‘ಕಕ್ಷಿದಾರ ಘಟನಾ ಸ್ಥಳದಲ್ಲೇ ಇರಲಿಲ್ಲ’- ನಿರ್ಭಯಾ ದೋಷಿ ಪರ ವಕೀಲರಿಂದ ಮೇಲ್ಮನವಿ

Public TV
2 Min Read

ನವದೆಹಲಿ: ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳನ್ನು ಮಾರ್ಚ್ 20ರಂದು ಗಲ್ಲಿಗೇರಿಸಲು ಸಿದ್ಧತೆ ನಡೆದಿದೆ. ಆದರೆ ಇದನ್ನು ತಪ್ಪಿಸಲು ಎಲ್ಲಾ ಅಪರಾಧಿಗಳು ವಿಭಿನ್ನ ಕಾನೂನು ಹಕ್ಕುಗಳನ್ನು ಬಳಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಪರಾಧಿ ಮುಖೇಶ್ ಸಿಂಗ್ ಪರ ವಕೀಲ ಎಂ.ಎಲ್.ಶರ್ಮಾ ಅವರು ದೆಹಲಿ ಕೋರ್ಟಿಗೆ ಮಂಗಳವಾರ ಮೇಲ್ಮನವಿ ಸಲ್ಲಿಸಿದ್ದಾರೆ.

‘ಘಟನಾ ಸ್ಥಳದಲ್ಲಿ ಮುಖೇಶ್ ಇರಲಿಲ್ಲ. ಮುಖೇಶ್‍ಗೆ ಜೈಲಿನಲ್ಲಿ ಚಿತ್ರಹಿಂಸೆ ಕೊಟ್ಟು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಎಂ.ಎಲ್.ಶರ್ಮಾ ಮೇಲ್ಮನವಿಯಲ್ಲಿ ಆರೋಪಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ದೆಹಲಿ ನ್ಯಾಯಾಲಯವು ಮಾರ್ಚ್ 20ರಂದು ಮುಂಜಾನೆ 5:30 ಕ್ಕೆ ಮುಖೇಶ್ (32), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಮತ್ತು ಅಕ್ಷಯ್ ಸಿಂಗ್ (31) ಎಂಬ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ವಾರಂಟ್ ಹೊರಡಿಸಿತ್ತು. ಅಷ್ಟೇ ಅಲ್ಲದೆ ಇದಕ್ಕೂ ಮುನ್ನ ಮೂರು ಬಾರಿ ಗಲ್ಲಿಗೇರಿಸುವುದನ್ನು ಮುಂದೂಡಲಾಗಿದೆ.

ದೋಷಿ ಮುಖೇಶ್‍ನನ್ನು ಡಿಸೆಂಬರ್ 17ರಂದು ರಾಜಸ್ಥಾನದಲ್ಲಿ ಬಂಧಿಸಲಾಗಿತ್ತು ಎಂದು ವಕೀಲ ಶರ್ಮಾ ಮಂಗಳವಾರ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ಹೇಳಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಅವನು ಇರಲಿಲ್ಲ. ಆದರೆ ತಿಹಾರ್ ಜೈಲಿನಲ್ಲಿ ಪೊಲೀಸರು ಮುಖೇಶ್‍ಗೆ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂದು ಮೇಲ್ಮನವಿಯಲ್ಲಿ ಆರೋಪಿಸಲಾಗಿದೆ.

ತಿಹಾರ್ ಜೈಲು ಆಡಳಿತ ಅಧಿಕಾರಿಗಳು ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧತೆ ನಡೆಸಿದ್ದಾರೆ. ಉತ್ತರ ಪ್ರದೇಶದ ಮೀರತ್ ನಿವಾಸಿ ಪವನ್ ಜಲ್ಲಾಡ್ ಅವರನ್ನು ಗಲ್ಲಿಗೇರಿಸುವ ಮೂರು ದಿನಗಳ ಮೊದಲು ಅಂದ್ರೆ ಮಾರ್ಚ್ 17ರಂದು ತಿಹಾರ್ ಜೈಲಿಗೆ ಬಂದು ವರದಿ ಸಲ್ಲಿಸುವಂತೆ ಜೈಲು ಅಧಿಕಾರಿಗಳು ಕೋರಿದ್ದಾರೆ. ಪವನ್ ಆಗಮನದ ನಂತರ ಅಧಿಕಾರಿಗಳು ಅಪರಾಧಿಗಳನ್ನು ನೇಣು ಹಾಕಲು ನಡೆಸಿದ ಸಿದ್ಧತೆಯನ್ನು ಪರೀಕ್ಷಿಸುತ್ತಾರೆ.

ಏನಿದು ಪ್ರಕರಣ?:
ದೆಹಲಿಯಲ್ಲಿ 2012ರ ಡಿಸೆಂಬರ್ 16ರ ರಾತ್ರಿ ಬಸ್‍ನಲ್ಲಿ ಚಲಿಸುತ್ತಿದ್ದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ 6 ಜನರು ಅತ್ಯಾಚಾರ ಎಸಗಿದ್ದರು. ತೀವ್ರ ಗಾಯಗೊಂಡಿದ್ದ ನಿರ್ಭಯಾ ಸಿಂಗಾಪುರದಲ್ಲಿ ಡಿಸೆಂಬರ್ 26ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. 2013ರ ಸೆಪ್ಟೆಂಬರ್ ಅಂದ್ರೆ ಘಟನೆ ನಡೆದ 9 ತಿಂಗಳ ನಂತರ ನ್ಯಾಯಾಲಯವು 5 ಅಪರಾಧಿಗಳಾದ ರಾಮ್ ಸಿಂಗ್, ಪವನ್, ಅಕ್ಷಯ್, ವಿನಯ್ ಮತ್ತು ಮುಖೇಶ್‍ಗೆ ಮರಣದಂಡನೆ ವಿಧಿಸಿತ್ತು. 2014ರ ಮಾರ್ಚ್ ನಲ್ಲಿ ಹೈಕೋರ್ಟ್ ಮತ್ತು 2017ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಮರಣದಂಡನೆಯನ್ನು ಎತ್ತಿಹಿಡಿದಿದ್ದವು. ವಿಚಾರಣೆಯ ವೇಳೆ ಮುಖ್ಯ ಅಪರಾಧಿ ರಾಮ್ ಸಿಂಗ್ ತಿಹಾರ್ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದ. ಓರ್ವ ಅಪ್ರಾಪ್ತ ವಯಸ್ಕನಾಗಿದ್ದರಿಂದ ಆತನಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *