ನವದೆಹಲಿ: 2017 ರಲ್ಲಿ ಯೆಮೆನ್ (Yemen) ನಾಗರಿಕನ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಕೇರಳದ ನರ್ಸ್ (Kerala Nurse) ನಿಮಿಷಾ ಪ್ರಿಯಾ (Nimisha Priya) ಅವರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಭಾರತ ಸರ್ಕಾರ ಶಕ್ತಿಮೀರಿ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಆದರೆ, ಈ ಸಂದರ್ಭದಲ್ಲಿ ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳಿಂದ ನಡೆಯುವ ಸಮಾನಾಂತರ ಮಾತುಕತೆಗಳು ಸೂಕ್ಷ್ಮ ರಾಜತಾಂತ್ರಿಕ ಪ್ರಯತ್ನಗಳಿಗೆ ಅಡಚಣೆ ಉಂಟು ಮಾಡಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ನ್ಯಾ. ವಿಕ್ರಮ್ ನಾಥ್ ಮತ್ತು ನ್ಯಾ. ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠದ ಮುಂದೆ ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ಆರ್. ವೆಂಕಟರಾಮನಿ ವಾದ ಮಂಡಿಸಿದರು. ನಿಮಿಷಾ ಪ್ರಿಯಾ ಸುರಕ್ಷಿತವಾಗಿ ವಾಪಸ್ ಬರಬೇಕೆಂದು ನಾವು ಆಶಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕೇರಳ ನರ್ಸ್ ನಿಮಿಷಾ ಪ್ರಿಯಾಗೆ ಮರಣದಂಡನೆ ಮುಂದೂಡಿಕೆ
ನಿಮಿಷಾ ಪ್ರಿಯಾ ಅವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿರುವ ಸೇವ್ ನಿಮಿಷಾ ಪ್ರಿಯಾ ಇಂಟರ್‌ನ್ಯಾಷನಲ್ ಆಕ್ಷನ್ ಕೌನ್ಸಿಲ್ ಎಂಬ ಸಂಸ್ಥೆಯು ಯೆಮೆನ್‌ಗೆ ತೆರಳಲು ಅನುಮತಿ ಕೋರಿತ್ತು. ಆದರೆ, ಕೋರ್ಟ್ ಈ ಅನುಮತಿಯನ್ನು ನೀಡಲು ನಿರಾಕರಿಸಿತು. ಸಂಸ್ಥೆಯು ನೇರವಾಗಿ ಸರ್ಕಾರವನ್ನು ಸಂಪರ್ಕಿಸಿ ಔಪಚಾರಿಕವಾಗಿ ಮನವಿ ಸಲ್ಲಿಸಬೇಕೆಂದು ಸೂಚಿಸಿತು. ಈ ಮನವಿಯನ್ನು ಸರ್ಕಾರವು ತನ್ನದೇ ಆದ ಗುಣಮಟ್ಟದ ಆಧಾರದ ಮೇಲೆ ಪರಿಗಣಿಸಬೇಕೆಂದು ಕೋರ್ಟ್ ಆದೇಶಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 14ಕ್ಕೆ ಮುಂದೂಡಲಾಗಿದೆ.
ಈ ಹಿಂದೆ ನಿಮಿಷಾ ಪ್ರಿಯಾ ಅವರಿಗೆ ಜುಲೈ 16ಕ್ಕೆ ಗಲ್ಲು ಶಿಕ್ಷೆಯನ್ನು ನಿಗದಿಪಡಿಸಲಾಗಿತ್ತು. ಸದ್ಯ ಅವರು ಯೆಮೆನ್‌ನ ರಾಜಧಾನಿ ಸನಾದಲ್ಲಿರುವ ಜೈಲಿನಲ್ಲಿದ್ದಾರೆ. ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ನರ್ಸ್ ಪ್ರಿಯಾ, 2017ರಲ್ಲಿ ತನ್ನ ಯೆಮೆನ್ ಪ್ರಜೆಯನ್ನು ಕೊಲೆ ಮಾಡಿದ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದರು. 2020ರಲ್ಲಿ ಪ್ರಿಯಾ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು. ಆಕೆಯ ಅಂತಿಮ ಮೇಲ್ಮನವಿಯನ್ನು 2023 ರಲ್ಲಿ ತಿರಸ್ಕರಿಸಲಾಯಿತು. ಇದನ್ನೂ ಓದಿ: ಇದು ಸೂಕ್ಷ್ಮ ವಿಷಯ, ಭಾರತ ಅಗತ್ಯವಿರುವ ಎಲ್ಲಾ ಸಹಾಯ ನೀಡುತ್ತಿದೆ: ಕೇರಳ ನರ್ಸ್ ಪ್ರಕರಣದ ಬಗ್ಗೆ MEA ಪ್ರತಿಕ್ರಿಯೆ