ನಿರ್ಭಯಾ ಪ್ರಕರಣ- ಅಪರಾಧಿಗಳಿಗೆ ಗಲ್ಲು ಶಿಕ್ಷೆ ಮತ್ತಷ್ಟು ದಿನ ಮುಂದೂಡಿಕೆ ಸಾಧ್ಯತೆ

Public TV
2 Min Read

– ದೋಷಿ ಅಕ್ಷಯ್ ಕ್ಷಮಾಧಾನ ಅರ್ಜಿ ಸಲ್ಲಿಕೆ

ನವದೆಹಲಿ: ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದ ದೋಷಿಗಳು ಗಲ್ಲು ಶಿಕ್ಷಯನ್ನು ಮುಂದೂಡಲು ಪದೇ ಪದೇ ಯತ್ನಿಸುತ್ತಿದ್ದಾರೆ. ಅಪರಾಧಿಗಳ ಪೈಕಿ ಓರ್ವನಾದ ಅಕ್ಷಯ್ ಕುಮಾರ್ ಠಾಕೂರ್ (31) ರಾಷ್ಟ್ರಪತಿಗಳಿಗೆ ಕ್ಷಮಾದಾನ ಮನವಿ ಸಲ್ಲಿಸಿದ್ದಾನೆ.

ಅಪರಾಧಿಗಳು ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ರಾಷ್ಟ್ರಪತಿಗಳಿಗೆ ಕ್ಷಮಾದಾನ ಮನವಿ ಸಲ್ಲಿಸುತ್ತಿದ್ದಾರೆ. ಇದರಿಂದಾಗಿ ದೋಷಿಗಳಿಗೆ ಗಲ್ಲು ಶಿಕ್ಷೆಯು ಮತ್ತಷ್ಟು ದಿನ ಮುಂದೂಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದನ್ನೂ ಓದಿ: ನಿರ್ಭಯಾ ಪ್ರಕರಣ: ಕೇಂದ್ರದ ಅರ್ಜಿ ವಿಚಾರಣೆ ವೇಳೆ ಪ್ರಜ್ಞೆ ತಪ್ಪಿದ ನ್ಯಾಯಾಧೀಶೆ

ಪ್ರಕರಣದ ಅಪರಾಧಿಗಳ ಪೈಕಿ ಒಬ್ಬನಾಗಿರುವ ವಿನಯ್ ಶರ್ಮಾ ತಿಹಾರ್ ಜೈಲಿನಲ್ಲಿ ಫೆಬ್ರವರಿ 16ರಂದು ಹೈ ಡ್ರಾಮಾ ನಡೆಸಿದ್ದ. ಗೋಡೆಗೆ ತಲೆ ಚಚ್ಚಿಕೊಳ್ಳುವ ಮೂಲಕ ನಾಟಕವಾಡಿದ್ದ. ತಕ್ಷಣವೇ ಜೈಲು ಅಧಿಕಾರಿಗಳು ಆತನನ್ನು ತಡೆದಿದ್ದರು.

ಇತ್ತೀಚೆಗಷ್ಟೇ ವಿನಯ್ ಪರ ವಕೀಲರು ಕೋರ್ಟಿಗೆ ಹೇಳಿಕೆ ನೀಡಿದ್ದು, ವಿನಯ್ ಜೈಲಿನಲ್ಲಿಯೇ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾನೆ. ಅಲ್ಲದೆ ಸೆಲ್‍ನಲ್ಲಿ ವಿನಯ್ ಮೇಲೆ ಹಲ್ಲೆ ನಡೆಸಲಾಗಿದ್ದು, ತಲೆಗೆ ಪೆಟ್ಟು ಬಿದ್ದಿದೆ. ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ. ಆದ್ದರಿಂದ ಮರಣದಂಡನೆ ವಿಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಹೇಳಿಕೆ ನಂತರ ಜೈಲು ಅಧಿಕಾರಿಗೆ ಈ ಕುರಿತು ಕೋರ್ಟ್ ಸಹ ಸೂಚನೆ ನೀಡಿದ್ದು, ಕಾನೂನಿನ ಪ್ರಕಾರ ವಿನಯ್ ಕುರಿತು ಕಾಳಜಿ ವಹಿಸುವಂತೆ ಆದೇಶಿಸಿದೆ.

ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಮಾರ್ಚ್ 3ರಂದು ಗಲ್ಲಿಗೇರಿಸುವಂತೆ ದೆಹಲಿ ನ್ಯಾಯಾಲಯ ಫೆಬ್ರವರಿ 17 ಆದೇಶಿಸಿದೆ. ಅಲ್ಲದೆ ಹೊಸ ಮರಣದಂಡನೆ ಜಾರಿಗೊಳಿಸಿದ ನಂತರ ಗಲ್ಲು ಶಿಕ್ಷೆ ಮುಂದೂಡುವುದು ಸಂತ್ರಸ್ತರ ಹಕ್ಕುಗಳಿಗೆ ಚ್ಯುತಿ ತಂದಂತೆ ಎಂದು ದೆಹಲಿ ನ್ಯಾಯಾಲಯ ವ್ಯಾಖ್ಯಾನಿಸಿದೆ.

ಮುಖೇಶ್ ಕುಮಾರ್ ಸಿಂಗ್(32), ಪವನ್ ಗುಪ್ತಾ(25), ವಿನಯ್ ಕುಮಾರ್ ಶರ್ಮಾ(26), ಅಕ್ಷಯ್ ಕುಮಾರ್(31) ಈ ನಾಲ್ವರು ಅಪರಾಧಿಗಳನ್ನು ಮಾರ್ಚ್ 3ರಂದು ಬೆಳಗ್ಗೆ 6ಕ್ಕೆ ಗಲ್ಲಿಗೇರಿಸುವಂತೆ ಕೋರ್ಟ್ ಆದೇಶಿಸಿದೆ. ಇದು ಕೋರ್ಟ್ ನೀಡುತ್ತಿರುವ ಮೂರನೇ ಆದೇಶವಾಗಿದ್ದು, ಈ ಬಾರಿಯಾದರೂ ಗಲ್ಲಿಗೇರಿಸಲಾಗುತ್ತದೆಯೇ ಎಂಬುದು ಸಂತ್ರಸ್ತರ ಪ್ರಶ್ನೆಯಾಗಿದೆ.

ಜನವರಿ 7ರಂದು ಕೋರ್ಟ್ ಈ ನಾಲ್ವರು ಆರೋಪಿಗಳಿಗೆ ಮರಣದಂಡನೆ ವಿಧಿಸಿ ಅಡಿಷನಲ್ ಸೆಶನ್ ಜಡ್ಜ್ ಧರ್ಮೇಂದ್ರ ರಾಣಾ ಅವರು ಆದೇಶ ಹೊರಡಿಸಿದ್ದರು. ನಂತರ ಜನವರಿ 17 ಹಾಗೂ 31ರಂದು ನಡೆದ ವಿಚಾರಣೆ ವೇಳೆ ಶಿಕ್ಷೆಯನ್ನು ಮುಂದೂಡಲಾಗಿದೆ. ಅದರಂತೆ ಮಾರ್ಚ್ 3ರಂದು ಬೆಳಗ್ಗೆ 6ಕ್ಕೆ ಗಲ್ಲಿಗೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *