ಮೈಸೂರು: ಮನೆಯವರ ವಿರೋಧ ನಡುವೆಯೂ ಪ್ರೀತಿಸಿದ ಯುವಕನನ್ನು ವರಿಸಿದ ಯುವತಿಗೆ ಹೆತ್ತವರಿಂದ ಕೊಲೆ ಬೆದರಿಕೆ ಬಂದಿದೆ. ಹೀಗಾಗಿ ನವ ದಂಪತಿ ಈಗ ರಕ್ಷಣೆಗಾಗಿ ಪೊಲೀಸ್ ಆಯುಕ್ತರ ಮೊರೆ ಹೋಗಿದ್ದಾರೆ.
ಬೆಂಗಳೂರಿನ ದೊಡ್ಡಕಲ್ಲಸಂಧ್ರ ನಿವಾಸಿ ವೀಣಾ ಹಾಗೂ ಮೈಸೂರು ದಟ್ಟಗಳ್ಳಿ ನಿವಾಸಿ ನಿತಿನ್ ಕುಮಾರ್ ಕಳೆದ 6 ತಿಂಗಳಿನಿಂದ ಪ್ರೀತಿಸುತ್ತಿದ್ದರು. ಜಾತಿ ಬೇರೆ ಎನ್ನುವ ಕಾರಣಕ್ಕೆ ವೀಣಾ ಮನೆಯಲ್ಲಿ ಇವರ ಪ್ರೀತಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಪೋಷಕರ ವಿರೋಧವನ್ನು ಲೆಕ್ಕಿಸದೇ ವೀಣಾ ನಾಲ್ಕು ದಿನಗಳ ಹಿಂದೆ ಶ್ರೀ ರಂಗಪಟ್ಟಣದ ನಿಮಿಷಾಂಬ ದೇವಸ್ಥಾನದಲ್ಲಿ ನಿತಿನ್ ಕೈ ಹಿಡಿದು ರಿಜಿಸ್ಟರ್ ಕಚೇರಿಯಲ್ಲಿ ಮದುವೆ ನೊಂದಣಿ ಮಾಡಿಸಿದ್ದಾರೆ.
ಮದುವೆ ಸುದ್ದಿ ತಿಳಿದ ತಂದೆ ಮಾಯಿಗೌಡ ಪತಿ ಮನೆಗೆ ರೌಡಿಗಳನ್ನ ಕಳುಹಿಸಿ ಗಲಾಟೆ ಮಾಡಿಸಿ ನಿತಿನ್ ಕುಮಾರ್ ಮೇಲೆ ಕಿಡ್ನಾಪ್ ಪ್ರಕರಣ ದಾಖಲಿಸಿದ್ದಾರೆ. ಅಷ್ಟೇ ಅಲ್ಲದೇ ತನ್ನ ತಂದೆಯಿಂದ ಇಬ್ಬರಿಗೂ ಕೊಲೆ ಬೆದರಿಕೆ ಬಂದಿದೆ ಎಂದು ಆರೋಪಿಸಿ ವೀಣಾ ಗಂಡನ ಜೊತೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ರಕ್ಷಣೆ ನೀಡುವಂತೆ ದೂರು ಕೊಟ್ಟಿದ್ದಾರೆ. ಮುಂದೆ ತಮಗೇನಾದರೂ ಅಪಾಯವಾದರೆ ತಮ್ಮ ತಂದೆ ಮಾಯೀಗೌಡ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.