ಬೆಂಗ್ಳೂರಿನಿಂದ ಮತ್ತೆ ರಾಮನಗರಕ್ಕೆ ನಿಖಿಲ್ ಮದ್ವೆ ಶಿಫ್ಟ್

Public TV
1 Min Read

– ತೋಟದ ಮನೆಯಲ್ಲಿ ಸಿಂಪಲ್ ಮ್ಯಾರೇಜ್
– ನಿಖಿಲ್, ರೇವತಿ ಕುಟುಂಬಸ್ಥರಷ್ಟೇ ಭಾಗಿ

ರಾಮನಗರ: ನಿಗದಿಯಾದಂತೆ ಏಪ್ರಿಲ್ 17ರಂದೇ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಹಾಗೂ ರೇವತಿ ಅವರ ಮದುವೆ ನಡೆಯಲಿದ್ದು, ಮದುವೆ ಕಾರ್ಯಕ್ರಮವನ್ನು ಬೆಂಗಳೂರಿನಿಂದ ರಾಮನಗರಕ್ಕೆ ಶಿಫ್ಟ್ ಮಾಡಲಾಗಿದೆ.

ರಾಮನಗರ ತಾಲೂಕಿನ ಕೇತಗಾನಹಳ್ಳಿ ಗ್ರಾಮದ ಬಳಿ ಇರುವ ತೋಟದ ಮನೆಯಲ್ಲಿ ಸರಳವಾಗಿ ನಿಖಿಲ್ ಹಾಗೂ ರೇವತಿ ಮದುವೆ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಮೊದಲು ರಾಮನಗರದ ಹೊರವಲಯದ ಜನಪದ ಲೋಕದ ಬಳಿ ನಿಖಿಲ್, ರೇವತಿ ವಿವಾಹ ನಡೆಸಲು ನಿಗದಿ ಮಾಡಲಾಗಿತ್ತು. ಆದರೆ ಕೊರೊನಾ ವೈರಸ್ ಭೀತಿ ಹಿನ್ನೆಲೆ ಮದುವೆ ಕಾರ್ಯಕ್ರಮವನ್ನು ಬೆಂಗಳೂರಿನ ಹೆಚ್‍ಡಿಕೆ ನಿವಾಸದ ಬಳಿಯೇ ಮಾಡಲು ನಿರ್ಧರಿಸಲಾಗಿತ್ತು.

ಈಗ ಕೊರೊನಾ ಹಾವಳಿಗೆ ಬೆಂಗಳೂರು ರೆಡ್ ಜೋನ್‍ನಲ್ಲಿರುವ ಹಿನ್ನೆಲೆ ಮತ್ತೆ ಮದುವೆ ಕಾರ್ಯವನ್ನು ರಾಮನಗರದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಕೇತಗಾನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿಯೇ ಮದುವೆ ನೆರವೇರಲಿದೆ.

ಮದುವೆಗೆ ನಿಖಿಲ್ ಹಾಗೂ ರೇವತಿ ಅವರ ಎರಡು ಕುಟುಂಬದವರು ಸೇರಿ ಸುಮಾರು 70 ರಿಂದ 100 ಜನರು ಮಾತ್ರ ಭಾಗಿಯಾಗಲಿದ್ದಾರೆ. ಸರಳವಾಗಿ ನಿಖಿಲ್ ಮದುವೆ ನೆರವೇರಲಿದ್ದು, ಈಗಾಗಲೇ ತೋಟದ ಮನೆ ಬಳಿ ವಿವಾಹಕ್ಕೆ ಸಿದ್ಧತೆ ಭರದಿಂದ ಸಾಗುತ್ತಿದೆ. ತೋಟದ ಮನೆಯ ಬಳಿ ವಿವಾಹಕ್ಕೆ ಸೆಟ್ ಹಾಕುವುದು, ಇರತೆ ವ್ಯವಸ್ಥೆಗಳ ಸಿದ್ಧತಾ ಕಾರ್ಯಗಳು ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *