ಹಾಸನ: ಪತಿಗೆ ವಿಷದ ಇಂಜೆಕ್ಷನ್ ನೀಡಿ ಕೊಲೆ ಕೇಸಿಗೆ ಮತ್ತೊಂದು ಟ್ವಿಸ್ಟ್

Public TV
3 Min Read

ಹಾಸನ: ಪತ್ನಿಯೇ ಪತಿಗೆ ಜ್ಯೂಸ್ ನಲ್ಲಿ ನಿದ್ದೆ ಮಾತ್ರೆ ಕುಡಿಸಿ ಇಂಜೆಕ್ಷನ್ ನೀಡಿ ಹತ್ಯೆ ಮಾಡಿದ ಆರೋಪ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಆರೋಪಿಯಾಗಿರುವ ಪತ್ನಿಗೆ ಬೇರೊಬ್ಬನ ಜೊತೆ ಸ್ನೇಹ ಇರುವ ವಿಚಾರ ಈಗ ಬೆಳಕಿಗೆ ಬಂದಿದೆ.

ಹಾಸನ ತಾಲೂಕು ಕಿತ್ತನಕೆರೆಯಲ್ಲಿ ಕೃಷಿ ಮಾಡುತ್ತಿದ್ದ ವಿಶ್ವನಾಥ್ ಮತ್ತು ಮೆಡಿಕಲ್ ಶಾಪ್ ನಲ್ಲಿ ಉದ್ಯೋಗದಲ್ಲಿದ್ದ ಕೌಶಿಕ ಗ್ರಾಮದ ಆಶಾ ಫೆಬ್ರವರಿಯಲ್ಲಿ ಮದುವೆಯಾಗಿದ್ದರು. ಆದರೆ ಈ ಮದುವೆಗೆ ಮೊದಲು ಸಂತೋಷ್ ಎಂಬಾತನ ಜೊತೆ ಆಶಾ ಸ್ನೇಹ ಬೆಳೆಸಿದ್ದಳು. ಕಳೆದ ಐದಾರು ವರ್ಷಗಳ ಹಿಂದಿನಿಂದಲೂ ಆಶಾ ಮತ್ತು ಸಂತೋಷ್ ಗೆಳೆತನ ಹೊಂದಿದ್ದು, ಮದುವೆಯಾಗಿ ಮೂರು ತಿಂಗಳಾಗಿದ್ದರೂ ಆಶಾ ಅಂತರ ಕಾಯ್ದುಕೊಂಡಿದ್ದಳು.

ಪ್ರವಾಸ ಹೋಗಿದ್ದ ವೇಳೆ ಆಶಾಳಿಗೆ ಪರಿಚಯವಾಗಿದ್ದ ಸಂತೋಷ್ ನಂತರ ಆಕೆಯ ಜೊತೆ ನಿರಂತರ ಸಂಪರ್ಕದಲ್ಲಿದ್ದ. ಅಷ್ಟೇ ಅಲ್ಲದೇ ಆಶಾಳಿಗೆ ಮೊಬೈಲ್ ಕೊಡಿಸಿದ್ದ. ಈ ಎಲ್ಲ ಮಾಹಿತಿಯನ್ನು ಆಶಾಳ ಮಾವ ಬೋರಶೆಟ್ಟಿ ತಿಳಿಸಿದ್ದು, ಈ ಕೊಲೆಗೆ ಸಂತೋಷ್ ಸಂಚು ರೂಪಿಸಿರುವ ಶಂಕೆ ವ್ಯಕ್ತವಾಗಿದೆ.

ಏನಿದು ಕೊಲೆ ಕೇಸ್?
ವಿಶ್ವನಾಥ್ ಮತ್ತು ಆಶಾ, ಹತ್ತಿರದ ಸಂಬಂಧಿಗಳಾಗಿದ್ದರಿಂದ ಚಿಕ್ಕಂದಿನಿಂದಲೂ ಒಟ್ಟಿಗೆ ಬೆಳೆದಿದ್ದರು. ಈ ಕಾರಣಕ್ಕೆ ಫೆಬ್ರವರಿ 15 ರಂದು ಇವರಿಬ್ಬರ ಮದುವೆ ನಡೆದಿತ್ತು. ಮದುವೆಗೆ ಎರಡೂ ಮನೆಯವರ ಸಹಕಾರವಿತ್ತು. ಮದುವೆಯಾದ ಒಂದೆರಡು ತಿಂಗಳವರೆಗೂ ನವಜೋಡಿ ಸಂಬಂಧಿಕರ ಮನೆ, ಸಿನಿಮಾ ಹೀಗೆ ಎಲ್ಲಾ ಕಡೆ ಓಡಾಡಿಕೊಂಡಿದ್ದರು. ಆದ್ರೆ ಇಬ್ಬರ ನಡುವೆ ಏನಾಯಿತೋ ಏನೋ ಮದುವೆಯಾದ ಎರಡೇ ತಿಂಗಳಿಗೆ ದಾಂಪತ್ಯದಲ್ಲಿ ಬಿರುಕು ಮೂಡಿತ್ತು.

