಸ್‌ಗೆ ಎದುರು ನೋಡ್ತಿದ್ದಾರೆ. ಜೊತೆಗೆ ನಿರ್ದೇಶನದ ಮಾಡುವ ಕನಸಿನ ಬಗ್ಗೆ ನಿರೂಪ್ ಮಾತನಾಡಿದ್ದಾರೆ.

ಮೊದಲಿನಿಂದಲೂ ತಮ್ಮ ನಿರ್ದೇಶನದ ಕಡೆಯಿರುವ ಆಸಕ್ತಿಯ ಬಗ್ಗೆ ನಿರೂಪ್ ಭಂಡಾರಿ ಹಂಚಿಕೊಂಡಿದ್ದಾರೆ. ನಿರ್ದೇಶನದ ಬಗ್ಗೆ ನನಗೆ ಮೊದಲಿನಿಂದಲೂ ಹೆಚ್ಚು ಆಸಕ್ತಿ ಇದೆ. ಈಗಾಗಲೇ ಒಂದು ಸ್ಕ್ರೀಪ್ಟ್ ಬರೆದು ಸಿದ್ಧ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಮೊದಲಿನಿಂದಲೂ ನಿರ್ದೇಶನ ವಿಭಾಗದಲ್ಲಿ ತೊಡಗಿಕೊಳ್ಳುತ್ತಿದ್ದೆ. ಈಗ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರದಲ್ಲೂ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದೇನೆ ಎಂದಿದ್ದಾರೆ.

ಸದ್ಯಕ್ಕೆ ಒಪ್ಪಿಕೊಂಡ ಕೆಲವು ಸಿನಿಮಾಗಳನ್ನು ಪೂರ್ಣಗೊಳಿಸಿದ ಬಳಿಕ ನಿರ್ದೇಶನದ ಕಡೆಗೆ ಹೆಜ್ಜೆ ಹಾಕುವೆ ಎಂದು ಮುಂದಿನ ಯೋಜನೆ ಬಗ್ಗೆ ನಿರೂಪ್ ಮಾತನಾಡಿದ್ದಾರೆ. ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿ ಮುಂದೆ ನಿರ್ದೇಶನ ಮಾಡಬೇಕು ಎಂದುಕೊಂಡಿದ್ದೇನೆ. ನನಗೆ ಕಥೆ ಬರೆಯುವುದು, ಸ್ಕ್ರೀಪ್ಟ್ ರೆಡಿ ಮಾಡುವುದು ಎಂದರೆ ಬಹಳ ಇಷ್ಟ. ಇನ್ನೂ ಹೆಚ್ಚೆಚ್ಚು ಸಿನಿಮಾಗಳಲ್ಲಿ ನಟಿಸಿ, ಮುಂದೆ ನಿರ್ದೇಶನದ ಕಡೆಗೆ ಹೋಗಬೇಕು ಎಂಬ ಆಸೆಯಿದೆ ಎನ್ನುತ್ತಾರೆ ನಿರೂಪ್.

ಇನ್ನೂ ನಾಗತಿಹಳ್ಳಿ ಚಂದ್ರಶೇಖರ್ ಜೊತೆಗಿನ ಸಿನಿಮಾ ಮತ್ತು ಸಾಯಿ ಕುಮಾರ್ ಜೊತೆ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಸಿನಿಮಾ ರಿಲೀಸ್‌ಗೆ ನಟ ಎದುರು ನೋಡ್ತಿದ್ದಾರೆ. ಜೊತೆಗೆ ಹೊಸ ಸಿನಿಮಾವೊಂದನ್ನು ನಿರೂಪ್ ಒಪ್ಪಿಕೊಂಡಿದ್ದಾರೆ. ಸದ್ಯದಲ್ಲೇ ಇದರ ಬಗ್ಗೆ ಮಾಹಿತಿ ಸಿಗಲಿದೆ.

Share This Article