ಹಾಯ್‌ 2023.. ಹೊಸ ವರ್ಷ ನಿನಗೆ ಸುಸ್ವಾಗತ

Public TV
3 Min Read

ಹೋಯ್ತು ಹಳೆ ವರ್ಷ.. ಬಂತು ಹೊಸ ವರ್ಷ.. ಬನ್ನಿ ಎಂಜಾಯ್‌ ಮಾಡೋಣ. ʼನಿನ್ನೆ ನಿನ್ನೆಗೆ.. ನಾಳೆ ನಾಳೆಗೆ.. ಇಂದು ನಮ್ಮದೇ, ಚಿಂತೆ ಏತಕೆ..ʼ ಎಂಬ ಹಾಡು ಎಷ್ಟು ಸೊಗಸಾಗಿದೆ ಅಲ್ವಾ. ಸವಿನೆನಪುಗಳು ಮನದ ಚಿತ್ರಪಟ ಸೇರಲಿ. ಕಹಿ ನೆನಪುಗಳು ಹಳೆ ಕ್ಯಾಲೆಂಡರ್‌ನಂತೆ ಕಸದ ಬುಟ್ಟಿಗೆ ಹೋಗಲಿ. ಹೊಸ ಹುರುಪು, ಭರವಸೆ, ಆಸೆ, ಗುರಿಗಳೊಂದಿಗೆ ಹೆಜ್ಜೆ ಇಡೋಣ ಅಂತಾ ಸಂಕಲ್ಪ ಮಾಡುವ ಸಮಯವಿದು.

ಹೊಸ ವರ್ಷವನ್ನು (New Year 2023) ಖುಷಿ, ಸಂಭ್ರಮಾಚರಣೆ ಮೂಲಕ ಸ್ವಾಗತಿಸುವುದು ಸಾಮಾನ್ಯ. 2022ಕ್ಕೆ ಗುಡ್‌ಬೈ.. 2023 ಹಾಯ್‌ ಹಾಯ್‌ ಹೇಳೋದಕ್ಕೊಂದು ಜೋಶ್‌ ಅಂತು ಇದ್ದೇ ಇರುತ್ತೆ. ನ್ಯೂ ಇಯರ್‌ ಅನ್ನು ಆರಂಭದ ದಿನ ಎಲ್ಲರೂ ಖುಷಿಯಿಂದ ಬರಮಾಡಿಕೊಳ್ಳುತ್ತಾರೆ. ಮನೆ ಹಾಗೂ ಸುತ್ತಮುತ್ತಲ ವಾತಾವರಣ ಕಲರ್‌ಫುಲ್‌ ಆಗಿರುತ್ತೆ. ಕುಟುಂಬದವರು, ನೆರೆಹೊರೆಯವರಿಗೆ ಸಿಹಿ ಹಂಚಿ ಸಂಭ್ರಮಿಸುವುದು, ಪ್ರೀತಿ ಪಾತ್ರರಿಗೆ ಶುಭ ಸಂದೇಶ ಕಳುಹಿಸುವುದು, ಕ್ಲಬ್‌-ಪಬ್‌ನಲ್ಲಿ ಕುಣಿದು ಕುಪ್ಪಳಿಸುವುದು, ಬಿಯರ್‌ ಚಿಯರ್ಸ್‌ ಹೇಳುವುದು, ಇಷ್ಟದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು.. ಎಲ್ಲ ಕೂಡ ಪ್ರತಿ ವರ್ಷದಂತೆಯೇ. ಆದರೆ ವರ್ಷ ವರ್ಷ ಅದಕ್ಕೊಂದು ಹೊಸ ರೂಪ ಇರುತ್ತೆ. ಪ್ರವಾಸಿ ತಾಣಗಳು ಬದಲಾಗಿರುತ್ತವೆ, ಕೆಲವರಿಗೆ ಸ್ನೇಹಿತರು ಹಾಗೂ ಸಂಭ್ರಮದ ತಾಣಗಳಲ್ಲಿ ಚೇಂಜ್‌ ಆಗಿರುತ್ತೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಬಿಂದಾಸ್‌ ವೆಲ್‌ಕಮ್‌ – ಎಲ್ಲೆಲ್ಲೂ ಸಂಭ್ರಮ, ಸಡಗರ

