ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಲ್ಲಿರುವ ಎಲ್‌ಇಟಿ ಯ (LeT) ನಟೋರಿಯಸ್ ಉಗ್ರನಿಗೆ ನೆರವು ನೀಡಿದ ಜೈಲಿನ ಮನೋವೈದ್ಯ ಸೇರಿ ಮೂವರನ್ನು 6 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ವಹಿಸಲಾಗಿದೆ.
ಜೀವಾವಧಿ ಶಿಕ್ಷೆಗೆ ಒಳಗಾಗಿ ಪರಪ್ಪನ ಅಗ್ರಹಾರ ಜೈಲಲ್ಲಿರುವ ಲಷ್ಕರ್ ತೊಯ್ಬಾ ಉಗ್ರ ಸಂಘಟನೆಯ ಟಿ.ನಾಸೀರ್‌ಗೆ ಜೈಲಿನಲ್ಲಿ ನೆರವು ನೀಡಿದ ಆರೋಪದ ಮೇಲೆ ಎನ್ಐಎ (NIA) ಅಧಿಕಾರಿಗಳು ಮೂವರನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಜೈಲಿನ ಮನೋವೈದ್ಯ ನಾಗರಾಜ್, ಸಿಎಆರ್ ಸಬ್ ಇನ್‌ಸ್ಪೆಕ್ಟರ್ ಚಾಂದ್ ಪಾಷಾ ಹಾಗೂ ಗ್ರೆನೇಡ್ ದಾಳಿಯ ಸಂಚುಕೋರರಲ್ಲಿ ಒಬ್ಬನಾದ ಜುನೈದ್‌ನ ತಾಯಿ ಅನೀಸ್ ಫಾತಿಮಾ ಆಗಿದ್ದಾರೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲು ಎಎಸ್‌ಐ, ಮನೋವೈದ್ಯ ಸೇರಿ ಮೂವರು ಶಂಕಿತ ಉಗ್ರರ ಬಂಧನ
ಈ ಮೂವರು ಶಂಕಿತರು ಕೇರಳ ಮೂಲದ ಎಲ್ಇಟಿ ಉಗ್ರ ಟಿ.ನಾಸೀರ್ ಜೊತೆ ನೇರ ಸಂಪರ್ಕ ಹೊಂದಿದ್ದು, ಜೈಲಿನಲ್ಲಿ ಮೊಬೈಲ್ ಪೋನ್, ಹಣಕಾಸು ಸೇರಿ ಇತರ ವಿಚಾರಗಳ ಬಗ್ಗೆ ನೆರವು ನೀಡಿದ್ದರು. ನಿನ್ನೆ ಈ ಬಗ್ಗೆ ಬೆಂಗಳೂರಿನ ಮೂರು ಹಾಗೂ ಕೋಲಾರದ ಐದು ಕಡೆ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು ಮೂವರನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬಳಿಕ ಇಂದು ಮೂವರು ಆರೋಪಿಗಳನ್ನ ಎನ್ಐಎ ಸ್ಪೆಷಲ್ ಕೋರ್ಟ್‌ಗೆ ಹಾಜರುಪಡಿಸಿದ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಕಸ್ಟಡಿ ನೀಡುವಂತೆ ಮನವಿ ಮಾಡಿದರು. ಎನ್ಐಎ ಅಧಿಕಾರಿಗಳ ಮನವಿ ಪುರಸ್ಕರಿಸಿದ ಕೋರ್ಟ್ ಆರು ದಿನಗಳ ಕಸ್ಟಡಿಗೆ ನೀಡಿ ಆದೇಶಿಸಿದೆ.
ಬಂಧಿತ ಮೂವರು ಆರೋಪಿಗಳಲ್ಲಿ ಡಾ.ನಾಗರಾಜ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮನೋವೈದ್ಯನಾಗಿ ಕೆಲಸ ಮಾಡುತ್ತಿದ್ದ. ಪ್ರತಿದಿನ ಈತ ಜೈಲಿನಲ್ಲಿ ಎಲ್ಲಾ ಖೈದಿಗಳನ್ನ ಭೇಟಿಯಾಗ್ತಿದ್ದ. ಹೀಗೆ 2022 -2023 ರ ಅವಧಿಯಲ್ಲಿ ಉಗ್ರ ನಾಸೀರ್ ಬ್ಯಾರಕ್‌ಗೆ ತೆರಳಿ ಕೌನ್ಸೆಲಿಂಗ್ ಮಾಡಿದ್ದನಂತೆ. ಈ ವೇಳೆ ನಾಸೀರ್‌ಗೆ ಮೊಬೈಲ್ ಫೋನ್ ಕೊಟ್ಟು ಸಹಕಾರ ನೀಡಿದ್ದನಂತೆ. ಬಳಿಕ ಉಗ್ರ ನಾಸೀರ್, ನಾಗರಾಜ್ ಬ್ರೈನ್ ವಾಶ್ ಮಾಡಿದ್ದನಂತೆ. ಮತ್ತೊಬ್ಬ ಆರೋಪಿ ಅನೀಸ್ ಫಾತೀಮಾ ಶಂಕಿತ ಉಗ್ರ ಜುನೈದ್ ತಾಯಿ. 2023ರಲ್ಲಿ ಜುನೈದ್ ಮೇಲೆ ಕೇಸ್ ಆಗ್ತಿದ್ದಂತೆ ಆಸಾಮಿ ನಾಪತ್ತೆಯಾಗಿದ್ದ. ಟಿ.ನಾಸೀರ್ ಮತ್ತು ಜುನೈದ್ ನಡುವಿನ ಹಣದ ವ್ಯವಹಾರಕ್ಕೆ ಸಹಾಯ ಮಾಡ್ತಿದ್ದಳು ಅಂತಾ ಗೊತ್ತಾಗಿದೆ. ಜೊತೆ ಜೈಲಿನಲ್ಲಿ ಭೇಟಿಯ ವಿಚಾರಗಳನ್ನ ತನ್ನ ಮಗನಿಗೆ ಫಾತೀಮಾ ತಲುಪಿಸುತ್ತಿದ್ದಳು ಅಂತಾ ಗೊತ್ತಾಗಿದೆ. ಮೂರನೇ ಆರೋಪಿಯಾದ ಎಎಸ್ಐ ಚಾಂದ್ ಪಾಷಾ ನಗರದ ಸಿಎಆರ್‌ನಲ್ಲಿ ಕೆಲಸ ಮಾಡುತ್ತಿದ್ದ. ಜೈಲಿನಿಂದ ಖೈದಿಗಳನ್ನು ಬೇರೆ ಜೈಲಿಗೆ ಮತ್ತು ನ್ಯಾಯಾಲಯಕ್ಕೆ ಕರೆತರುವ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗ್ತಿತ್ತು. ಈ ವೇಳೆ ಉಗ್ರ ನಾಸೀರ್ ಪರಿಚಯ ಮಾಡಿಕೊಂಡಿದ್ದ ಚಾಂದ್ ಪಾಷಾ, ಬೇರೆ ಬೇರೆ ಕಡೆ ಪ್ರಯಾಣ ಮಾಡುವಾಗ ಸಹಾಯ ಮಾಡುವುದು, ನಾಸೀರ್‌ಗೆ ಬೇಕಿದ್ದ ಮಾಹಿತಿಗಳನ್ನು ವಿನಿಮಯ ಮಾಡ್ತಿದ್ದನಂತೆ. ಹೀಗೆ ಮೂರು ಜನ ಆರೋಪಿಗಳು ನೇರವಾಗಿ ನಾಸೀರ್‌ಗೆ ಲಿಂಕ್ ಇರೋದು ಎನ್‌ಐಎ ತನಿಖೆಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಮೂವರು ಶಂಕಿತ ಉಗ್ರರ ಬಂಧನ ಕೇಸ್ – ಬೆಂಗ್ಳೂರಲ್ಲಿ ವಿಧ್ವಂಸಕ ಕೃತ್ಯಕ್ಕೆ ಪ್ಲ್ಯಾನ್ ಮಾಡಿದ್ದ ಉಗ್ರ ನಾಸೀರ್
ಎನ್ಐಎ ಅಧಿಕಾರಿಗಳ ವಿಚಾರಣೆಯಲ್ಲಿ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ. ಬಂಧಿತ ಮೂವರು ಆರೋಪಿಗಳ ಮೊಬೈಲ್ ಫೋನ್ ವಶಕ್ಕೆ ಪಡೆದು ಅವರ ಸಂಪರ್ಕ ಜಾಲವನ್ನ ತನಿಖೆ ನಡೆಸಿದ್ದಾರೆ. ಈ ವೇಳೆ ಕೆಲವು ಮಹತ್ವದ ಆಡಿಯೋ ಕ್ಲಿಪ್‌ಗಳು ಪತ್ತೆಯಾಗಿದ್ದು, ಅದರಲ್ಲಿ ಉಗ್ರ ನಾಸೀರ್ ಜೊತೆಗಿನ ಸಂಚು ಮತ್ತು ಸಂಪರ್ಕದ ವಿಚಾರ ಕಂಡುಬಂದಿದೆ. ಹೀಗಾಗಿ, ಬಂಧಿತರ ಆಡಿಯೋ ಸ್ಯಾಂಪಲ್ ಸಂಗ್ರಹಿಸಲು ಎನ್ಐಎ ಮುಂದಾಗಿದ್ದು, ನಾಳೆ ಕೋರ್ಟ್‌ಗೆ ಅರ್ಜಿ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ. ಅಲ್ಲದೇ, ಈಗ ಪತ್ತೆಯಾದ ಆಡಿಯೋ ಕ್ಲಿಪ್‌ಗಳನ್ನು ಕೋರ್ಟ್ ಅನುಮತಿ ಪಡೆದು ಎಫ್ಎಸ್ಎಲ್‌ಗೆ ರವಾನೆ ಮಾಡಿ ಪರೀಕ್ಷೆಗೆ ಒಳಪಡಿಸಲು ಮುಂದಾಗಿದ್ದಾರೆ.
ಜೈಲಿನಲ್ಲಿ ಮನೋವೈದ್ಯ ನಾಗರಾಜ್ ಉಗ್ರ ನಾಸಿರ್ ಅಲ್ಲದೇ ಇತರ ಖೈದಿಗಳಿಗೂ ಮೊಬೈಲ್ ಕೊಟ್ಟಿರುವ ವರದಿಯಾಗಿದೆ. ಮೂರ್ನಾಲ್ಕು ಸಾವಿರದ ಮೊಬೈಲ್‌ಗಳನ್ನ 50,000 ಮಾರಾಟ ಮಾಡಿದ್ದಾನಂತೆ. ಇದಕ್ಕಾಗಿ ತನ್ನ ಆಪ್ತೆ ಪವಿತ್ರಾಳನ್ನ ಬಳಸಿಕೊಂಡು ನೂರಾರು ಮೊಬೈಲ್, ಸಿಮ್‌ಗಳನ್ನ ಖರೀದಿ ಮಾಡಿ ಜೈಲಲ್ಲಿ ಮಾರಾಟ ಮಾಡಿರೋದು ಬೆಳಕಿದೆ ಬಂದಿದೆ. ಇನ್ನು ಸಿಮ್ ಪಡೆಯಲು ಕೋಲಾರದ ಸತೀಶ್ ಗೌಡನ ಐಡಿ ಪ್ರೂಫ್ ಬಳಕೆಯಾಗಿದ್ದು, ಸತೀಶ್ ಗೌಡ ಅಬ್ ಸ್ಕ್ಯಾಂಡ್ ಆಗಿದ್ದಾನೆ. ಸತೀಶ್ ಪತ್ನಿ ಮತ್ತೆ ಅತ್ತೆ ಇವತ್ತು ಎನ್‌ಐಎ ವಿಚಾರಣೆಗೆ ಹಾಜರಾಗಿದ್ದಾರೆ.