ಕಾಂಗ್ರೆಸ್‍ನಿಂದ ಸೀರೆ ಹಂಚಿಕೆ ಆರೋಪ- ಇಕ್ಬಾಲ್ ಹುಸೇನ್ ವಿರುದ್ಧ ನಿಖಿಲ್ ಕಿಡಿ

Public TV
2 Min Read

ರಾಮನಗರ: ಕಾಂಗ್ರೆಸ್ ಶಾಸಕರಿಂದ ಮತದಾರರಿಗೆ ಸೀರೆ ಹಂಚಿರುವ ಆರೋಪಕ್ಕೆ ಸಂಬಂಧಿಸಿದಂತೆ ಜೆಡಿಎಸ್ (JDS) ಯುವನಾಯಕ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಸಂಬಂಧ ರಾಮನಗರದಲ್ಲಿ ಬಿಜೆಪಿ-ಜೆಡಿಎಸ್ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿಖಿಲ್, 3,700 ಡ್ರೆಸ್ ಮೆಟೀರಿಯಲ್, ಸೀರೆಗಳ ಅಕ್ರಮ ಸಂಗ್ರಹ ಮಾಡಲಾಗಿದೆ. 14 ಲಕ್ಷ ಮೌಲ್ಯದ ವಸ್ತಗಳನ್ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದು ಶಾಸಕ ಇಕ್ಬಾಲ್ ಹುಸೇನ್‍ಗೆ ಸಂಬಂಧಿಸಿದ ವಸ್ತುಗಳು ಎಂದು ದಾಖಲೆ ಸಮೇತ ನಿಖಿಲ್ ಫೋಟೋ ಬಿಡುಗಡೆ ಮಾಡಿದ್ದಾರೆ.

ಕಳೆದ 15-20ದಿನದಿಂದ ಕುಕ್ಕರ್, ಸೀರೆ ಹಂಚಲಾಗ್ತಿದೆ ಅಂತ ಆರೋಪಿಸಿರುವ ನಿಖಿಲ್, ಈ ಬಗ್ಗೆ ನಿನ್ನೆ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಅವರೂ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಆದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಚುನಾವಣಾ ಆಯೋಗ ಪಾರದರ್ಶಕವಾಗಿ ಕೆಲಸ ಮಾಡ್ತಿದ್ಯಾ ಎಂದು ಜಿಲ್ಲಾಡಳಿತವನ್ನು ನಿಖಿಲ್ (Nikhil Kumaraswamy) ಪ್ರಶ್ನೆ ಮಾಡಿದ್ದಾರೆ.

ಕಾರ್ಯಕರ್ತರಿಗೆ ನಿಖಿಲ್ ಭರವಸೆ: ರಾಜ್ಯ ಚುನಾವಣಾ ಆಯೋಗದವರೇ ನೀವು ಪಾರದರ್ಶಕವಾಗಿ ಚುನಾವಣೆ ಮಾಡಿ. ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಕೆಲಸ ಆಗ್ತಿದೆ. ಅಲ್ಲದೇ ಈ ಕುರಿತು ಇಂದು ನಾನು ಚುನಾವಣಾ ಆಯೋಗಕ್ಕೆ ದೂರು ನೀಡ್ತಿದ್ದೇನೆ. ರಾಜ್ಯದ ಜನತೆಗೆ ಪಾರದರ್ಶಕ ಚುನಾವಣೆ ನಡೆಯುತ್ತಾ ಎಂಬ ಸಂಶಯ ಬರುತ್ತಿದೆ. ಅಕ್ರಮವಾಗಿ ಹಣ ಲೂಟಿ ಮಾಡಿ ಚುನಾವಣೆ ಮಾಡುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಜೊತೆ ನಾನು ಸದಾ ಇರುತ್ತೇನೆ. ನಿಮ್ಮ ಹೋರಾಟಕ್ಕೆ ಯಾವ ಸಮಯದಲ್ಲೂ ನಾನು ಜೊತೆ ನಿಲ್ಲುವುದಾಗಿ ನಿಖಿಲ್ ಭರವಸೆ ನೀಡಿದರು.

ಬಡವರ ಪಾಲಿನ ದೇವರು ಮಂಜುನಾಥ್: ಡಾ.ಮಂಜುನಾಥ್ (Dr C.N Manjunath) ವೈದ್ಯಕೀಯ ಸೇವೆಯಲ್ಲಿ ಹೆಸರು ಮಾಡಿದ್ದಾರೆ. ಸಾಕಷ್ಟು ಬಡವರ ಪಾಲಿನ ದೇವರಾಗಿದ್ದಾರೆ. ಅಂತವರನ್ನ ಕಾಂಗ್ರೆಸ್ ಶಾಸಕರು ಟೀಕಿಸ್ತಿದ್ದಾರೆ. ಮಿಸ್ಟರ್ ಮಾಗಡಿ ಶಾಸಕರು ಡಾ.ಮಂಜುನಾಥ್ ಗೆ ರಾಜಕೀಯ ತೆವಲು ಅಂದಿದ್ದಾರೆ. ತೆವಲು ಎನ್ನುವ ಪದದ ಅರ್ಥ ಗೊತ್ತಾ ನಿಮಗೆ..? ರಾಮನಗರ ಶಾಸಕರ ಪದ ಬಳಕೆಯನ್ನೂ ನೋಡಿದ್ದೇನೆ. ನಿಮ್ಮ ಎಲ್ಲಾ ವಿಚಾರಗಳೂ ನನಗೆ ಗೊತ್ತು. ನೀವು ಎಲ್ಲೆಲ್ಲಿ ಹಣ ಇಟ್ಟಿದ್ದೀರಿ ಎಂಬುದು ಗೊತ್ತು. ನಾನು ಕೂಡಾ ಇದೇ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋತಿದ್ದೇನೆ. ನನ್ನ ಸೋಲಿಸಲು ನೀವು ಏನೇನು ಮಾಡಿದ್ರಿ ಎಲ್ಲಾ ಗೊತ್ತು. ಗಿಫ್ಟ್ ಕಾರ್ಡ್ ಕೊಟ್ಟು ಮತದಾರರನ್ನ ಯಾಮಾರಿಸಿದ್ದೀರಿ. ಮುಗ್ಧ ಜನರಿಗೆ ಆಮಿಷ ತೋರಿಸಿ ಎಲೆಕ್ಷನ್ ಮಾಡಿದ್ದೀರಿ. ಈಗ ಸಂಕ್ರಾಂತಿ ಗಿಫ್ಟ್ ಅಂತ ಮಾರ್ಚ್ ತಿಂಗಳಲ್ಲಿ ಕುಕ್ಕರ್ ಹಂಚುತ್ತಿದ್ದೀರಿ. ಕೂಡಲೇ ಚುನಾವಣಾ ಆಯೋಗ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ರಾಮನಗರಕ್ಕೆ ಕಾಲಿಡಲ್ಲ: ಕಾಂಗ್ರೆಸ್ ನಾಯಕರ ದಬ್ಬಾಳಿಕೆ ಹೆಚ್ಚಾಗ್ತಿದೆ. ನಮ್ಮ ಕಾರ್ಯಕರ್ತರು ಕಣ್ಣೀರು ಹಾಕ್ತಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರಲಿಲ್ಲ ಅಂದ್ರೆ ಕೇಸ್ ಹಾಕ್ತೀವಿ ಅಂತ ಹೆದರಿಸ್ತಿದ್ದೀರಿ. ನಿಮ್ಮ ದೌರ್ಜನ್ಯ, ದಬ್ಬಾಳಿಕೆ ಜಾಸ್ತಿ ದಿನ ನಡೆಯಲ್ಲ. ನಮ್ಮ ಅಧಿಕಾರವಧಿಯಲ್ಲಿ ನಾವು ದುರುಪಯೋಗ ಮಾಡಿಕೊಂಡಿಲ್ಲ. ಒಬ್ಬ ಅಧಿಕಾರಿ, ಪೊಲೀಸರಿಗೆ ಫೋನ್ ಮಾಡಿ ಒತ್ತಡ ಹಾಕಿಲ್ಲ. ಹಾಗೇನಾದ್ರೂ ನಾನು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ರೆ ಇನ್ಮುಂದೆ ರಾಮನಗರಕ್ಕೆ ಕಾಲಿಡಲ್ಲ ಎಂದು ನಿಖಿಲ್ ಕಿಡಿಕಾರಿದರು.

Share This Article