ಒಂದೆಡೆ ನಮ್ಮಲ್ಲೇ ಚಿಂತನ-ಮಂಥನ ಕೂಡ ನಡೆಯುತ್ತೆ. ಹೊಸ ವರ್ಷದ ಹೊಸ್ತಿಲಲ್ಲಿ ಕುಳಿತು ನಾವು ಗಂಭೀರವಾಗಿ ಯೋಚಿಸುತ್ತೇವೆ. ವರ್ಷಗಳು ಎಷ್ಟು ಬೇಗ ಉರುಳುತ್ತಿವೆ? ಹೊಸ ವರ್ಷವನ್ನಂತು ಸಂಭ್ರಮದಿಂದಲೇ ಸ್ವಾಗತಿಸುತ್ತೇವೆ. ಆದರೆ ವರ್ಷಗಳು ಬದಲಾದಂತೆ ನಾವು ಕೂಡ ಬದಲಾಗಿದ್ದೀವಾ? ಹಿಂದೆ ಅಂದುಕೊಂಡಿದ್ದನ್ನು ಸಾಧಿಸಿದ್ದೀವಾ? ಇಟ್ಟಿದ್ದ ಗುರಿ ಮುಟ್ಟಿದ್ದೀವಾ ಎಂಬ ಪ್ರಶ್ನೆಗಳು ಎದುರಾಗುತ್ತವೆ. ಅದಕ್ಕೆ ಉತ್ತರವೂ ಸಿಕ್ಕಿರುತ್ತದೆ. ಒಂದು ವೇಳೆ ನಾವು ಅಂದುಕೊಂಡಿದ್ದು, ಇಟ್ಟಿದ್ದ ಗುರಿಯನ್ನು ಸಾಧಿಸಿಲ್ಲ ಎಂದಾದರೆ ಈ ಬಾರಿ ಅದು ಸಾಧ್ಯವಾಗಬೇಕು ಎಂಬ ಸಂಕಲ್ಪ ತೊಡಬೇಕು.

ಸಮುದ್ರದ ಅಲೆಯಂತೆ ಮನುಷ್ಯನ ಬದುಕಿನಲ್ಲೂ ಏರಿಳಿತ ಇರುತ್ತದೆ. ರುಚಿಯಂತೆ ಸಿಹಿ-ಕಹಿಯೂ ಇರುತ್ತದೆ. ಆದರೆ ಕಠಿಣ ಪರಿಶ್ರಮ, ಇಚ್ಛಾಶಕ್ತಿ ಮಾತ್ರ ನಾವು ಸಾಧನೆ ಶಿಖರವೇರಲು ಸಾಧ್ಯ ಎಂಬ ಭಾವನೆ ಬರಬೇಕು. ಆ ಸಂಕಲ್ಪದೊಂದಿಗೆ ಹೊಸ ವರ್ಷವನ್ನು ಎಲ್ಲರೂ ಸ್ವಾಗತಿಸಿದರೆ ಅದಕ್ಕೊಂದು ಅರ್ಥ, ಸಾರ್ಥಕತೆ ಇರುತ್ತೆ. ಹಿಂದಿನ ನನ್ನ ಸೋಲಿಗೆ ಕಾರಣವೇನು? ಯಶಸ್ಸಿಗೆ ಇನ್ನೆಷ್ಟು ಪರಿಶ್ರಮ ಹಾಕಬೇಕು ಅಂತಾ ನಮ್ಮನ್ನು ನಾವೇ ವಿಮರ್ಶೆಗೆ ಒಡ್ಡಿಕೊಳ್ಳುತ್ತಾ ಮುಂದೆ ಸಾಗುವುದು ಬುದ್ಧಿವಂತರ ಲಕ್ಷಣ. ಇದನ್ನೂ ಓದಿ: ಹೊಸ ವರ್ಷವನ್ನು ಯಾವ ದೇಶ ಮೊದಲು ಆಚರಿಸುತ್ತೆ ಗೊತ್ತಾ?

