ಇನ್ನು ಮುಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಷ್ಟು ಕಿ.ಮೀ ಹೋಗ್ತಿರೋ ಅಷ್ಟೇ ದೂರಕ್ಕೆ ಮಾತ್ರ ಟೋಲ್!

Public TV
2 Min Read

ನವದೆಹಲಿ: ಇನ್ನು ಮುಂದೆ ನೀವು ರಾಷ್ಟ್ರೀಯ ಹೆದ್ದಾರಿಯಲ್ಲಿ ಎಷ್ಟು ಕಿ.ಮೀ ಪ್ರಯಾಣ ಮಾಡುತ್ತಿರೋ ಅಷ್ಟು ದೂರಕ್ಕೆ ಮಾತ್ರ ಟೋಲ್ ಪಾವತಿಸುವ ನೀತಿ ಜಾರಿಗೆಯಾಗುವ ಸಾಧ್ಯತೆ ಇದೆ.

ಹೌದು. ಪ್ರಸ್ತುತ ಈಗ ವಾಹನವೊಂದು ಟೋಲ್ ರಸ್ತೆಯನ್ನು ಪ್ರವೇಶಿಸಿದರೆ ಆ ಟೋಲ್ ರಸ್ತೆಗೆ ನಿಗದಿಯಾಗಿರುವ ಸಂಪೂರ್ಣ ಶುಲ್ಕವನ್ನು ಪಾವತಿಸಬೇಕು. ಆದರೆ ಎನ್‍ಡಿಎ ಸರ್ಕಾರ ಈಗ ಸಂಪೂರ್ಣ ಶುಲ್ಕವನ್ನು ಪಾವತಿ ಮಾಡುವ ಬದಲಾಗಿ ಎಷ್ಟು ಕಿ.ಮೀ.ವಾಹನ ಸಂಚರಿಸುತ್ತದೋ ಅಷ್ಟೇ ದೂರಕ್ಕೆ ಟೋಲ್ ಕಟ್ಟುವ ನೀತಿಯನ್ನು ಅನುಷ್ಠಾನಗೊಳಿಸಲು ಚಿಂತನೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ವಾಹನವೊಂದು 60 ಕಿ.ಮೀ ಉದ್ದದ ಟೋಲ್ ರಸ್ತೆಯನ್ನು ಸಂಪೂರ್ಣವಾಗಿ ಬಳಸದೇ ಇದ್ದರೂ ಈಗ ಸಂಪೂರ್ಣವಾಗಿ ಟೋಲ್ ಕಟ್ಟಬೇಕು. ಅಷ್ಟೇ ಅಲ್ಲದೇ ಪ್ರತಿವರ್ಷ ಟೋಲ್ ದರ ಪರಿಷ್ಕರಣೆಯಾಗುತ್ತಿರುವುದರಿಂದ ರಸ್ತೆ ಪ್ರಯಾಣ ಈಗ ದುಬಾರಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನಸ್ನೇಹಿಯಾಗಲು ಸರ್ಕಾರ ಈ ಕ್ರಮವನ್ನು ಕೈಗೊಳ್ಳಲು ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.

ದೆಹಲಿ ಮೂಲಕ ಹಾದು ಹೋಗುವ ಹರ್ಯಾಣ ಮತ್ತು ಉತರ ಪ್ರದೇಶ ಸಂಪರ್ಕ ಕಲ್ಪಿಸುವ 135 ಕಿ.ಮೀ ಉದ್ದದ ಈಸ್ಟರ್ನ್ ಫೆರಿಫೆರಲ್ ರಸ್ತೆಯಲ್ಲಿ ಆರಭಿಕ ಹಂತವಾಗಿ ಪ್ರತಿ ಕಿ.ಮೀ. ಟೋಲ್ ಶುಲ್ಕ ಜಾರಿಗೆ ಬರಲು ಕೇಂದ್ರ ಸಾರಿಗೆ ಸಚಿವಾಲಯ ಮುಂದಾಗಿದೆ ಎನ್ನಲಾಗಿದೆ.

ಕಳೆದ ವಾರ ನಡೆದ ಇಂಡಿಯಾ ಇಂಟಿಗ್ರೇಟೆಡ್ ಟ್ರಾನ್ಸ್ ಪೋರ್ಟ್ ಆಂಡ್ ಲಾಜಿಸ್ಟಿಕ್ ಸಮ್ಮೇಳನದಲ್ಲಿ ಪ್ರತಿ ಕಿ.ಮೀಗೆ ಟೋಲ್ ಶುಲ್ಕ ವಿಧಿಸುವ ಬಗ್ಗೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸುಳಿವು ನೀಡಿದ್ದರು.

2015-16ರ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಟ್ಟು 362 ಟೋಲ್ ಕೇಂದ್ರಗಳು ಸ್ಥಾಪನೆಯಾಗಿತ್ತು. ಈ ಎಲ್ಲ ಟೋಲ್‍ಗಳಿಂದ ವಾರ್ಷಿಕ ಒಟ್ಟು 17,250 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಕೇಂದ್ರ ಸರ್ಕಾರ ಪ್ರಸ್ತುತ 96 ಸಾವಿರ ಕಿ.ಮೀ ಉದ್ದವಿರುವ ರಾಷ್ಟ್ರೀಯ ಹೆದ್ದಾರಿಯನ್ನು 2019ರ ವೇಳೆ 2 ಲಕ್ಷ ಕಿ.ಮೀಗೆ ಏರಿಸುವ ಗುರಿಯನ್ನು ಹಾಕಿಕೊಂಡಿದೆ.

ಕಿ.ಮೀಗೆ ಟೋಲ್ ಸಂಗ್ರಹಿಸುವುದು ಕಷ್ಟದ ಕೆಲಸವಾಗಿದ್ದು, ಸರ್ಕಾರದ ಈ ನೀತಿಯನ್ನು ಕಂಪೆನಿಗಳು ಹೇಗೆ ಸ್ವೀಕರಿಸುತ್ತದೆ ಎನ್ನುವುದು ಗೊತ್ತಿಲ್ಲ. ಒಂದೊಂದು ಟೋಲ್‍ನಿಂದ ಪ್ರವೇಶಿಸಿದ ವಾಹನ ರಸ್ತೆಯಲ್ಲಿ ಇಷ್ಟೇ ದೂರವನ್ನು ಕ್ರಮಿಸಿದೆ ಎಂದು ಪತ್ತೆ ಹಚ್ಚುವುದು ಕಷ್ಟದ ಕೆಲಸ. ಆದರೆ ಸ್ಮಾರ್ಟ್ ಐಟಿ, ಡಿಜಿಟಲ್ ಪಾವತಿ ವ್ಯವಸ್ಥೆ ತಂದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *