ಡಿಸೆಂಬರ್ ನಲ್ಲಿ ಚಲಾವಣೆಗೆ ಬರಲಿದೆ 1 ಸಾವಿರ ರೂ. ಹೊಸ ನೋಟು!

Public TV
2 Min Read

ನವದೆಹಲಿ: 500, 1 ಸಾವಿರ ರೂ. ನೋಟುಗಳು ಬ್ಯಾನ್ ಆದ ಬಳಿಕ ಹೊಸದಾಗಿ 2 ಸಾವಿರ, 500 ರೂ., 200 ರೂ., 50 ರೂ.ಗಳನ್ನು ಬಿಡುಗಡೆ ಮಾಡಿರುವ ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ಈಗ 1 ಸಾವಿರ ರೂ. ನೋಟು ಚಲಾವಣೆಗೆ ತರಲು ಮುಂದಾಗುತ್ತಿದೆ.

ಹೌದು. ಆರ್‍ಬಿಐ ಶೀಘ್ರದಲ್ಲೇ 1 ಸಾವಿರ ರೂ. ನೋಟುಗಳನ್ನು ಮುದ್ರಿಸಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದ್ದು, ಈ ಹೊಸ ನೋಟುಗಳು ಡಿಸೆಂಬರ್ ನಲ್ಲಿ ಚಲಾವಣೆಗೆ ಬರಲಿದೆ ಎಂದು ಹೇಳಿದೆ.

ಮೈಸೂರು ಮತ್ತು ಸಾಲ್ಬೋನಿಯಲ್ಲಿ ಈ ಹೊಸ ನೋಟುಗಳು ವಿಶೇಷ ಭದ್ರತಾ ವೈಶಿಷ್ಟ್ಯಗಳೊಂದಿಗೆ ಮುದ್ರಣವಾಗಲಿದೆ ಎಂದು ವರದಿ ತಿಳಿಸಿದೆ.

ನೋಟ್ ಬ್ಯಾನ್ ಬಳಿಕ ಬಿಡುಗಡೆಯಾದ 2000 ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ಆರ್ಬಿಐ ನಿಲ್ಲಿಸಿದೆ ಎಂದು ಮಾಧ್ಯಮವೊಂದು ಈ ಹಿಂದೆ ವರದಿ ಮಾಡಿತ್ತು. ಮೈಸೂರಿನಲ್ಲಿರುವ ಪ್ರಿಂಟಿಂಗ್ ಪ್ರೆಸ್ ನಲ್ಲಿ ಈಗಾಗಲೇ 2000 ರೂ. ನೋಟ್ ಮುದ್ರಣ ಕಾರ್ಯ ಸ್ಥಗಿತಗೊಂಡಿದ್ದು, ಈ ಹಣಕಾಸು ವರ್ಷದಲ್ಲಿ 2 ಸಾವಿರ ರೂ.ನೋಟುಗಳನ್ನು ಮುದ್ರಿಸುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು.

2 ಸಾವಿರ ರೂ. ನೋಟುಗಳ ಚಲಾವಣೆ ಹಂತ ಹಂತವಾಗಿ ಕಡಿಮೆ ಮಾಡುತ್ತಿರುವುದರಿಂದ ಜನರ ವ್ಯವಹಾರಕ್ಕೆ ಸಮಸ್ಯೆ ಆಗದೇ ಇರಲು ಮತ್ತು ಚಿಲ್ಲರೆ ಸಮಸ್ಯೆಯನ್ನು ಕಡಿಮೆ ಮಾಡಲು 200 ರೂ. ನೋಟುಗಳನ್ನು ಬಿಡುಗಡೆ ಮಾಡಿದೆ.

500 ರೂ. ಮತ್ತು 1 ಸಾವಿರ ರೂ. ನೋಟು ನಿಷೇಧಗೊಂಡ ಹಿನ್ನೆಲೆಯಲ್ಲಿ ಆರ್‍ಬಿಐ ಸುಮಾರು 7.4 ಲಕ್ಷ ಕೋಟಿ ರೂ. ಮೌಲ್ಯದ 3.7 ಶತಕೋಟಿ 2000 ರೂ. ನೋಟುಗಳನ್ನು ಜುಲೈ ವರೆಗೆ ಮುದ್ರಿಸಿತ್ತು. ಇದು ನೋಟು ನಿಷೇಧವಾಗಿರುವ 1 ಸಾವಿರ ರೂ. ಮುಖಬೆಲೆಯ 6.3 ಶತಕೋಟಿ ನೋಟುಗಳಿಗಿಂತ ಅಧಿಕವಾಗಿದೆ ಎಂದು ಮೂಲಗಳು ತಿಳಿಸಿವೆ.

ನವೆಂಬರ್ 4ರ ವೇಳೆಗೆ ದೇಶದಲ್ಲಿ 17.7 ಲಕ್ಷ ಕೋಟಿ ನೋಟುಗಳು ಚಲಾವಣೆಯಲ್ಲಿದ್ದರೆ, ಜುಲೈ 14ರ ವೇಳೆಗೆ ದೇಶದಲ್ಲಿ 15.22 ಲಕ್ಷ ಕೋಟಿ ನೋಟುಗಳು ಚಲಾವಣೆಯಾಗುತ್ತಿದೆ ಎಂದು ಆರ್‍ಬಿಐ ತಿಳಿಸಿದೆ.

ಆರ್‍ಬಿಐ ಹಂತ ಹಂತವಾಗಿ 2 ಸಾವಿರ ರೂ. ನೋಟುಗಳ ಚಲಾವಣೆಯನ್ನು ಕಡಿಮೆ ಮಾಡುತ್ತಿದೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಪೂರಕ ಎಂಬಂತೆ ಎಟಿಎಂಗಳಲ್ಲಿ ಈಗ ಹೆಚ್ಚಾಗಿ 2 ಸಾವಿರ ರೂ. ನೋಟುಗಳ ಬದಲಿಗೆ 500 ರೂ. ನೋಟುಗಳು ಸಿಗುತ್ತಿದೆ.

ಬ್ಯಾಂಕ್ ಗಳಿಗೆ ಆರ್‍ಬಿಐ ಈಗ ಹೆಚ್ಚಾಗಿ 500 ರೂ. ನೋಟುಗಳನ್ನು ಹೆಚ್ಚು ಪೊರೈಕೆ ಮಾಡುತ್ತಿದೆ. 2 ಸಾವಿರ ರೂ. ನೋಟುಗಳನ್ನು ಕೌಂಟರ್ ಗಳಲ್ಲಿ ಮಾತ್ರ ವಿತರಣೆ ಮಾಡುತ್ತಿದ್ದೇವೆ ಎಂದು ಬ್ಯಾಂಕ್ ಅಧಿಕಾರಿಗಳ ಹೇಳಿಕೆಯನ್ನು ಆಧಾರಿಸಿ ಕೆಲ ದಿನಗಳ ಹಿಂದೆ ಮಾಧ್ಯಮವೊಂದು ವರದಿ ಪ್ರಕಟಿಸಿತ್ತು.

ಕಪ್ಪುಹಣವನ್ನು ತಡೆಗಟ್ಟಲು ನವೆಂಬರ್ 8 ರಂದು 500 ಮತ್ತು 1 ಸಾವಿರ ರೂ. ಮುಖಬೆಲೆಯ ನೋಟುಗನ್ನು ನಿಷೇಧಿಸಿಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿ ತಿಳಿಸಿದ್ದರು. ಮೈಸೂರಿನ ಮೇಟಗಳ್ಳಿ, ಮಹಾರಾಷ್ಟ್ರದ ನಾಸಿಕ್, ಮಧ್ಯಪ್ರದೇಶದ ದೇವಾಸ್, ಪಶ್ಚಿಮ ಬಂಗಾಳದ ಸಾಲ್ಬೋನಿಯಲ್ಲಿ ಆರ್‍ಬಿಐ ಮುದ್ರಣ ಘಟಕವನ್ನು ಹೊಂದಿದೆ.

 

Share This Article
Leave a Comment

Leave a Reply

Your email address will not be published. Required fields are marked *