ಒಂದು ವರ್ಷದಲ್ಲಿ ಏನೆಲ್ಲಾ ಘಟಿಸಿ ಹೋಯಿತು? ಇಷ್ಟದವರನ್ನು ಕಳೆದುಕೊಂಡೆವು, ಅಂದುಕೊಂಡಿದ್ದು ಆಗಲಿಲ್ಲ ಎಂಬ ಚಿಂತೆ ಕೆಲವರಲ್ಲಿ ಬರಬಹುದು. ಅಬ್ಬಾ.. ಈ ವರ್ಷವನ್ನು ನಾನೆಂದೂ ಮರೆಯಲ್ಲ. ಗುರಿ ತಲುಪಿದೆ. ಇಷ್ಟಪಟ್ಟವರು ಸಿಕ್ಕರು. ಹೊಸ ವರ್ಷವೂ ಹೀಗೆ ಇರಲಿ ಅಂತಾ ಥ್ರಿಲ್‌ ಆಗುವವರೂ ಇರಬಹುದು. ಇಲ್ಲಿ ವ್ಯಕ್ತಿಗಳು, ಸನ್ನಿವೇಶಗಳು ಬೇರೆಯಾಗಿರಬಹುದು. ಆದರೆ ಈ ಎರಡೂ ಒಂದೇ ವರ್ಷ ಆಗಿದ್ದಲ್ಲವೇ. ಕಾಲಚಕ್ರ ಉರುತ್ತಿರುತ್ತದೆ. ಸೋತವರು ಮುಂದೆ ಗೆಲ್ಲಬಹುದು. ಗೆದ್ದವರು ಮತ್ತೆ ಸೋಲಬಹುದು. ಗೆದ್ದಾಗ ಹಿಗ್ಗದೇ, ಸೋತಾಗ ಕುಗ್ಗದೇ ಹೊಸತನಕ್ಕೆ ತುಡಿಯುವುದೇ ಜೀವನ ಅಲ್ಲವೇ?

ಹೊಸ ವರ್ಷಕ್ಕೆ ಕ್ಯಾಲೆಂಡರ್‌ ಬದಲಾಯಿಸಿದ್ದು ಆಯ್ತು. ಈಗ ಸಂಭ್ರಮಿಸುವ, ಕುಣಿದು ಕುಪ್ಪಳಿಸುವ ಘಳಿಗೆ. ಎಲ್ಲರೂ ಸಂಭ್ರಮಿಸೋಣ. ಆದರೆ ಮಾರಕ ಕೊರೊನಾ ವೈರಸ್‌ ಬಗ್ಗೆ ಜಾಗೃತರಾಗಿರೋಣ. ಮನುಕುಲವನ್ನು 2 ವರ್ಷ ಕೋವಿಡ್‌ ಕಾಡಿದ್ದು ಹೇಗೆ ಎಂಬುದು ಎಲ್ಲರಿಗೂ ಗೊತ್ತು. ವೈರಸ್‌ ಬಗ್ಗೆ ಎಚ್ಚರಿಕೆಯಿಂದಿದ್ದು, ಸಂಭ್ರಮಾಚರಣೆ ಮಾಡುವುದು ಒಳಿತು. ಹೊಸ ವರ್ಷದಲ್ಲಿ ಹೊಸ ತುಡಿತವಿರಲಿ. ಪಾಸಿಟಿವ್‌ ಆಲೋಚನೆಗಳಿರಲಿ. ಯಶಸ್ಸು ಕಡೆಗೆ ದಿಟ್ಟ ನಿಲುವಿರಲಿ. ಎಲ್ಲರೊಟ್ಟಿಗೆ ಪ್ರೀತಿ-ವಿಶ್ವಾಸದಿಂದ ಸಾಗುವ ಭಾವನೆ ಇರಲಿ. ಧರ್ಮ, ಭಾಷೆ ಭೇದವನ್ನು ಮರೆತು ಎಲ್ಲರೂ ಒಟ್ಟಾಗಿ ಹೊಸ ವರ್ಷವನ್ನು ಸ್ವಾಗತಿಸೋಣ. ಇದನ್ನೂ ಓದಿ: ಹೊಸವರ್ಷ ಸಂಭ್ರಮಾಚರಣೆಗೆ ರಂಗೇರಿದ ಬೆಂಗಳೂರು

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *