ಹೊಸ ವರ್ಷದ ಸಂಭ್ರಮ ಕಸಿದ ಕೋವಿಡ್ ಹೆಮ್ಮಾರಿ- ಬೆಂಗ್ಳೂರಿನ ಪ್ರಮುಖ ರಸ್ತೆಗಳೆಲ್ಲವೂ ನಿರ್ಜನ

Public TV
2 Min Read

– ಮೈಸೂರು, ಮಡಿಕೇರಿಯಲ್ಲಿ ಪ್ರವಾಸಿಗರ ದಂಡು

ಬೆಂಗಳೂರು: ಇಡೀ ಜಗತ್ತಿನಲ್ಲಿ ಕೊರೊನಾ ಸುನಾಮಿ ಎದ್ದಿದೆ. ಈ ವರ್ಷವೂ ಹೊಸ ವರ್ಷದ ಸಂಭ್ರಮಾಚರಣೆಗೆ ಕೊರೋನಾ ಕೊಳ್ಳಿ ಇಟ್ಟಿದೆ. ಎಲ್ಲಿಯೂ ಯಾವುದೇ ಸಂಭ್ರಮಾಚರಣೆಗಳು ಕಾಣುತ್ತಿಲ್ಲ. ರಾಜ್ಯದಲ್ಲಿ ಸತತ 2ನೇ ವರ್ಷವೂ ಸರ್ಕಾರ ಹೊಸ ವರ್ಷಾಚರಣೆಯ ಸಾರ್ವಜನಿಕ ಸಂಭ್ರಮಕ್ಕೆ ನಿರ್ಬಂಧ ವಿಧಿಸಿದೆ.

ಬೆಂಗಳೂರಲ್ಲಿ ಸಂಜೆ 6 ಗಂಟೆಯಿಂದ ನಾಳೆ ಬೆಳಗ್ಗೆವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪರಿಣಾಮ ಬಣ್ಣಬಣ್ಣದ ದೀಪಗಳಿಂದ ಅಲಂಕೃತಗೊಳ್ತಿದ್ದ, ಡಿಜೆ, ಅಬ್ಬರದ ಕುಣಿತ, ಜನಜಂಗುಳಿ.. ಹೀಗೆ ನಶೆಯ ಲೋಕದಲ್ಲಿ ತೇಲಿ ಹೋಗ್ತಿದ್ದ ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಚರ್ಚ್‍ಸ್ಟ್ರೀಟ್‍ಗಳು ಬಿಕೋ ಎನ್ನುತ್ತಿವೆ. ಪೊಲೀಸರು ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಎಳೆದು ಬಂದ್ ಮಾಡಿದ್ದಾರೆ.

ಎಂ.ಜಿ ರಸ್ತೆ – ಅನಿಲ್ ಕುಂಬ್ಳೆ ಸರ್ಕಲ್ – ಮೆಯೋ ಹಾಲ್‍ವರೆಗೆ ನಿರ್ಜನ ಪ್ರದೇಶವಾಗಿ ಮಾರ್ಪಾಡು ಮಾಡಲಾಗಿದೆ. ರೆಸಿಡೆನ್ಸಿ ರಸ್ತೆ, ಸೇಂಟ್‍ಮಾಕ್ರ್ಸ್ ರೋಡ್, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‍ಸ್ಟ್ರೀಟ್ ಸೇರಿದಂತೆ 11 ಕಡೆ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಪಾರ್ಟಿ ಮುಗಿಸಿ ಬರುವ ಹೆಣ್ಣುಮಕ್ಕಳ ರಕ್ಷಣೆಗಾಗಿ 10 ಕಡೆ ಸೇಫ್ಟಿ ಐಲ್ಯಾಂಡ್‍ಗಳನ್ನ ನಿರ್ಮಿಸಲಾಗಿದೆ. ಇದನ್ನೂ ಓದಿ: ಬಂಡೀಪುರ ಸಫಾರಿಗೆ ಪ್ರವಾಸಿಗರ ದಂಡು- ರೆಸಾರ್ಟ್‍ಗಳೆಲ್ಲ ಹೌಸ್ ಫುಲ್

