ಸುಮಲತಾ ಬಳಿಕ ಮಂಡ್ಯದಲ್ಲಿ ನಿಖಿಲ್ ಕೃತಜ್ಞತಾ ಸಮಾವೇಶ

Public TV
1 Min Read

ಮಂಡ್ಯ: ಕೆಲ ದಿನಗಳ ಹಿಂದೆಯಷ್ಟೇ ಮಂಡ್ಯದಲ್ಲಿ ಸುಮಲತಾ ಅವರು ವಿಜಯೋತ್ಸವ ಕಾರ್ಯಕ್ರಮವನ್ನು ನಡೆಸಿದ ಲೋಕಸಭಾ ಚುನಾವಣೆಯಲ್ಲಿ ತಮಗೆ ಮತ ನೀಡಿದ್ದ ಜನತೆಗೆ ಧನ್ಯವಾದ ತಿಳಿಸಿದ್ದರು. ಸದ್ಯ ನಿಖಿಲ್ ಕುಮಾರಸ್ವಾಮಿ ಅವರು ಕೂಡ ಮತದಾರರಿಗೆ ಕೃತಜ್ಞತಾ ಸಮಾವೇಶ ನಡೆಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಈ ಕುರಿತು ಮಳವಳ್ಳಿಯಲ್ಲಿ ಶಾಸಕ ಅನ್ನದಾನಿ ಅವರು ಮಾಹಿತಿ ನೀಡಿದ್ದು, ಕೆಲವೇ ದಿನಗಳಲ್ಲಿ ನಿಖಿಲ್‍ರನ್ನು ಮಳವಳ್ಳಿಗೆ ಕರೆಸಿ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇವೆ. ನಿಖಿಲ್ ಅವರು ಮಂಡ್ಯದ ಜನರ ಜೊತೆ ಇರುತ್ತಾರೆ. ಅವರ ನೇತೃತ್ವದಲ್ಲಿ ಮಳವಳ್ಳಿ ಪುರಸಭೆ ಅಧಿಕಾರ ಹಿಡಿಯಲು ಕೆಲಸ ಮಾಡುತ್ತೇವೆ ಎಂದರು.

ಸ್ಥಳೀಯವಾಗಿ ಜೆಡಿಎಸ್ ಪಕ್ಷ ಸಾಕಷ್ಟು ಪ್ರಬಲವಾಗಿದ್ದು, ಸಂಸದರ ಚುನಾವಣೆಯ ಸೋಲಿನ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಜನರ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ. ನಮ್ಮ ನಾಯಕರು ಚುನಾವಣೆಯಲ್ಲಿ ಆದ ಕಹಿ ಅನುಭವ ಮರೆಯಬೇಕು ಅಂದಿದ್ದಾರೆ. ಅಲ್ಲದೇ ಸಂಸತ್ ಚುನಾವಣೆ ನಡೆದ ನಂತರ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜನ ನಮ್ಮ ಕೈ ಹಿಡಿದಿದ್ದಾರೆ. ಮಳವಳ್ಳಿ ಪುರಸಭೆಯಲ್ಲಿ ಪಕ್ಷೇತರರ ಸಪೋರ್ಟ್ ಪಡೆದು ಅಧಿಕಾರ ಹಿಡಿಯುತ್ತೇವೆ ಎಂದರು.

ಪಕ್ಷದ ವರಿಷ್ಠರಿಂದ ಸೂಚನೆ ಬಂದಿದ್ದು, ಪಕ್ಷದ ಯಾವುದೇ ನಾಯಕರು ಕೂಡ ಲೋಕಸಭೆ ಚುನಾವಣೆ ಬಗ್ಗೆ ಮಾಧ್ಯಮದಲ್ಲಿ ಮಾತನಾಡಬಾರದು ಅಂದಿದ್ದಾರೆ. ಹೀಗಾಗಿ ಅದರ ಬಗ್ಗೆ ಹೆಚ್ಚು ಮಾತನಾಡಲ್ಲ. ಕಾವೇರಿ ಸಮಸ್ಯೆ ಸದ್ಯ ಆರಂಭವಾಗಿದ್ದು, ಜಿಲ್ಲೆಯ ರೈತರ ಹಿತ ಕಾಯುವ ಜವಾಬ್ದಾರಿ ಶಾಸಕರಾಗಿ ನಮ್ಮ ಮೇಲಿದೆ. ಹೀಗಾಗಿ ಚುನಾವಣೆ ಫಲಿತಾಂಶ ಅಪ್ರಸ್ತುತವಾಗಿದ್ದು, ನಮ್ಮ ಕೆಲಸ ರೈತರ ಪರವಾಗಿ ದುಡಿಯುವುದಷ್ಟೇ ಎಂದರು.

Share This Article
Leave a Comment

Leave a Reply

Your email address will not be published. Required fields are marked *