ʻಡೆವಿಲ್ʼ ಆದ ಡೇರಿಯಲ್ ಶತಕ; ವಿಕೆಟ್‌ ಕಸಿಯಲು ತಿಣುಕಾಡಿದ ಭಾರತ – ಕಿವೀಸ್‌ಗೆ 7 ವಿಕೆಟ್‌ಗಳ ಜಯ

1 Min Read

– ಕೆ.ಎಲ್‌ ರಾಹುಲ್‌ ಶತಕದ ಹೋರಾಟ ವ್ಯರ್ಥ

ರಾಜ್‌ಕೋಟ್‌: ಡೇರಿಯಲ್‌ ಮಿಚೆಲ್‌ (Daryl Mitchell), ವಿಲ್‌ ಯಂಗ್‌ (Will Young) ಶತಕದ ಜೊತೆಯಾಟ ನೆರವಿನಿಂದ ಭಾರತದ ವಿರುದ್ಧ ನ್ಯೂಜಿಲೆಂಡ್‌ 7 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿ 1-1 ರಲ್ಲಿ ಸಮಬಲಗೊಂಡಿದೆ.

ಇಲ್ಲಿನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ ಮಾಡಿದ ಭಾರತ (Team India) 7 ವಿಕೆಟ್‌ ನಷ್ಟಕ್ಕೆ 284 ರನ್‌ ಗಳಿಸಿತ್ತು. 285 ರನ್‌ಗಳ ಗುರಿ ಬೆನ್ನಟ್ಟಿದ ಕಿವೀಸ್‌ 47.3 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ನಷ್ಟಕ್ಕೆ 286 ರನ್‌ ಗಳಿಸಿ ಗೆಲುವು ಸಾಧಿಸಿತು.

ವಿಲ್‌-ಮಿಚೆಲ್‌ ಶತಕದ ಜೊತೆಯಾಟ
ಚೇಸಿಂಗ್‌ ಆರಂಭಿಸಿದ ಕಿವೀಸ್‌ಗೆ ಭಾರತ (Team India) ಆರಂಭದಲ್ಲೇ ಆಘಾತ ನೀಡಿತು. 12.4 ಓವರ್‌ಗಳಲ್ಲಿ ಕೇವಲ 46 ರನ್‌ ಗಳಿಸಿದ ನ್ಯೂಜಿಲೆಂಡ್‌ ಆರಂಭಿಕ 2 ವಿಕೆಟ್‌ಗಳನ್ನ ಕಳೆದುಕೊಂಡಿತ್ತು. ಆದ್ರೆ 3ನೇ ವಿಕೆಟ್‌ಗೆ ಜೊತೆಯಾದ ವಿಲ್‌ ಯಂಗ್‌ ಹಾಗೂ ಡೇರಿಯಲ್‌ ಮಿಚೆಲ್‌ ಟೀಂ ಇಂಡಿಯಾ ಬೌಲರ್‌ಗಳನ್ನ ಕಾಡಿದ್ರು. 152 ಎಸೆತಗಳಲ್ಲಿ ಈ ಜೋಡಿ 162 ರನ್‌ಗಳ ಜೊತೆಯಾಟ ನೀಡಿತು. ಡೇರಿಲ್‌ ಮಿಚೆಲ್‌ 2 ಬಾರಿ ಕ್ಯಾಚ್‌ ಕೊಟ್ಟರೂ ವಿಫಲವಾಗಿದ್ದು, ಟೀಂ ಇಂಡಿಯಾಕ್ಕೆ ನುಂಗಲಾರದ ತುತ್ತಾಯಿತು.

ಡೇರಿಯಲ್‌ ʻಡೆವಿಲ್‌ʼ ಶತಕ
ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಡೇರಿಯಲ್‌ ಮಿಚೆಲ್‌ ಅರ್ಧಶತಕ ಗಳಿಸಿದ ಬಳಿಕ ಲಾಂಗ್‌ ಆಫ್‌ನಲ್ಲಿ ಮತ್ತೊಮ್ಮೆ ಲಾಂಗ್‌ ಆನ್‌ನಲ್ಲಿ ಕ್ಯಾಚ್‌ ಕೊಟ್ಟಿದ್ದರು. ಆದ್ರೆ 2 ಬಾರಿಯೂ ಟೀಂ ಇಂಡಿಯಾ ಕ್ಯಾಚ್‌ ಕೈಚೆಲ್ಲಿತು. ಈ ಅವಕಾಶವನ್ನ ಸದುಪಯೋಗ ಪಡಿಸಿಕೊಂಡ ಡೇರಿಯಲ್‌ ಮಿಚೆಲ್‌ ತಾಳ್ಮೆಯ ಆಟವಾಡುತ್ತಾ ತಂಡವನ್ನ ಗೆಲುವಿನತ್ತ ಕೊಂಡೊಯ್ದರು. ಕೊನೆಯವರೆಗೂ ಅಜೇಯರಾಗುಳಿದ ಮಿಚೆಲ್‌ 117 ಎಸೆತಗಳಲ್ಲಿ 131 ರನ್‌ (11 ಬೌಂಡರಿ, 2 ಸಿಕ್ಸರ್)‌ ಬಾರಿಸಿದ್ರು. ಇದರೊಂದಿಗೆ ವಿಲ್‌ ಯಂಗ್‌ 87 ರನ್‌ (98 ಎಸೆತ, 7 ಬೌಂಡರಿ), ಗ್ಲೆನ್‌ ಫ್ಲಿಲಿಪ್ಸ್‌ 32 ರನ್‌, ಡಿವೋನ್‌ ಕಾನ್ವೆ 16 ರನ್‌, ಹೆನ್ರಿ ನಿಕೋಲ್ಸ್‌ 10 ರನ್‌ ಕೊಡುಗೆ ನೀಡಿದ್ರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಭಾರತದ ಪರ ಕೆ.ಎಲ್‌ ರಾಹುಲ್‌ ಅಮೋಘ ಶತಕದೊಂದಿಗೆ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತು. ವಡೋದರಾದಲ್ಲಿ ನ್ಯೂಜಿಲೆಂಡ್ ವಿರುದ್ಧ ತಾಳ್ಮೆಯ ಆಟವಾಡಿ ಭಾರತ ತಂಡವನ್ನ ಗೆಲುವಿನ ದಡ ಸೇರಿಸಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಇದೀಗ ರಾಜ್ ಕೋಟ್ ನಲ್ಲೂ ಶತಕ ಸಿಡಿಸಿ ಮಿಂಚಿದರು. ಭಾರತದ ಮಧ್ಯಮ ಕ್ರಮಾಂಕ ಕುಸಿದ ಸಮಯದಲ್ಲಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಹುಲ್‌ ಟೀಂ ಇಂಡಿಯಾದ ಮಾನ ಕಾಪಾಡಿದರು. ಹೀಗಾಗಿ ಅಂತಿಮವಾಗಿ ಭಾರತ ನಿಗದಿತ 50 ಓವರ್ ಗಳು ಮುಗಿದಾಗ 7 ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿತು.

ಶುಭಮನ್ ಗಿಲ್ ಅರ್ಧಶತಕ
ಎಂದಿಗಿಂತ ನಿಧಾನಗತಿಯಲ್ಲಿ ಆಡಿದ ರೋಹಿತ್ ಶರ್ಮಾ ಅವರು 38 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು. ಇದಾದ ಬಳಿಕ ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಅವರು ತಂಡದ ಇನ್ನಿಂಗ್ಸ್ ಅನ್ನು ಆಧರಿಸಿದರು. ಗಿಲ್ ಅವರು 53 ಎಸೆತದಿಂದ 9 ಬೌಂಡರಿ ಮತ್ತು 1 ಸಿಕ್ಸರ್ ಗಳನ್ನು ಒಳಗೊಂಡ 56 ರನ್ ಗಳಿಸಿರು. ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು 29 ಎಸೆತಗಳಿಂದ 23 ರನ್ ಗಳಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ (17 ಎಸತೆದಲ್ಲಿ 8 ರನ್) ಮತ್ತು ರವೀಂದ್ರ ಜಡೇಜಾ (44 ಎಸೆತದಲ್ಲಿ 27 ರನ್) ರನ್ ಗಳಿಕೆ ನಿಧಾನವಾಗಿದ್ದು ತಂಡದ ಸ್ಕೋರ್ ಮೇಲೂ ಪರಿಣಾಮ ಬೀರಿತು.

ಸ್ಲಾಗ್ ಓವರ್ ಗಳಲ್ಲಿ ಕೆ.ಎಲ್ ರಾಹುಲ್ ಅವರು ಈ ಕೊರತೆ ನೀಗಿಸಿದರು. 87 ಎಸೆತಗಳಲ್ಲಿ 100 ರನ್ ಪೂರೈಸಿದ ಅವರು ಅಂತಿಮವಾಗಿ 92 ಎಸೆತಗಳಿಂದ ಅಜೇಯ 112 ರನ್ ಬಾರಿಸಿದರು. ವಾಶಿಂಗ್ಟನ್ ಸುಂದರ್ ಬದಲಿಗೆ ಕಣಕ್ಕಿಳಿದ ನಿತೀಶ್ ಕುಮಾರ್ ರೆಡ್ಡಿ 21 ಎಸೆತದಲ್ಲಿ 20 ರನ್ ಗಳಿಸಿ ಕೆ.ಎಲ್ ರಾಹುಲ್ ಅವರಿಗೆ ಉತ್ತಮ ಸಾಥ್ ನೀಡಿದರು. ಇವರಿಬ್ಬರು 6ನೇ ವಿಕೆಟ್ ಗೆ 57 ರನ್ ಗಳ ಜೊತೆಯಾಟ ಆಡಿದ್ದು ಮಹತ್ವದ್ದೆನಿಸಿತು.

Share This Article