ಚುನಾವಣೆಗೆ ಸಿದ್ಧರಾಗಿರಿ – ನಿಖಿಲ್ ವೈರಲ್ ವಿಡಿಯೋ ಬಗ್ಗೆ ಕುಮಾರಸ್ವಾಮಿ ಸ್ಪಷ್ಟನೆ

Public TV
1 Min Read

ಬೆಂಗಳೂರು: ಮಧ್ಯಂತರ ಚುನಾವಣೆಗೆ ಸಿದ್ಧರಾಗಬೇಕು ಎಂಬ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಪ್ರಕಟಣೆಯ ಮೂಲಕ ಸ್ಪಷ್ಟಪಡಿಸಿರುವ ಸಿಎಂ, ಪಕ್ಷದ ಕಾರ್ಯಕರ್ತರು ಸದಾ ಸಮಾಜ ಸೇವೆಗೆ ಸನ್ನದ್ಧರಾಗಿರಬೇಕು. ಚುನಾವಣೆ ಕಾಲದಲ್ಲಿ ಮಾತ್ರ ಹೋರಾಟ ಎಂದಾಗದೆ, ಯಾವಾಗ ಚುನಾವಣೆ ಎದುರಾದರೂ ಜಯ ಗಳಿಸುವ ಸ್ಥಿತಿಯಲ್ಲಿ ಪಕ್ಷವನ್ನು ಚುರುಕಾಗಿಟ್ಟಿರಬೇಕು ಎಂದು ನಿಖಿಲ್ ಹೇಳಿದ್ದಾರೆ ಎಂದು ಮಗನ ಪರ ಹೇಳಿದ್ದಾರೆ.

ಈ ಕುರಿತು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಹುರಿದುಂಬಿಸಿದ್ದಾರೆ. ಇದನ್ನು ಸಂದರ್ಭರಹಿತವಾಗಿ ಉಲ್ಲೇಖಿಸಿ ಮಾಧ್ಯಮಗಳಲ್ಲಿ ಚುನಾವಣೆ ಯಾವಾಗ ಬೇಕಾದರೂ ಎದುರಾಗಬಹುದು ಎನ್ನುವಂತೆ ಬಿಂಬಿಸಲಾಗಿದೆ. ಇದು ವಾಸ್ತವಕ್ಕೆ ದೂರವಾದ ಸಂಗತಿಯಾಗಿದೆ. ಮೈತ್ರಿ ಸರ್ಕಾರ ತನ್ನ ಐದು ವರ್ಷದ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತದೆ. ಮಧ್ಯಂತರ ಚುನಾವಣೆಯ ವಿಷಯವೇ ಈಗ ಅಪ್ರಸ್ತುತ ಎಂದು ಅವರು ತಿಳಿಸಿದ್ದಾರೆ.

ನಿಖಿಲ್ ವಿಡಿಯೋದಲ್ಲೇನಿದೆ?
ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಸರ್ಕಾರ ಕಂಪ್ಲೀಟ್ ಆಗುತ್ತದೆ. ದಿನ ನಿತ್ಯ ಮಾಧ್ಯಮದಲ್ಲಿ ಬರುವುದನ್ನು ನೋಡಿ ನೀವು ಟೆನ್ಷನ್ ಆಗಬೇಡಿ. ಒಳಗಡೆ ಏನು ಅನ್ನೋದು ನಮಗೆ ಗೊತ್ತಿದೆ. ಕುಮಾರಣ್ಣ ನಾಲ್ಕು ವರ್ಷ ನಡೆಸುತ್ತಾರೆ. ಮುಂದಿನ ತಿಂಗಳಿಂದಲೇ ಶುರು ಮಾಡಿ. ಒಂದು ವರ್ಷಕ್ಕೆ ಬರುತ್ತೋ, ಎರಡು ವರ್ಷಕ್ಕೆ ಬರುತ್ತೋ, ಮೂರು ವರ್ಷಕ್ಕೆ ಬರುತ್ತೋ ಗೊತ್ತಿಲ್ಲ. ಆದರೆ ನೀವು ರೆಡಿ ಇರಬೇಕು ಎಂದು ಜೆಡಿಎಸ್ ಕಾರ್ಯಕರ್ತರಿಗೆ ನಿಖಿಲ್ ತಿಳಿಸಿದ್ದಾರೆ.

ಈ ವಿಡಿಯೋವನ್ನು ಸುನೀಲ್ ಗೌಡ ದಂಡಿಗಾನಹಳ್ಳಿ ಎಂಬವರು ತಮ್ಮ ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಸುಮಾರು 42 ಸೆಕೆಂಡ್‍ಗಳ ವಿಡಿಯೋದಲ್ಲಿ, ಒಮ್ಮೆ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಆತ್ಮವಿಶ್ವಾಸದಿಂದ ನಿಖಿಲ್ ಹೇಳುತ್ತಾರೆ. ನಂತರ ಚುನಾವಣೆ ಯಾವಾಗ ಬರುತ್ತೋ ಗೊತ್ತಿಲ್ಲ, ಜೆಡಿಎಸ್ ಕಾರ್ಯಕರ್ತರು ತಯಾರಾಗಿರಿ ಎಂಬರ್ಥದಲ್ಲಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *