ಮಂಡ್ಯ: ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ನಿಖಿಲ್ ಕುಮಾರಸ್ವಾಮಿ ಅವರು ಚುನಾವಣಾ ಆಯೋಗಕ್ಕೆ ಆಸ್ತಿಯ ವಿವರಗಳನ್ನು ನೀಡಿದ್ದು, 17.53 ಕೋಟಿ ರೂ. ಒಡೆಯರಾಗಿದ್ದಾರೆ.
ನಿಖಿಲ್ ಅವರ ಬಳಿ 3 ಕೋಟಿ 11 ಲಕ್ಷ ರೂ. ಮೊತ್ತದ ರೇಂಜ್ ರೋವರ್ ಕಾರು ಇದ್ದು, 4.55 ಲಕ್ಷ ಮೊತ್ತದ 200 ಗ್ರಾಂ ಚಿನ್ನಾಭರಣ ಹೊಂದಿದ್ದಾರೆ. ವಿವಿಧ ಬ್ಯಾಂಕ್‍ಗಳಲ್ಲಿ ಠೇವಣಿಯನ್ನು ಹೊಂದಿದ್ದು, ಒಟ್ಟು 22 ಲಕ್ಷ ರೂ. ವೈಯಕ್ತಿಕ ಸಾಲವನ್ನು ಹೊಂದಿದ್ದಾರೆ. ನಿಖಿಲ್ ಅವರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣ ಇಲ್ಲ ಎಂಬ ಮಾಹಿತಿಯನ್ನು ಅಫಿಡವಿಟ್‍ನಲ್ಲಿ ಘೋಷಿಸಿಕೊಂಡಿದ್ದಾರೆ.
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ನಿಖಿಲ್, ಜೆಡಿಎಸ್ ಮತ್ತು ಕಾಂಗ್ರೆಸ್ ನವರು ಅಣ್ಣತಮ್ಮಂದಿರು. ಲಕ್ಷಾಂತರ ಮಂದಿ ಇಂದು ಇಲ್ಲಿಗೆ ಆಗಮಿಸಿ ನನಗೆ ಆಶೀರ್ವಾದ ನೀಡಿರುವುದು ಸಂತಸ ತಂದಿದೆ. ಮಂಡ್ಯದ ಋಣ ತೀರಿಸಲು ಏಳು ಜನ್ಮ ಹುಟ್ಟಿ ಬಂದರು ಆಗಲ್ಲ ಎಂದು ನಮ್ಮ ತಂದೆ ಪದೇ ಪದೇ ಹೇಳುತ್ತಾರೆ. ಈ ಮಾತು ಸತ್ಯ. ನಾನು ನಿಮ್ಮ ಮನೆ ಮಗನಾಗಿ ಇರುತ್ತೇನೆ. ಸಾಮಾನ್ಯ ಕಾರ್ಯಕರ್ತನಾಗಿ ಕುಮಾರಣ್ಣ ಪಕ್ಷಕ್ಕೆ ದುಡಿದರು. 1996ರಲ್ಲಿ ಕುಮಾರಣ್ಣ ಯಾರು ಎಂದು ತಿಳಿದಿರಲಿಲ್ಲ. ಕುಮಾರಣ್ಣ ದೇವೇಗೌಡರ ಮಗ ಅಂತಷ್ಟೇ ಗೊತ್ತಿತ್ತು. ಇವತ್ತು ನನ್ನ ಪರಿಸ್ಥಿತಿಯೂ ಹಾಗೆಯೇ ಆಗಿದೆ. ನನ್ನನ್ನ ಇವತ್ತು ಕುಮಾರಣ್ಣನ ಮಗ ಅಂತ ಇಷ್ಟ ಪಡುತ್ತಿದ್ದೀರಿ. ಚುನಾವಣೆಯಲ್ಲಿ ಮತ ನೀಡಿ ಕೈ ಹಿಡಿಯಿರಿ ಎಂದು ಮನವಿ ಮಾಡಿದರು.