ಹೈದರಾಬಾದ್: ಪತಿಯ (Husband) ವರದಕ್ಷಿಣೆ (Dowry) ಕಿರುಕುಳಕ್ಕೆ ಬೇಸತ್ತು ನವವಿವಾಹಿತ ಸಾಫ್ಟ್ವೇರ್ ಎಂಜಿನಿಯರ್ (Techie) ನೇಣಿಗೆ ಶರಣಾದ ಘಟನೆ ಹೈದರಾಬಾದ್ನ (Hyderabad) ಮಿಯಾಪುರ್ನ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಟೆಕ್ಕಿಯನ್ನು ಇಶಿತಾ ಯಾದವ್ (26) ಎಂದು ಗುರುತಿಸಲಾಗಿದೆ. ಬುಧವಾರ (ಏ.1) ಸಂಜೆ ತನ್ನ ಅಪಾರ್ಟ್ಮೆಂಟ್ನ ಹಾಲ್ನಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿತ್ತು. ಈ ಬಗ್ಗೆ ಆಕೆಯ ಪತಿ ನೀರಜ್ ಭನ್ಸಾಲ್ ಪೊಲೀಸರಿಗೆ ಮಾಹಿತಿ ನೀಡಿದ್ದ. ಇದನ್ನೂ ಓದಿ: ಅಧ್ಯಾಪಕನೊಂದಿಗೆ ಸಂಬಂಧ ಕಲ್ಪಿಸಿ ಅಪಪ್ರಚಾರ – ಬಿಎಎಂಎಸ್ ವಿದ್ಯಾರ್ಥಿನಿ ಆತ್ಮಹತ್ಯೆ
ಇಶಿತಾ ಮತ್ತು ನೀರಜ್ 2020 ರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದರು. ಇಶಿತಾ ಬಿಹಾರದವರಾಗಿದ್ದರೆ, ನೀರಜ್ ಮಧ್ಯಪ್ರದೇಶದವನಾಗಿದ್ದ. ಇಬ್ಬರೂ ಸುಮಾರು ಐದು ವರ್ಷಗಳ ಕಾಲ ಸಂಬಂಧ ಹೊಂದಿದ್ದರು. ಈ ವರ್ಷ ಫೆ.20 ರಂದು ಪಾಟ್ನಾದಲ್ಲಿ ಅವರ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಮದುವೆಯ ನಂತರ ಟೆಕ್ಕಿ ದಂಪತಿ ಹೈದರಾಬಾದ್ನಲ್ಲಿ ವಾಸವಾಗಿದ್ದರು.
ನೀರಜ್ ಹೆಚ್ಚುವರಿ ವರದಕ್ಷಿಣೆಗಾಗಿ ಇಶಿತಾಗೆ ಕಿರುಕುಳ ಮತ್ತು ಒತ್ತಡ ಹೇರಲು ಪ್ರಾರಂಭಿಸಿದ್ದ. ಇತ್ತೀಚೆಗೆ ಆರಂಭಿಸಿದ ಸ್ಟಾರ್ಟ್-ಅಪ್ ಕಂಪನಿಯಲ್ಲಿ ಹಣವನ್ನು ಹೂಡಿಕೆ ಮಾಡಬೇಕೆಂದು ನಮ್ಮ ಕುಟುಂಬಕ್ಕೆ ಒತ್ತಾಯಿಸಿದ್ದ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ.
ಇಶಿತಾ ಪೋಷಕರು ಸಲ್ಲಿಸಿದ ದೂರಿನ ಆಧಾರದ ಮೇಲೆ ಮಿಯಾಪುರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು, ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಟೆಕ್ಕಿ ದಂಪತಿ ಹೊರಟಿದ್ದ ಕಾರು ಲಾರಿಗೆ ಡಿಕ್ಕಿ – ನವವಿವಾಹಿತೆ ಸಾವು, ಪತಿ ಸ್ಥಿತಿ ಗಂಭೀರ

