ವರನದ್ದು ಯಾವುದೇ ತಪ್ಪಿಲ್ಲ, ಹೊಳೆನರಸೀಪುರ ಮದ್ವೆ ರದ್ದಾಗಲು ಮಗಳೇ ಕಾರಣ: ಪೋಷಕರು

Public TV
3 Min Read

ಬೆಂಗಳೂರು: ಸತತ ಏಳು ವರ್ಷಗಳಿಂದ ಪ್ರೀತಿಸಿದ ಯುವಕನೊಬ್ಬ ಕೈ ಕೊಟ್ಟ ಹಿನ್ನೆಲೆಯಲ್ಲಿ ಭಾನುವಾರ ಹೊಳೆನರಸೀಪುರ ಪಟ್ಟಣದಲ್ಲಿ ನಡೆಯಬೇಕಿದ್ದ ಮದುವೆಯೊಂದು ಮುರಿದುಬಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಈ ಪ್ರಕರಣದಲ್ಲಿ ಸಂದೇಶ್‍ನದ್ದು ಯಾವುದೇ ತಪ್ಪಿಲ್ಲ. ತಪ್ಪು ಎಲ್ಲ ಮಗಳಾದ ಭುವನಳದ್ದೇ ಎಂದು ಆಕೆಯ ಪೋಷಕರಾದ ವೆಂಕಟೇಶ್ ಮತ್ತು ಶೀಲಾ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ನಿಶ್ಚಿತಾರ್ಥ ನಡೆದ ಬಳಿಕ ಆಕೆ 50 ಲಕ್ಷ ರೂ. ಹಣ ಬೇಕು. ಅರ್ಧ ಕೆಜಿ ಚಿನ್ನ ಬೇಕು ಎಂದು ಬೇಡಿಕೆ ಇಟ್ಟಿದ್ದಾಳೆ. ಈ ಬೇಡಿಕೆ ಶಾಕ್ ಆಗಿ ಸಂದೇಶ್ ಮದುವೆಯಾಗಲು ಹಿಂದೇಟು ಹಾಕಿದ್ದಾನೆ. ನಿಶ್ಚಿತಾರ್ಥಕ್ಕೂ ಮೊದಲು ಯಾವುದೇ ಬೇಡಿಕೆ ಇಟ್ಟಿಲ್ಲ. ಇಬ್ಬರು ಚೆನ್ನಾಗಿಯೇ ಇದ್ದರು. ಆದರೆ ಈಗ ದಿಢೀರ್ ಬೇಡಿಕೆ ಇಟ್ಟಿದ್ದಾಳೆ. ಮದುವೆಯಾಗಲು ನಿರಾಕರಿಸಿದ್ದಕ್ಕೆ ಆಕೆ ಈಗ ಆತನ ಮೇಲೆ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಕೇಸ್ ಹಾಕಿದ್ದಾಳೆ ಎಂದು ಭುವನಳ ತಾಯಿ ಶೀಲಾ ತಿಳಿಸಿದ್ದಾರೆ.

ಈ ವಿಚಾರದ ಬಗ್ಗೆ ಸಂದೇಶ್ ಅವರು ಕೆಲಸ ಮಾಡುತ್ತಿದ್ದ ಕಂಪೆನಿಯ ಸಹೋದ್ಯೋಗಿ ಸೃಷ್ಟಿ ಮಾತನಾಡಿ, ಕಳೆದ 15 ದಿನಗಳಿಂದ ಸಂದೇಶ ಆಫೀಸಿಗೆ ಬರುತ್ತಿಲ್ಲ. ಯಾಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದಾಗ ವಿಚಾರ ಎಲ್ಲ ಸಹೋದ್ಯೋಗಿಗಳಿಗೆ ತಿಳಿಯಿತು. ಮದುವೆಗೆ ಒಪ್ಪಿಗೆ ನೀಡದ್ದಕ್ಕೆ ನಮ್ಮ ಕಚೇರಿಯ ಆಫೀಸಿನ ಗೋಡೆಗೆ ಭುವನಾ ಸಂದೇಶ್‍ಗೆ ಮುತ್ತು ನೀಡುತ್ತಿರುವ ಫೋಟೋವನ್ನು ಅಂಟಿಸಿ ಹೋಗಿದ್ದಾಳೆ. ನಮ್ಮ ಕಚೇರಿ ಅಲ್ಲದೇ ಹೊಳೆ ನರಸೀಪುರ ಪಟ್ಟಣದಲ್ಲಿರುವ ಅಂಗಡಿಗಳ ಮುಂದೆ ಫೋಟೋವನ್ನು ಪ್ರಕಟಿಸಿದ್ದಾಳೆ ಎಂದು ತಿಳಿಸಿದರು.

