ಕರ್ನಾಟಕ ಸೇರಿದಂತೆ 3 ರಾಜ್ಯಗಳ 25 ಕಡೆ ಎನ್‌ಐ ದಾಳಿ – 17.50 ಲಕ್ಷ ಜಪ್ತಿ

Public TV
2 Min Read

ನವದೆಹಲಿ: ಭಯೋತ್ಪಾದನೆ ಮತ್ತು ಹಿಂಸಾಚಾರದ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ (NIA) ಬುಧವಾರ ಮೂರು ರಾಜ್ಯಗಳ 25 ಸ್ಥಳಗಳಲ್ಲಿ ದಾಳಿ ನಡೆಸಿದೆ.

ನಿಷೇಧಿತ ಮೂಲಭೂತವಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ತನ್ನ ಕಾರ್ಯಕರ್ತರು ಮತ್ತು ಸದಸ್ಯರಿಗೆ ಮೂಲಭೂತವಾದ ಮತ್ತು ತರಬೇತಿ ನೀಡಿ ಪಿತೂರಿಗೆ ಯತ್ನಿಸಿದ ಆರೋಪದ  ಮೇರೆಗೆ ಈ ದಾಳಿ ನಡೆಸಲಾಗಿದೆ ಎನ್‌ಐಎ ತಿಳಿಸಿದೆ. ಇದನ್ನೂ ಓದಿ: ಜ್ಞಾನವಾಪಿ ಕೇಸ್‌ – ಮುಸ್ಲಿಂ ಸಮಿತಿ ಸಲ್ಲಿಸಿದ್ದ ಅರ್ಜಿ ವಜಾ, ಐವರು ಹಿಂದೂ ಮಹಿಳೆಯರಿಗೆ ಗೆಲುವು

 

ಬಿಹಾರದ (Bihar) ಕತಿಹಾರ್ ಜಿಲ್ಲೆ, ಕರ್ನಾಟಕದ (Karnataka) ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆ, ಕೇರಳದ (Kerala) ಕಾಸರಗೋಡು, ಮಲಪ್ಪುರಂ, ಕೋಯಿಕ್ಕೋಡ್ ಮತ್ತು ತಿರುವನಂತಪುರ ಜಿಲ್ಲೆಗಳಲ್ಲಿ ಈ ದಾಳಿ ನಡೆದಿದೆ.

ಮೊಬೈಲ್ ಫೋನ್‌ಗಳು, ಹಾರ್ಡ್ ಡಿಸ್ಕ್, ಸಿಮ್ ಕಾರ್ಡ್‌ಗಳು, ಪೆನ್-ಡ್ರೈವ್‌ಗಳು, ಡೇಟಾ ಕಾರ್ಡ್‌ಗಳು, ಇತ್ಯಾದಿ ಸೇರಿದಂತೆ ಹಲವಾರು ಡಿಜಿಟಲ್ ಸಾಧನಗಳು, ನಿಷೇಧಿತ ಸಂಸ್ಥೆಗೆ ಸಂಬಂಧಿಸಿದ ದಾಖಲೆಗಳು ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಒಟ್ಟು 17.50 ಲಕ್ಷ ರೂ. ಹಣವನ್ನು ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: India GDP – ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ

ಮಂಗಳೂರು ವರದಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಎನ್‍ಐಎ ರೇಡ್ ಮಾಡಿತ್ತು. ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ವೇಣೂರು, ಉಪ್ಪಿನಂಗಡಿ, ಕುಂಬ್ರ, ತಾರಿಪಾಡ್ಪು ಸೇರಿ ಹಲವೆಡೆ ನಿಷೇಧಿತ ಪಿಎಫ್‍ಐ ಸಂಘಟನೆಯ ಸದಸ್ಯರ ಮನೆ, ಕಚೇರಿ, ಆಸ್ಪತ್ರೆಗಳಲ್ಲಿ ಶೋಧಕಾರ್ಯ ನಡೆಸಿದೆ. ಗಲ್ಫ್ ದೇಶಗಳಿಂದ ಹರಿದುಬರುವ ಹಣದಿಂದ ಪಿಎಫ್‍ಐ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿತ್ತು ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ಪಿಎಫ್‍ಐ ಹವಾಲಾ ನೆಟ್‍ವರ್ಕ್ ಬ್ರೇಕ್ ಮಾಡಲು ಈ ದಾಳಿಗಳು ಅನುಕೂಲವಾಗಬಹುದು ಎಂದು ಎನ್‍ಐಎ ಭಾವಿಸಿದೆ.

ಏನಿದು ಪ್ರಕರಣ?
ಬಿಹಾರದ ಪಾಟ್ನಾದಲ್ಲಿ 2022ರ ಜುಲೈ ತಿಂಗಳಿನಲ್ಲಿ ಅಥರ್‌ ಪರ್ವೇಜ್‌ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಪ್ರಕರಣ ಪತ್ತೆಯಾದ ಬಳಿಕ ಎನ್‌ಐಎ ಇಲ್ಲಿಯವರೆಗೆ 85 ಸ್ಥಳಗಳ ಮೇಲೆ ದಾಳಿ ನಡೆಸಿದೆ. ಈತ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದು, ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ್ದಾನೆ ಎಂದು ಆರೋಪಿಸಿ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗಿದೆ. ಪಿಎಫ್‌ಐ 2047ರ ಹೊತ್ತಿಗೆ ಭಾರತವನ್ನು ಇಸ್ಲಾಮಿಕ್‌ ರಾಷ್ಟ್ರವನ್ನಾಗಿಸಲು ಪಣತೊಟ್ಟಿದ್ದ ಅಂಶ ತನಿಖೆಯ ವೇಳೆ ಬೆಳಕಿಗೆ ಬಂದಿತ್ತು.

Share This Article