ದೆಹಲಿ ಚುನಾವಣಾ ಕಣಕ್ಕೆ ನಿರ್ಭಯ ಸಂತ್ರಸ್ತೆಯ ತಾಯಿ?

Public TV
2 Min Read

ನವದೆಹಲಿ : ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 7 ವರ್ಷಗಳ ಕಾನೂನು ಹೋರಾಟದ ಬಳಿಕ ಸಂತ್ರಸ್ತೆಗೆ ನ್ಯಾಯ ದೊರಕಿದೆ. ಜನವರಿ 22 ಬೆಳಗ್ಗೆ 7 ಗಂಟೆಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಡೆತ್ ವಾರಂಟ್ ಜಾರಿ ಮಾಡಿದೆ. ನಿರಂತರ ಕಾನೂನು ಹೋರಾಟ ಮಾಡಿದ ಸಂತ್ರಸ್ತೆಯ ತಾಯಿ ಆಶಾದೇವಿ ಅವರ ಧೈರ್ಯವನ್ನು ಇಡೀ ದೇಶವೇ ಮೆಚ್ಚಿ ಅಭಿನಂದಿಸಿದ್ದು ಈ ಜನಪ್ರಿಯತೆಯನ್ನು ಬಳಸಿಕೊಳ್ಳಲು ರಾಜಕೀಯ ಪಕ್ಷಗಳು ಮುಂದಾಗಿವೆ.

ಆಶಾದೇವಿ ದೆಹಲಿಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸುದ್ದಿ ಕೇಳಿ ಬಂದಿದೆ. ಕೆಲವು ಪಕ್ಷಗಳು ಈ ನಿಟ್ಟಿನಲ್ಲಿ ಚರ್ಚೆ ಮಾಡಿದ್ದು, ಟಿಕೆಟ್ ನೀಡುವ ಭರವಸೆ ನೀಡಲಾಗಿದೆ ಎನ್ನಲಾಗುತ್ತಿದೆ.

ದೆಹಲಿಯಲ್ಲಿ ಫೆಬ್ರವರಿ 8 ರಂದು ಮತದಾನಕ್ಕೆ ದಿನಾಂಕ ನಿಗದಿಯಾಗಿದ್ದು, 11 ರಂದು ಫಲಿತಾಂಶ ಹೊರಬರಲಿದೆ. ಇದಕ್ಕೂ ಮೊದಲು ಅಂದರೆ ಜನವರಿ 22 ರಂದು ನಿರ್ಭಯ ದೋಷಿಗಳಿಗೆ ಗಲ್ಲು ಶಿಕ್ಷೆಯಾಗಲಿದೆ. ಈ ವೇಳೆ ಇಡೀ ದೇಶ ಸಂಭ್ರಮವನ್ನು ವ್ಯಕ್ತಪಡಿಸಲಿದೆ.

ಪ್ರಕರಣದಿಂದ ಇಡೀ ದೇಶಕ್ಕೆ ಪರಿಚಯವಾಗಿರುವ ನಿರ್ಭಯ ತಾಯಿ ಆಶಾದೇವಿಯನ್ನು ಚುನಾವಣಾ ಕಣಕ್ಕೆ ಇಳಿಸಿದರೆ ಆ ಕ್ಷೇತ್ರದಲ್ಲಿ ಗೆಲುವು ಖಚಿತ ಮತ್ತು ಪಕ್ಷದ ಕೆಲವು ಕ್ಷೇತ್ರಗಳ ಮೇಲೂ ಇದು ಪರಿಣಾಮ ಬರಲಿದೆ ಎನ್ನುವುದು ರಾಜಕೀಯ ಪಕ್ಷಗಳ ಲೆಕ್ಕಾಚಾರ. ಹೀಗಾಗಿ ಆಶಾದೇವಿ ಮಾತುಕತೆ ನಡೆಸಿದ್ದು, ಯಾವುದು ಅಂತಿಮವಾಗದ ಹಿನ್ನೆಲೆ ಯಾವುದೇ ಪಕ್ಷ ಬಹಿರಂಗವಾಗಿ ಈ ಬಗ್ಗೆ ಮಾತನಾಡಿಲ್ಲ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಆಶಾದೇವಿ, ಮಗಳನ್ನ ಅತ್ಯಾಚಾರ ಮಾಡಿದ ದೋಷಿಗಳು ನೇಣು ಕುಣಿಕೆಯಲ್ಲಿ ನೇತಾಡುವುದನ್ನು ಮೊದಲು ನೋಡಬೇಕು. ಬಳಿಕ ಚುನಾವಣೆ ಸ್ವರ್ಧಿಸುವ ಬಗ್ಗೆ ಯೋಚನೆ ಮಾಡುತ್ತೇನೆ ಎಂದಿದ್ದಾರೆ. ಈ ಮೂಲಕ ಅವರು ಚುನಾವಣೆ ಸ್ಪರ್ಧಿಸುವ ಸಾಧ್ಯತೆಗಳನ್ನು ತಳ್ಳಿ ಹಾಕಿಲ್ಲ.

ದೆಹಲಿಯಲ್ಲಿ ನೇರ ಫೈಟ್ ನೀಡುತ್ತಿರುವ ಬಿಜೆಪಿ ಮತ್ತು ಆಮ್ ಅದ್ಮಿ ಆಶಾದೇವಿ ಅವರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಅವರ ಪರ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದು ಏಳು ವರ್ಷಗಳ ಕಾಲ ಕಾನೂನು ಹೋರಾಟ ಮಾಡಿದ ಅವರ ಧೈರ್ಯವನ್ನು ಹಾಡಿ ಹೊಗಳುತ್ತಿದ್ದಾರೆ. ಕೆಲವು ಗುಪ್ತ ಸಭೆಗಳು ಕೂಡಾ ನಡೆದಿದ್ದು ಗೆಲ್ಲುವ ಕುದುರೆ ಸೆಳೆಯಲು ಎರಡು ಪಾರ್ಟಿಗಳು ನಿರಂತರ ಪ್ರಯತ್ನ ಮಾಡುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *