ಕೊರೊನಾದಿಂದಾಗಿ ಜೆರಾಕ್ಸ್ ಆಗಿಲ್ಲ – ಮಧ್ಯರಾತ್ರಿ ಹೈಡ್ರಾಮಾ, ನಿರ್ಭಯಾ ರೇಪಿಸ್ಟ್‌ಗಳ ಅರ್ಜಿ ವಜಾ

Public TV
2 Min Read

ನವದೆಹಲಿ: ಕೊನೆಯ ಕ್ಷಣದಲ್ಲಿ ಮಧ್ಯರಾತ್ರಿಯ ವೇಳೆ ನಿರ್ಭಯಾ ರೇಪಿಸ್ಟ್‌ಗಳು ಹೈಡ್ರಾಮಾ ಮಾಡಿದ್ದರೂ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

ಪಟಿಯಾಲ ಕೋರ್ಟಿನಲ್ಲಿ ನಮ್ಮ ಅರ್ಜಿ ವಜಾಗೊಂಡಿದೆ. ಹೀಗಾಗಿ ತುರ್ತಾಗಿ ನಮ್ಮ ಅರ್ಜಿಯನ್ನು ವಿಚಾರಣೆ ನಡೆಸಿ ಶುಕ್ರವಾರ ಬೆಳಗ್ಗೆ ನಿಗದಿಯಾಗಿರುವ ಗಲ್ಲು ಶಿಕ್ಷೆಗೆ ತಡೆ ನೀಡಬೇಕೆಂದು ಮನವಿ ಮಾಡಿದರು. ಆದರೆ ಈ ಮನವಿಯನ್ನು ಪುರಸ್ಕರಿಸದ ನ್ಯಾ. ಮನಮೋಹನ್ ಅವರು ಅರ್ಜಿಯನ್ನು ವಜಾಗೊಳಿಸಿದರು. ಇದನ್ನೂ ಓದಿ: ನಿರ್ಭಯಾ ದೋಷಿಗಳಿಗೆ ನಾಳೆಯೇ ಗಲ್ಲು- ಕಾನೂನು ತಜ್ಞರು ಏನು ಹೇಳುತ್ತಾರೆ?

ದೆಹಲಿ ಸರ್ಕಾರದ ಪರ ವಕೀಲ ರಾಹುಲ್ ಮೆಹ್ರಾ ವಾದಿಸಿದರೆ ಅಪರಾಧಿಗಳ ಪರ ಎ.ಪಿ ಸಿಂಗ್ ವಾದ ಮಂಡಿಸಿದರು.

ವಿಚಾರಣೆ ಹೀಗಿತ್ತು:
ಪಟಿಯಾಲ ಕೋರ್ಟ್ ನಮ್ಮ ಅರ್ಜಿಯನ್ನು ವಜಾಗೊಳಿಸಿದೆ. ಹೀಗಾಗಿ ರಾತ್ರಿ ನಮ್ಮ ಕಕ್ಷಿದಾರರ ಅರ್ಜಿಯನ್ನು ವಿಚಾರಣೆ ನಡೆಸಬೇಕೆಂದು ಎಪಿ ಸಿಂಗ್ ವಾದ ಮಂಡಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಹುಲ್ ಮೆಹ್ರಾ ಎಲ್ಲ ಕಾನೂನು ಹೋರಾಟಗಳು ಅಂತ್ಯಗೊಂಡಿದೆ. ಹೈಕೋರ್ಟ್ ಮುಂದೆ ಗಲ್ಲು ಶಿಕ್ಷೆಗೆ ತಡೆ ಕೇಳುವಂತಿಲ್ಲ. ಸುಪ್ರೀಂಕೋರ್ಟ್ ಜನವರಿಯಲ್ಲೇ ಆದೇಶವನ್ನು ಎತ್ತಿ ಹಿಡಿದಿದೆ. ಡೆತ್ ವಾರೆಂಟ್ ತಡೆ ಕೋರಿ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಬಹುದು ಎಂದು ದೆಹಲಿ ಸರ್ಕಾರದ ಪರ ವಕೀಲ ರಾಹುಲ್ ಮೆಹ್ರಾ ವಾದಿಸಿದರು.

ಈ ವೇಳೆ ಎಪಿ ಸಿಂಗ್ ಕೋರ್ಟ್ ಮುಂದೆ ದೋಷಿಗಳಿಗೆ ವಿವಿಧ ಅರ್ಜಿಗಳ ಬಾಕಿ ಉಳಿದಿರುವ ಬಗ್ಗೆ ಮಾಹಿತಿ ನೀಡಿದರು. ಅಷ್ಟೇ ಅಲ್ಲದೇ ಅಕ್ಷಯ್ ಕುಮಾರ್ ಪತ್ನಿ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಉಲ್ಲೇಖಿಸಿದರು. ಇದಕ್ಕೆ ರಾಹುಲ್ ಮೆಹ್ರಾ, ಈ ಪ್ರಕರಣಕ್ಕೂ ವಿಚ್ಛೇದನಕ್ಕೂ ಸಂಬಂಧ ಇಲ್ಲ ಎಂದು ಹೇಳಿದರು. ಈ ಆಕ್ಷೇಪಕ್ಕೆ ನ್ಯಾ.ಮನಮೋಹನ್ ಅವರು ಒಪ್ಪಿಗೆ ಸೂಚಿಸಿದರು.

ನಂತರ ದೋಷಿಗಳಿಗೆ ಯಾವುದೇ ಕ್ರಿಮಿನಲ್ ಪ್ರಕರಣದ ಹಿನ್ನೆಲೆ ಇಲ್ಲ. ಸಾಕ್ಷಿ ವಿರುದ್ಧ ನಡೆಸಿದ ಕುಟುಕು ಕಾರ್ಯಚರಣೆಯನ್ನು ಪ್ರಸಾರ ಮಾಡಲು ಅವಕಾಶ ಸಿಕ್ಕಿಲ್ಲ. ಪ್ರಕರಣ ಮೇಲೆ ಪರಿಣಾಮ ಬೀರುವ ಕಾರಣ ನೀಡಿ ಪ್ರಸಾರ ಮಾಡಿಲ್ಲ. ಈ ಪ್ರಕರಣ ಹೈಕೋರ್ಟಿನಲ್ಲಿ ಬಾಕಿ ಉಳಿದಿದೆ ಎಂದು ಎ.ಪಿ ಸಿಂಗ್ ವಾದ ಮಾಡಿದರು.

ಅಷ್ಟೇ ಅಲ್ಲದೇ ನನ್ನ ಹತ್ತಿರ ಎಲ್ಲ ದಾಖಲೆಗಳಿದೆ. ಅದನ್ನು ಈಗ ನ್ಯಾಯಾಲಯಕ್ಕೆ ನೀಡಲು ಸಾಧ್ಯವಾಗುತ್ತಿಲ್ಲ. ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಜೆರಾಕ್ಸ್ ಅಂಗಡಿ ತೆರೆಯದ ಕಾರಣ ದಾಖಲೆ ತರಲು ಸಾಧ್ಯವಾಗಿಲ್ಲ. ಮೂರು ದಿನ ಅವಕಾಶ ನೀಡಿ ಎಂದು ಮತ್ತೊಂದು ಬಲವಾದ ಕಾರಣ ನೀಡಿದರು. ಈ ಕಾರಣಕ್ಕೆ ಸಿಟ್ಟಾದ ನ್ಯಾಯಾಧೀಶರು ಇದೊಂದು ಅಡಿಪಾಯ ಇಲ್ಲದ ಅರ್ಜಿ ಎಂದು ಹೇಳಿ ಚಾಟಿ ಬೀಸಿದರು.

ಸಮಯ ರಾತ್ರಿ 11 ಆಗುತ್ತಿದೆ. ಬೆಳಗ್ಗೆ 5:30ಕ್ಕೆ ಶಿಕ್ಷೆ ಇದೆ. ಗಲ್ಲು ಶಿಕ್ಷೆಗೆ ತಡೆ ನೀಡಲು ಯಾವುದಾದರೂ ಒಂದು ಮುಖ್ಯ ಅಂಶವನ್ನು ತಿಳಿಸಿ ಎಂದು ನ್ಯಾಯಾಧೀಶರು ವಕೀಲರಿಗೆ ಸೂಚಿಸಿದರು. ಇದಕ್ಕೆ ಎಪಿ ಸಿಂಗ್ ಒಮ್ಮೆ ಅಪರಾಧಿಗಳ ಕುಟುಂಬನ್ನು ಗಮನಿಸಿ, ಅಷ್ಟೇ ಅಲ್ಲದೇ ಹಿಂದೆ ಇವರು ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿಲ್ಲ. ಉದ್ದೇಶಪೂರ್ವಕವಾಗಿ ತಪ್ಪು ಮಾಡಿಲ್ಲ ಎಂದು ಹೇಳಿ ಗಲ್ಲು ಶಿಕ್ಷೆಗೆ ತಡೆ ನೀಡಬೇಕೆಂದು ಮನವಿ ಮಾಡಿದರು. ಆದರೆ ಈ ಮನವಿಯನ್ನು ತಿರಸ್ಕರಿಸಿದ ನ್ಯಾ. ಮನಮೋಹನ್ ಅರ್ಜಿಯನ್ನು ವಜಾಗೊಳಿಸಿದರು.

 

Share This Article
Leave a Comment

Leave a Reply

Your email address will not be published. Required fields are marked *