ರೌದ್ರರೂಪ ತಾಳಿದ ನೈಜೀರಿಯಾ ನದಿಗಳು – ಜಲಪ್ರಳಯಕ್ಕೆ 150ಕ್ಕೂ ಅಧಿಕ ಮಂದಿ ಬಲಿ

Public TV
2 Min Read
ಅಬುಜಾ: ಮಧ್ಯ ನೈಜೀರಿಯಾದಲ್ಲಿ (Central Nigeria) ಭಾರೀ ಮಳೆಯಿಂದಾಗಿ ಜಲಪ್ರಳಯವೇ ಸೃಷ್ಟಿಯಾಗಿದ್ದು, 150ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ.

ಕಳೆದ ವಾರ ಸುರಿದ ಧಾರಾಕಾರ ಮಳೆಯಿಂದಾಗಿ ನದಿಗಳು ರೌದ್ರರೂಪ ತಾಳಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪ್ರವಾಹದ ಪ್ರಕೋಪದಿಂದಾಗಿ ನೈಗರ್ ರಾಜ್ಯದ ಮೊಕ್ವಾ (Mokwa) ಪಟ್ಟಣ ಅಲ್ಲೋಲ ಕಲ್ಲೋಲವಾಗಿದ್ದು, 150ಕ್ಕೂ ಹೆಚ್ಚು ಜನರು ಪ್ರಾಣಕಳೆದುಕೊಂಡಿದ್ದಾರೆ. 500ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಇದರಿಂದಾಗಿ ಮನೆ ಕಳೆದುಕೊಂಡ ಜನರು ಬೀದಿಗೆ ಬಿದ್ದಿದ್ದಾರೆ ಎಂದು ವರದಿಯಾಗಿದೆ.ಇದನ್ನೂ ಓದಿ: ಬೆಂಗಳೂರು | ಆಟೋ ಚಾಲಕನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದ ಮಹಿಳೆಯ ವಿಚಾರಣೆ

ರಕ್ಷಣಾ ಸಿಬ್ಬಂದಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, 3 ಸಾವಿರ ಮಂದಿಯನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದ್ದಾರೆ. ರಣಭೀಕರ ಪ್ರವಾಹದಿಂದಾಗಿ ರಸ್ತೆಗಳೇ ಮಾಯವಾಗಿದ್ದು, ಪ್ರವಾಹದ ಒಂದೊಂದು ದೃಶ್ಯವೂ ಭಯಾನಕವಾಗಿವೆ.

ನೈಜೀರಿಯಾದ ದಕ್ಷಿಣ ಹಾಗೂ ಉತ್ತರ ಭಾಗದ ರೈತರಿಗೆ ಮೊಕ್ವಾ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದು, ರಾಜಧಾನಿ ಅಬುಜಾದಿಂದ ಸುಮಾರು 220 ಕಿ.ಮೀ ದೂರದಲ್ಲಿದೆ. ಕಳೆದ ವಾರ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಆದರೆ ಅದಾದ ಬಳಿಕ ಮೊಕ್ವಾದ ಹತ್ತಿರದಲ್ಲಿರುವ ಅಣೆಕಟ್ಟೊಂದು ಕುಸಿದು ಪರಿಸ್ಥಿತಿ ಮತ್ತಷ್ಟು ಸಮಸ್ಯೆ ಬಿಗಡಾಯಿಸಿತ್ತು.

ನೈಜೀರಿಯಾ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ದೇಶದ 36 ರಾಜ್ಯಗಳ ಪೈಕಿ 15 ರಾಜ್ಯಗಳಲ್ಲಿ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಮಳೆಗಾಲ ಈಗಷ್ಟೇ ಆರಂಭವಾಗಿದ್ದು, ಇನ್ನೂ ಕೆಲವು ತಿಂಗಳ ಕಾಲ ಮಳೆ ಮುಂದುವರಿಯಲಿದೆ ಎಂದು ತಿಳಿಸಿದೆ.

ನೈಜೀರಿಯಾ ಅಧ್ಯಕ್ಷ ಬೋಲಾ ಟಿನುಬು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ, ಮೃತ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ಮುಂದುವರಿಯುತ್ತಿದ್ದು, ಜನರಿಗೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ನೈಜೀರಿಯಾದಲ್ಲಿ ಕಳೆದ ವರ್ಷ (2024) ಪ್ರವಾಹದಿಂದಾಗಿ ಸುಮಾರು 1,200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. 1.2 ಮಿಲಿಯನ್ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಜೊತೆಗೆ 3.5 ಮಿಲಿಯನ್ ಎಕರೆ ಕೃಷಿಭೂಮಿ ನಾಶವಾಗಿತ್ತು.ಇದನ್ನೂ ಓದಿ: ಉಕ್ರೇನ್ ಗಡಿಯಲ್ಲಿ ರೈಲ್ವೆ ಬ್ರಿಡ್ಜ್ ಕುಸಿತ – ಹಳಿ ತಪ್ಪಿ 7 ಮಂದಿ ಸಾವು, 30 ಜನಕ್ಕೆ ಗಾಯ

Share This Article