ಜ್ಯೂಸ್ ಎಂದು ನೀಲಗಿರಿ ತೈಲ ಕುಡಿದ ಬಾಲಕಿ ಸಾವು!

Public TV
1 Min Read

ಮೈಸೂರು: ನೀಲಗಿರಿ ತೈಲವನ್ನು ಮನೆಯಲ್ಲಿ ಎಲ್ಲಂದರಲ್ಲಿ ಇಡುವ ಪೋಷಕರು ಈ ಸುದ್ದಿಯನ್ನು ಓದಲೇ ಬೇಕು. ನೀಲಗಿರಿ ತೈಲ ಕುಡಿದು 5 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಕುಶಾಲನಗರ ತಾಲೂಕು ಕೂಡಿಗೆ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಕೂಡಿಗೆ ಕೊಪ್ಪಲು ಗ್ರಾಮದ ಪ್ರಸನ್ನ ಕುಮಾರ್ ಎಂಬವರ ಮಗಳು ವರ್ಷಿತ (5) ಸಾವನ್ನಪ್ಪಿದ ದುರ್ದೈವಿ ಬಾಲಕಿ. ಜ್ಯೂಸ್ ಎಂದು ಭಾವಿಸಿ ನೀಲಗಿರಿ ತೈಲ ಕುಡಿದು ಅಸ್ವಸ್ಥಳಾದ ವರ್ಷಿತಾಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವರ್ಷಿತಾ ಸಾವನ್ನಪ್ಪಿದ್ದಾಳೆ.

 

ನೀಲಗಿರಿ ತೈಲವನ್ನ ಕುಡಿದ ವರ್ಷಿತಾಳನ್ನು ಆಸ್ಪತ್ರೆಗೆ ಕರೆದೊಯ್ಯಲು 108 ಆಂಬ್ಯುಲೆನ್ಸ್ ಕರೆ ಮಾಡಿದ್ದೆ. ಅವರು ಮೈಸೂರಿನ ಆಸ್ಪತ್ರೆಯಿಂದ ಅಂಬುಲೆನ್ಸ್ ಕಳಿಸುವಂತೆ ತಿಳಿಸುತ್ತಾರೆ. ಸಮಯಕ್ಕೆ ಸರಿಯಾಗಿ ಅಂಬುಲೆನ್ಸ್ ಗ್ರಾಮಕ್ಕೆ ಬರಲಿಲ್ಲ. ಅಷ್ಟೇ ಅಲ್ಲದೇ ವಾಹನದಲ್ಲಿ ಆಮ್ಲಜನಕ ಸೇರಿದಂತೆ ಸೂಕ್ತ ಸೌಲಭ್ಯಗಳಿರಲಿಲ್ಲ. ಇದರಿಂದಾಗಿ ವರ್ಷಿತಾ ಸಾವು ಬದುಕಿನ ಮಧ್ಯೆ ಹೋರಾಡುವ ಪರಿಸ್ಥಿತಿ ಎದುರಾಯಿತು. ಬಳಿಕ ಆಸ್ಪತ್ರೆಗೆ ತಲುಪಿದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ಮೃತ ಬಾಲಕಿ ತಂದೆ ಪ್ರಸನ್ನಕುಮಾರ್ ಆರೋಪಿಸಿದ್ದಾರೆ.

ಹೆಸರಿಗೆ ಮಾತ್ರ ಅಂಬುಲೆನ್ಸ್ ವ್ಯವಸ್ಥೆ ಇದೆ. ಅದರಲ್ಲಿ ಅಗತ್ಯ ಚಿಕಿತ್ಸಾ ಸಾಮಗ್ರಿಗಳು ಹಾಗೂ ಆಮ್ಲಜನಕ ಇಟ್ಟಿಲ್ಲ. ಇವರು ರೋಗಿಗಳ ಜೀವನದ ಜೊತೆಗೆ ಆಟವಾಡುತ್ತಿದ್ದಾರೆ ಎಂದು ದೂರಿದರು.

ಮಗಳಿಗೆ ಗಾಯವಾಗಿತ್ತು. ಅದಕ್ಕೆ ಹಚ್ಚಿಕೊಳ್ಳಲು ನೀಲಗಿರಿ ತೈಲವನ್ನು ಮನೆಯಲ್ಲಿ ಇಡಲಾಗಿತ್ತು. ವರ್ಷಿತಾಗೆ ಜ್ಯೂಸ್ ಅಂದ್ರೆ ತುಂಬಾ ಇಷ್ಟ. ಪ್ರಸನ್ನಕುಮಾರ್ ಮಗಳಿಗೆ ಜ್ಯೂಸ್ ತಂದು ಕೊಡುತ್ತಿದ್ದರು. ಮನೆಯಲ್ಲಿ ಆಟವಾಡುತ್ತಿದ್ದ ವರ್ಷಿತಾಗೆ ಇಂದು ನೀಲಗಿರಿ ಬಾಟಲ್ ನೋಡಿದ್ದಾಳೆ. ಬಾಟಲ್‍ನಲ್ಲಿರುವುದು ಜ್ಯೂಸ್ ಎಂದು ತಿಳಿದು ಕುಡಿದ ಪರಿಣಾಮ ಅಸ್ವಸ್ಥಳಾಗಿ ಬಿದ್ದಿದ್ದಳು. ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ವರ್ಷಿತಾ ಅಜ್ಜಿ ಸುಶೀಲಾ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *