– ದಕ್ಷಿಣ ಭಾರತ ಮಹಿಳೆಗೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನ; ಮಹಿಳಾ ನೇತೃತ್ವಕ್ಕೆ ಆರ್‌ಎಸ್‌ಎಸ್ ಸಮ್ಮತಿ
ನವದೆಹಲಿ: ಈ ಬಾರಿಯ ಮುಂಗಾರು ಅಧಿವೇಶನಕ್ಕೂ ರಾಷ್ಟ್ರೀಯ ಅಧ್ಯಕ್ಷರ (BJP President) ನೇಮಕಕ್ಕೆ ಬಿಜೆಪಿ ಕಸರತ್ತು ಆರಂಭಿಸಿದೆ. ಈ ಬಾರಿ ಮಹಿಳೆಯರಿಗೆ ನಾಯಕತ್ವ ನೀಡುವ ಬಗ್ಗೆ ಚರ್ಚೆ ನಡೆದಿದ್ದು, ಈ ಮೂಲಕ ಬಿಜೆಪಿ ಐತಿಹಾಸಿಕ ನಿರ್ಣಯಕ್ಕೆ ಮುಂದಾಗಿದೆ. ಇದಕ್ಕೆ ಆರ್‌ಎಸ್‌ಎಸ್ ಕೂಡಾ ಸಮ್ಮತಿ ಸೂಚಿಸಿದೆ ಎಂದು ಮೂಲಗಳು ಹೇಳಿವೆ.
ಪಕ್ಷದ ಉನ್ನತ ಹುದ್ದೆಗೆ ನಿರ್ಮಲಾ ಸೀತಾರಾಮನ್ (Nirmala Sitharaman), ಡಿ ಪುರಂದೇಶ್ವರಿ ಮತ್ತು ವನತಿ ಶ್ರೀನಿವಾಸನ್ ಅವರಂತಹ ನಾಯಕಿಯರ ಹೆಸರುಗಳು ಮುನ್ನಲೆಗೆ ಬಂದಿವೆ. ಇದಕ್ಕೆ ಪೂರಕ ಎನ್ನುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರೊಂದಿಗೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದರು.
ಸೀತಾರಾಮನ್ ಅವರನ್ನು ನೇಮಕ ಮಾಡಿದರೆ, ದಕ್ಷಿಣ ಭಾರತದಲ್ಲಿ ಬಿಜೆಪಿ ತನ್ನ ಹೆಜ್ಜೆ ಗುರುತನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಅವರ ನಾಯಕತ್ವವು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿಯೊಂದಿಗೆ ಪಕ್ಷದ ಹೊಂದಾಣಿಕೆಯನ್ನು ಪ್ರತಿ ಬಿಂಬಿಸುತ್ತದೆ. ಸರ್ಕಾರದಲ್ಲಿ ಹಿರಿಯ ನಾಯಕಿಯಾಗಿರುವ ಸೀತಾರಾಮನ್ ಈ ಹಿಂದೆ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಪಕ್ಷದ ಸಂಘಟನೆಯಲ್ಲಿ ಆಳವಾದ ಬೇರುಗಳನ್ನು ಹೊಂದಿದ್ದಾರೆ.
ಮತ್ತೊಂದು ಪ್ರಮುಖ ಹೆಸರು ಬಿಜೆಪಿಯ ಆಂಧ್ರಪ್ರದೇಶದ ಮಾಜಿ ರಾಜ್ಯಾಧ್ಯಕ್ಷೆ ಡಿ.ಪುರಂದೇಶ್ವರಿ. ಬಹುಭಾಷಾ ನಾಯಕಿಯಾಗಿರುವ ಪುರಂದೇಶ್ವರಿ ರಾಜಕೀಯ ವಲಯಗಳಲ್ಲಿ ವಿಶಿಷ್ಟ ವೃತ್ತಿಜೀವನವನ್ನು ಹೊಂದಿದ್ದಾರೆ.
ವನತಿ ಶ್ರೀನಿವಾಸನ್ ಅವರನ್ನೂ ಈ ಹುದ್ದೆಗೆ ಪರಿಗಣಿಸಲಾಗುತ್ತಿದೆ. ತಮಿಳುನಾಡಿನ ವಕೀಲೆಯಿಂದ ರಾಜಕಾರಣಿಯಾಗಿ ಪರಿವರ್ತನೆಗೊಂಡ ಅವರು ಪ್ರಸ್ತುತ ರಾಜ್ಯ ವಿಧಾನಸಭೆಯಲ್ಲಿ ಕೊಯಮತ್ತೂರು ದಕ್ಷಿಣವನ್ನು ಪ್ರತಿನಿಧಿಸುತ್ತಿದ್ದಾರೆ. 1993 ರಲ್ಲಿ ಬಿಜೆಪಿ ಸೇರಿದಾಗಿನಿಂದ, ವನತಿ ರಾಜ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ತಮಿಳುನಾಡಿನ ಉಪಾಧ್ಯಕ್ಷರು ಸೇರಿದಂತೆ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
2020 ರಲ್ಲಿ, ಪಕ್ಷವು ಅವರನ್ನು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಿತು. 2022 ರಲ್ಲಿ ಅವರು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾದರು. ಗಮನಾರ್ಹವಾಗಿ ಆ ಹುದ್ದೆಯಲ್ಲಿರುವ ಮೊದಲ ತಮಿಳು ಮಹಿಳೆಯಾಗಿದ್ದಾರೆ.
ಮಹಿಳಾ ನಾಯಕತ್ವದ ಸಾಂಕೇತಿಕ ಮತ್ತು ಕಾರ್ಯತಂತ್ರದ ಅನುಕೂಲಗಳನ್ನು ಗುರುತಿಸಿ, ಪಕ್ಷದ ಉನ್ನತ ಹುದ್ದೆಗೆ ಮಹಿಳೆಯನ್ನು ನೇಮಿಸುವ ಕಲ್ಪನೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಅನುಮೋದಿಸಿದೆ ಎನ್ನಲಾಗಿದೆ. ಇತ್ತೀಚಿನ ಚುನಾವಣೆಗಳಲ್ಲಿ ವಿಶೇಷವಾಗಿ ಮಹಾರಾಷ್ಟ್ರ, ಹರಿಯಾಣ ಮತ್ತು ದೆಹಲಿಯಂತಹ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸುವಲ್ಲಿ ಮಹಿಳಾ ಮತದಾರರು ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಹಿನ್ನೆಲೆ ಬಿಜೆಪಿ ಈ ಕಾರ್ಯತಂತ್ರಕ್ಕೆ ಮುಂದಾಗಿದೆ ಎನ್ನಲಾಗಿದೆ.