ಪಠಾಣ್‍ಕೋಟ್ ಹುತಾತ್ಮ ಯೋಧ ನಿರಂಜನ್‍ಗೆ ರಾಜ್ಯ ಸರ್ಕಾರದಿಂದ ಅವಮಾನ

Public TV
2 Min Read

ಬೆಂಗಳೂರು: ಕರುನಾಡ ಮಣ್ಣಿನ ವೀರ ಯೋಧ ಹುತಾತ್ಮ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಸಮಾಧಿಯಲ್ಲೂ ರಾಜಕೀಯದಾಟ, ರಸ್ತೆಗೆ ಯೋಧನ ಹೆಸರಿಡಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸಚಿವರೇ ಅಡ್ಡ, ಬೆಂಗಳೂರಿನ ವೀರ ಯೋಧನಿಗೆ ಕನ್ನಡ ಮಣ್ಣಿನಲ್ಲೇ ಅವಮಾನ.

ಹೌದು. ಪಂಜಾಬಿನಲ್ಲಿರುವ ವಾಯುನೆಲೆ ಪಠಾಣ್ ಕೋಟ್‍ನಲ್ಲಿ ಲೆಫ್ಟಿನೆಂಟ್ ನಿರಂಜನ್ ಎದೆಯುಬ್ಬಿಸಿ ಉಗ್ರರ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ್ದರು. ಕನ್ನಡ ಮಣ್ಣಿನ ಯೋಧ, ನಮ್ಮ ಬೆಂಗಳೂರಿನ ಹೆಮ್ಮೆಯ ನಿರಂಜನ್ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟರು.

ಆದರೆ ನಮ್ಮ ನೀಚ ರಾಜಕೀಯ ವ್ಯವಸ್ಥೆ ನಿರಂಜನ್ ಹೆಸರನ್ನು ರಸ್ತೆಗೆ ಇಡುವುದಕ್ಕೆ ರಾಜಕೀಯದಾಟ ಆಡುತ್ತಿದೆ. ದೊಡ್ಡ ಬೊಮ್ಮಸಂದ್ರ ಹೆಬ್ಬಾಗಿಲಿನಿಂದ ವಿದ್ಯಾರಣ್ಯಪುರದ ನಂಜಪ್ಪ ವೃತ್ತದವರೆಗಿನ ಮುಖ್ಯರಸ್ತೆಗೆ ನಿರಂಜನ್ ಹೆಸರು ಇಡೋದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ರು. ಅಂತಿಮ ತೀರ್ಮಾನವೂ ಆಗಿತ್ತು.

ಈ ಮಧ್ಯೆ ಇದಕ್ಕಿದ್ದ ಹಾಗೆ ಕೃಷಿ ಸಚಿವ ಕೃಷ್ಣಬೈರೇಗೌಡರು ಯೋಧನ ಹೆಸರು ಬೇಡ, ಸ್ವಾತಂತ್ರ್ಯ ಹೋರಾಟಗಾರ ಪೇಟಾ ಸಿದ್ದಪ್ಪನ ಹೆಸರು ಇಡಿ ಎಂದು ಬಿಬಿಎಂಪಿಗೆ ಆದೇಶ ಕೊಟ್ಟು ಪತ್ರ ಬರೆದಿದ್ದಾರೆ. ಅಸಲಿಗೆ ಈ ಹೆಸರಿನ ಸ್ವಾತಂತ್ರ್ಯ ಹೋರಾಟಗಾರರು ಯಾರು ಇಲ್ಲ ಎಂದು ದೊರೆಸ್ವಾಮಿಯೇ ಹೇಳಿದ್ದಾರಂತೆ. ಆದ್ರೆ ಮಿನಿಸ್ಟರ್ ಮಾತನ್ನು ಪಾಲಿಸೋದಕ್ಕೆ ಮೇಯರ್ ಅವರು ಮುಂದಾಗುತ್ತಿದ್ದಾರೆ ಎಂದು ನಿರಂಜನ್ ಸ್ನೇಹಿತ ಶಶಾಂಕ್ ಹೇಳಿದ್ದಾರೆ.

ಶೌರ್ಯ ಚಕ್ರ ಪ್ರಶಸ್ತಿ ವಾಪಾಸ್:
ಹರ್ಯಾಣ ಸರ್ಕಾರ ನಿರಂಜನ್ ಅವರ ಹೆಸರಿನಲ್ಲಿ ಆಡಿಟೋರಿಯಂ ಸ್ಥಾಪನೆ ಮಾಡಿದೆ. ಆದರೆ ಇಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸಚಿವರಿಗೆ ನಿಜಕ್ಕೂ ಮಾನ ಮರ್ಯಾದೆ ಇಲ್ಲ, ನಿರಂಜನ್ ಹೆತ್ತವರು ಈ ಬೆಳವಣಿಗೆ ನೋಡಿ ಕಣ್ಣೀರಿಡುತ್ತಿದ್ದಾರೆ. ಕೇಂದ್ರ ಸರ್ಕಾರ ನಿರಂಜನ್‍ಗೆ ಶೌರ್ಯ ಚಕ್ರ ಪ್ರಶಸ್ತಿ ನೀಡಿದೆ. ಆದ್ರೇ ನಮ್ಗೆ ಈಗ ಬೇಸರವಾಗಿದೆ, ಇದನ್ನು ವಾಪಾಸ್ ಮಾಡುವ ಬಗ್ಗೆಯೂ ಯೋಚನೆ ಮಾಡುತ್ತೇವೆ ಅಂತಾ ಶಶಾಂಕ್ ಹೇಳಿದ್ದಾರೆ.

ನಿರಂಜನ್ ಯಾರು?
2016ರ ಜನವರಿ 1 ಮತ್ತು 2ರ ನಡುರಾತ್ರಿಯಲ್ಲಿ ಉಗ್ರರು ಪಠಾಣ್‍ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದಾಗ, ಎನ್‍ಎಸ್‍ಜಿ ಯೋಧರನ್ನು ಅಲ್ಲಿಗೆ ಕಳುಹಿಸಲಾಯಿತು. ಎನ್‍ಎಸ್‍ಜಿ ತಂಡದಲ್ಲಿ ಕರ್ನಾಟಕದ ನಿರಂಜನ್ ಅವರೂ ಇದ್ದರು. ದಾಳಿ ಎಸಗಿದ್ದ ಉಗ್ರನ ಬಳಿಯಿದ್ದ ಗ್ರೆನೇಡ್ ನಿಷ್ಕ್ರಿಯಗೊಳಿಸಲು ನಿರಂಜನ್ ಮುಂದಾಗಿದ್ದ ವೇಳೆ ಅದು ಸ್ಫೋಟಗೊಂಡಿತ್ತು. ಗ್ರೆನೇಡ್ ಸ್ಫೋಟದಿಂದಾಗಿ ಅವರ ಶ್ವಾಸಕೋಶಗಳು ಒಡೆದಿದ್ದವು. ಆಸ್ಪತ್ರೆಗೆ ಸಾಗಿಸುವ ಮುನ್ನವೇ ನಿರಂಜನ್ ಹುತಾತ್ಮರಾಗಿದ್ದರು. ನಿರಂಜನ್ ಅವರು ಅಮೆರಿಕದ ಎಫ್‍ಬಿಐನಿಂದ ತರಬೇತಿ ಪಡೆದಿದ್ದರು. ಪಾಲಕ್ಕಾಡ್ ಜಿಲ್ಲೆಯ ಮುನ್ನರಾರ್ ಕಾಡ್ ಮೂಲದ ನಿರಂಜನ್, ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲೇ. 40 ವರ್ಷದ ಹಿಂದೆಯೇ ಅವರ ಕುಟುಂಬವು ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿತ್ತು.

 

 

 

Share This Article
Leave a Comment

Leave a Reply

Your email address will not be published. Required fields are marked *