 

ಸಂದೇಶ್ ಈಗಾಗಲೇ 20 ಲಕ್ಷ ರೂ. ಮೌಲ್ಯದ ನೆಕ್ಲೇಸ್ ನೀಡಿದ್ದು, ಚಿನ್ನವನ್ನು ಕೊಟ್ಟಿದ್ದಾರೆ. ಭುವನ ಮದುವೆಯ ಸಂದರ್ಭದಲ್ಲಿ ಕಾರನ್ನು ಗಿಫ್ಟ್ ನೀಡಬೇಕೆಂದು ಹಠ ಹಿಡಿದ ಹಿನ್ನೆಲೆಯಲ್ಲಿ 14 ಲಕ್ಷ ರೂ. ಮೌಲ್ಯದ ಕ್ರೇಟಾ ಕಾರನ್ನು ಬುಕ್ ಮಾಡಿದ್ದಾರೆ.ಅಷ್ಟೇ ಅಲ್ಲದೇ ಸಂದೇಶ್ ಭುವನಾಳಿಗಾಗಿ ಜೆಪಿ ನಗರದಲ್ಲಿ 1.5 ಕೋಟಿ ರೂ. ಮೌಲ್ಯದ ಮನೆಯನ್ನು ಖರೀದಿಸಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

ಕೆಲ ದಿನಗಳ ಹಿಂದೆ ನನ್ನ ಎಲ್ಲ ಬೇಡಿಕೆ ಈಡರಿಸದೇ ಇದ್ದಲ್ಲಿ ಬೇರೆ ಹುಡುಗಿಯನ್ನು ಮದುವೆಯಾಗು. ನಾನು ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಭುವನ ಸಂದೇಶ್ ಗೆ ವಾಟ್ಸಪ್ ಮೆಸೇಜ್ ಕಳುಹಿಸಿದ್ದಳು. ಮೆಸೇಜ್ ನೋಡಿ ಗಲಿಬಿಲಿಯಾಗಿ ಸಂದೇಶ್ ಭುವನಳ ಪೋಷಕರಿಗೆ ತಿಳಿಸಿ ನೋವನ್ನು ಹೇಳಿಕೊಂಡಿದ್ದಾರೆ. ಇದಾದ ಬಳಿಕ ಅವರೇ ಸಂದೇಶ್‍ಗೆ ಧೈರ್ಯ ತುಂಬಿದ್ದಾರೆ. ತನ್ನ ಮದುವೆಗೆ ಪೋಷಕರು ಸಹಕಾರ ನೀಡದ ಹಿನ್ನೆಲೆಯಲ್ಲಿ ಭುವನ ಬೆಂಗಳೂರಿನಲ್ಲಿ ಸಂದೇಶ್ ವಿರುದ್ಧ ಜಾತಿ ನಿಂದನೆ ದೂರು ನೀಡಿದ್ದು, ನವೆಂಬರ್ 25ರಂದು ಪ್ರಕರಣ ದಾಖಲಾಗಿದೆ. ಈ ಕೇಸ್ ಹಾಕಿದ ಬಳಿಕ ಭುವನ ಪೋಷಕರು ಈ ಪ್ರಕರಣವನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಸಂದೇಶ್ ಅವರಿಗೆ ಸಹಕಾರ ನೀಡುತ್ತಿದ್ದಾರೆ.

ಭುವನ ಮಾಧ್ಯಮಗಳಿಗೆ ಹೇಳಿದ್ದು ಏನು?
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಂದು ಬೆಂಗಳೂರಿನಲ್ಲಿ ವಾಸವಾಗಿರುವ ಮೂಲತಃ ಹೊಳೆನರಸೀಪುರದ ಸಂದೇಶ್ ಶೆಟ್ಟಿ ಜೊತೆ ನನ್ನ ಮದುವೆ ನಡೆಯಬೇಕಿತ್ತು. ಏಳು ವರ್ಷಗಳ ಹಿಂದೆ ಬಸ್ ನಲ್ಲಿ ನನ್ನನ್ನು ಪರಿಚಯ ಮಾಡಿಕೊಂಡ ಸಂದೇಶ್ ನನ್ನನ್ನು ಪ್ರೀತಿಸುವ ನಾಟಕವಾಡಿದ್ದಾನೆ. ಅಲ್ಲದೇ ನನ್ನನ್ನು ಉಪಾಯದಿಂದ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಪ್ರೀತಿಯ ವಿಚಾರ ಗೊತ್ತಾಗಿ ಸಂದೇಶ್ ಪೋಷಕರು ನನ್ನನ್ನು ಮದುವೆಯಾಗುವುದಕ್ಕೆ ವಿರೋಧಿಸಿದ್ದಾರೆ. ಹಲವು ದಿನಗಳಿಂದ ಸಂದೇಶ್ ಗೆ ಬೇರೆ ಯುವತಿಯೊಂದಿಗೆ ಮದುವೆ ಮಾಡಿಕೊಳ್ಳಲು ಆತನ ಪೋಷಕರು ಒತ್ತಾಯ ಮಾಡುತ್ತಿದ್ದಾರೆ. ಈ ಮಧ್ಯೆ ಮೂರು ತಿಂಗಳ ಹಿಂದೆ ನಮ್ಮ ಮನೆಗೆ ಆಗಮಿಸಿದ ಸಂದೇಶ್ ಮತ್ತು ಪೋಷಕರು ಇಬ್ಬರ ಮದುವೆಗೆ ಒಪ್ಪಿಗೆ ಸೂಚಿಸಿ ನಿಶ್ಚಿತಾರ್ಥ ಮಾಡಿಕೊಂಡು ಮದುವೆ ದಿನಾಂಕವನ್ನು ಗೊತ್ತುಪಡಿಸಿದ್ದರು. ಆದರೆ ಇಂದು ಏಕಾಏಕಿ ತನಗೆ ಮದುವೆ ಇಷ್ಟವಿಲ್ಲ ತಿಳಿಸಿರುವ ಸಂದೇಶ್ ನಾಪತ್ತೆಯಾಗಿದ್ದಾನೆ ಎಂದು ಭುವನ ಹಾಸನದಲ್ಲಿ ತಿಳಿಸಿದ್ದಳು.

Share This Article
Leave a Comment

Leave a Reply

Your email address will not be published. Required fields are marked *