ಬುಕ್ ಮಾಡಿದವರಿಗಷ್ಟೇ ಪಬ್, ರೆಸ್ಟೋರೆಂಟ್‍ಗಳಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಕೆಲವರು ಮಧ್ಯಾಹ್ನದಿಂದಲೇ ಪಾರ್ಟಿಯಲ್ಲಿ ತೊಡಗಿದ್ರು. ಇನ್ನು ಕೆಲವೇ ಕ್ಷಣಗಳಲ್ಲಿ ಹೋಟೆಲ್, ರೆಸ್ಟೋರೆಂಟ್, ಪಬ್, ಕ್ಲಬ್, ರೆಸಾರ್ಟ್, ಎಲ್ಲಾ ಅಂಗಡಿ-ಮುಂಗಟ್ಟು ಬಂದ್ ಆಗಲಿವೆ. ಪ್ರಮುಖ ರಸ್ತೆಯಲ್ಲಿ ಸಿಸಿಟಿವಿ ಕಣ್ಗಾವಲಿದ್ದು, ಪೊಲೀಸರು ಎಲ್ಲವನ್ನೂ ಮಾನಿಟರ್ ಮಾಡ್ತಿದ್ದಾರೆ. ನಿಯಮ ಉಲ್ಲಂಘಿಸಿದವರ ಮೇಲೆ ಕೇಸ್ ಹಾಕಲಿದ್ದಾರೆ.

ಇತ್ತ ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಿದೆ. ಚಿಕ್ಕಬಳ್ಳಾಪುರದ ನಂದಿಬೆಟ್ಟ ಜನವರಿ 2ರವರೆಗೆ ಬಂದ್ ಆಗಿದೆ. ಗುಡಿಬಂಡೆಯ ಆವಲಬೆಟ್ಟಕ್ಕೂ ನಿರ್ಬಂಧ ಹೇರಲಾಗಿದೆ. ಸ್ಕಂದಗಿರಿಯಲ್ಲಿ ಚಾರಣಕ್ಕೆ ಮಾತ್ರ ಅವಕಾಶ ಇದೆ. ಕೋಲಾರದ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ಭಕ್ತರು ಬರುವಂತಿಲ್ಲ. ಮಂಡ್ಯದ ಮೇಲುಕೋಟೆ, ಕೆರೆ ತೊಣ್ಣೂರು, ಕುಂತಿಬೆಟ್ಟಕ್ಕೆ ತೆರಳುವುದಕ್ಕೆ ನಾಳೆ ರಾತ್ರಿ 10ವರೆಗೆ ನಿರ್ಬಂಧ ಹೇರಲಾಗಿದೆ. ಉಡುಪಿಯ ಸೇಂಟ್ ಮೇರಿಸ್ ದ್ವೀಪದಲ್ಲಿ ಪ್ರವಾಸಿಗರು ಕಂಡುಬಂದ್ರು.

ದಕ್ಷಿಣ ಕನ್ನಡದ ಪಣಂಬೂರು, ತಣ್ಣೀರುಬಾವಿ, ಸೋಮೇಶ್ವರ, ಉಳ್ಳಾಲ, ಸುರತ್ಕಲ್ ಸೇರಿ ಎಲ್ಲಾ ಬೀಚ್‍ಗಳು ಸಂಜೆಯವರೆಗೂ ತುಂಬಿ ತುಳುಕ್ತಿದ್ವು. ಸಂಜೆ 7 ಗಂಟೆ ನಂತರ ಎಲ್ಲಾ ಬಂದ್ ಆಯ್ತು. ಉತ್ತರ ಕನ್ನಡದ ಬೀಚ್‍ಗಳಲ್ಲಿ ರಾತ್ರಿ 8 ಗಂಟೆಗೆ ಕಫ್ರ್ಯೂ ಜಾರಿ ಮಾಡಲಾಗಿದೆ. ಹೀಗಾಗಿ ಬಹುತೇಕ ಪ್ರವಾಸಿಗರು ಗೋವಾ ಬೀಚ್ ಕಡೆಗೆ ಮುಖ ಮಾಡಿದ್ರು. ಇನ್ನು, ಮೈಸೂರು ವರ್ಷದ ಕೊನೆಯ ದಿನ ತುಂಬಿ ತುಳುಕ್ತಿತ್ತು. ಅರಮನೆ, ಮೃಗಾಲಯ, ಚಾಮುಂಡಿಬೆಟ್ಟಕ್ಕೆ ಜನಸಾಗರವೇ ಹರಿದು ಬಂದಿತ್ತು. ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಿಗೆ ದೊಡ್ಡಮಟ್ಟದಲ್ಲಿ ಪ್ರವಾಸಿಗರು ಬಂದಿದ್ದಾರೆ. ತುಮಕೂರಿನ ದೇವರಾಯನದುರ್ಗ, ನಾಮದಚಿಲುಮೆಗೆ ನಾಳೆ ಬೆಳಗ್ಗೆ 5 ಗಂಟೆವರೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

Share This Article
Leave a Comment

Leave a Reply

Your email address will not be published. Required fields are marked *