ಆದರೆ ಸಂಬಂಧ ಹಾಳಾಗಲಿದೆ ಎನ್ನುವ ಒಂದೇ ಕಾರಣಕ್ಕೆ ಈ ವಿಷಯವನ್ನು ವಿಶ್ವನಾಥ್ ಯಾರ ಬಳಿಯೂ ಹೇಳಿರಲಿಲ್ಲ. ಕಳೆದ ಏಪ್ರಿಲ್ 24 ರಂದು ಸಂಬಂಧಿಕರ ಮಗುವಿನ ನಾಮಕರಣಕ್ಕೆ ಹೋಗಬೇಕು ಎಂದು ಗಂಡನೊಂದಿಗೆ ಹಾಸನಕ್ಕೆ ಆಶಾ ಹೋಗಿದ್ದಳು. ಮಹಾರಾಜ ಪಾರ್ಕ್ ನಲ್ಲಿ ಇಬ್ಬರು ಕುಳಿತುಕೊಂಡಿದ್ದ ವೇಳೆ ಏಕಾಏಕಿ ಕುಸಿದು ಬಿದ್ದ ವಿಶ್ವನಾಥ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಸಂಜೆ ಮನೆಗೆ ಬಂದ ವಿಶ್ವನಾಥ್ ನಡೆದ ಘಟನೆಯನ್ನು ವಿವರಿಸಿದ್ದಾರೆ. ಮಾರನೇ ದಿನ ಅನಾರೋಗ್ಯಕ್ಕೆ ತುತ್ತಾಗಿದ್ದ ವಿಶ್ವನಾಥ್ ಅವರನ್ನು ಹಾಸನ, ಅಲ್ಲಿಂದ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ವಿಶ್ವನಾಥ್ ಅವರು ಮೇ 2ರ ಸಂಜೆ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ವಿಶ್ವನಾಥ್ ಹೇಳಿದ್ದೇನು?
ಮದುವೆಯಾದ ಬಳಿಕ ಹುಟ್ಟುವ ಮಗುವಿನ ಬಗ್ಗೆ ನಮ್ಮಲ್ಲಿ ಚರ್ಚೆ ನಡೆದಿತ್ತು. ಮಹಾರಾಜ ಪಾರ್ಕ್ ನಲ್ಲಿ ನಾವು ಕುಳಿತ್ತಿದ್ದಾಗ ಆಶಾ ಭವಿಷ್ಯದಲ್ಲಿ ಹುಟ್ಟುವ ಮಗು ಬೆಳ್ಳಗಿರಬೇಕು ಎಂದು ಹೇಳಿ ಮಾತ್ರೆ ಮತ್ತು ಜ್ಯೂಸ್ ನೀಡಿದ್ದಳು. ಆಕೆಯ ಮಾತನ್ನು ನಂಬಿ ನಾನು ಜ್ಯೂಸ್‍ನೊಂದಿಗೆ 4-5 ಮಾತ್ರೆ ನುಂಗಿದ್ದೇನೆ. ಬಳಿಕ ಆಕೆ ಇಂಜೆಕ್ಷನ್ ನೀಡಿದ್ದಾಳೆ. ಬಳಿಕ ನನಗೆ ಏನಾಯ್ತು ಗೊತ್ತಿಲ್ಲ ಎಂದು ಎಂದು ವಿಶ್ವನಾಥ್ ಸಂಬಂಧಿಕರಿಗೆ ಆಸ್ಪತ್ರೆಯಲ್ಲಿ ತಿಳಿಸಿದ್ದರು.

ಸಂಬಂಧಿಕರು ಹೇಳೋದು ಏನು?
ಗಂಡ ತನ್ನ ಬಣ್ಣಗೆ ಮ್ಯಾಚ್ ಆಗಲ್ಲ. ನನಗಿಂತ ಎತ್ತರ ಆಗಿದ್ದಾನೆ ಎಂದು ಆಶಾ ನಿಂದಿಸುತ್ತಿದ್ದಳು. ಆಶಾ ಮೊದಲೇ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದುರಿಂದ ಆಕೆ ದುರುದ್ದೇಶದಿಂದಲೇ ಹೀಗೆ ಮಾಡಿದ್ದಾಳೆ. ಅಲ್ಲದೇ ಆಕೆಗೆ ಬೇರೊಬ್ಬರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಚಾರ ತಿಳಿದು ಮುಂದೆ ಗಂಡ ಎಲ್ಲಿ ಅಡ್ಡಿ ಬರುತ್ತಾನೋ ಎಂಬ ಕಾರಣದಿಂದ ವಿಷದ ಜ್ಯೂಸ್ ನೀಡಿದ್ದಾಳೆ. ಪತಿ ಪ್ರಜ್ಞೆ ತಪ್ಪಿ ಬಿದ್ದ ಬಳಿಕ ಆಕೆ ಅಲ್ಲಿಂದ ಪರಾರಿಯಾಗಿದ್ದಾಳೆ ಎಂದು ವಿಶ್ವನಾಥ್ ಅವರ ತಂದೆ ಬೋರ ಶೆಟ್ಟಿ ಆರೋಪಿಸಿದ್ದಾರೆ.

ತನಿಖೆ ಎಲ್ಲಿಯವರೆಗೆ ಬಂದಿದೆ?
ವಿಶ್ವನಾಥ್ ಮನೆಯವರು ನೀಡಿದ ದೂರು ಆಧರಿಸಿ ಆಶಾಳನ್ನು ವಶಕ್ಕೆ ಪಡೆದಿರುವ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆ ವರದಿ ಬಂದ ನಂತರ ವಿಶ್ವನಾಥ್ ಸಾವಿನ ರಹಸ್ಯ ತಿಳಿಯಲಿದೆ ಎಂದು ಪೊಲೀಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *