17 ವರ್ಷಗಳ ಬಳಿಕ ಮತ್ತೆ ನೋಕಿಯಾ 3310 ಫೀಚರ್ ಫೋನ್ ರಿಲೀಸ್: ಬೆಲೆ ಎಷ್ಟು? ವಿಶೇಷತೆ ಏನು?

Public TV
2 Min Read

ಬಾರ್ಸಿಲೋನಾ: 3310 ಫೀಚರ್ ಫೋನನ್ನು 17 ವರ್ಷಗಳ ಬಳಿಕ ನೋಕಿಯಾ ಮತ್ತೆ ಬಿಡುಗಡೆ ಮಾಡಿದೆ. ಸ್ಪೇನ್‍ನ ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‍ನಲ್ಲಿ ಸಿಂಗಲ್ ಸಿಮ್ ಮತ್ತು ಡ್ಯುಯಲ್ ಸಿಮ್ ಹಾಕಬಹುದಾದ ಫೋನನ್ನು ಪರಿಚಯಿಸಲಾಗಿದೆ.

ನೋಕಿಯಾ ಕಂಪೆನಿಯ ಹೆಸರಿನಲ್ಲಿ ಫಿನ್ಲೆಂಡ್ ಮೂಲದ ಎಚ್ ಎಂಡಿ ಗ್ಲೋಬಲ್ ಈ ಫೋನ್ ತಯಾರಿಸಿದ್ದು, ಈ ಫೋನಿಗೆ 40 ಡಾಲರ್( ಅಂದಾಜು 2600 ರೂ.) ದರವನ್ನು ನಿಗದಿ ಪಡಿಸಿದೆ. ಎರಡನೇ ತ್ರೈಮಾಸಿಕದಲ್ಲಿ ವಿಶ್ವದ ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು, ಎರಡನೇ ತ್ರೈಮಾಸಿಕದಲ್ಲಿ ಯಾವಾಗ ಎನ್ನುವ ಮಾಹಿತಿಯನ್ನು ಅಧಿಕೃತವಾಗಿ ತಿಳಿಸಿಲ್ಲ.

2.4 ಇಂಚಿನ ಟಿಎಫ್‍ಟಿ (320* 240) ಕಲರ್ ಸ್ಕ್ರೀನ್, 167 ಪಿಪಿಐ, ಹೊಂದಿರುವ ಫೋನ್ ಸೀರೀಸ್ 30+ ಆಪರೇಟಿಂಗ್ ಸಿಸ್ಟಂನಲ್ಲಿ ರನ್ ಆಗುತ್ತದೆ. ಹೊಸ ಫೋನ್ 12.8 ಮಿ ಮೀಟರ್ ದಪ್ಪ, 79.6 ಗ್ರಾಂ ತೂಕವನ್ನು ಹೊಂದಿದೆ. ಈ ಹಿಂದಿನ ಫೋನ್ 22 ಮಿ.ಮೀ ದಪ್ಪ, 133 ಗ್ರಾಂ ತೂಕವನ್ನು ಹೊಂದಿತ್ತು.

ಹಿಂದುಗಡೆ ಎಲ್‍ಇಡಿ ಫ್ಲಾಶ್ ಹೊಂದಿರುವ 2 ಎಂಪಿ ಕ್ಯಾಮೆರಾವನ್ನು ನೋಕಿಯಾ ನೀಡಿದ್ದು, ಮಿನಿ ಸಿಮ್ ಹಾಕಬಹುದು. 2ಜಿ ನೆಟ್‍ವರ್ಕಿಗೆ ಬೆಂಬಲ ನೀಡಬಲ್ಲ ಈ ಫೋನಿಗೆ ನೋಕಿಯಾ ತೆಗೆಯಲು ಸಾಧ್ಯವಾಗುವ 1,200 ಎಂಎಎಚ್ ಬ್ಯಾಟರಿಯನ್ನು ನೀಡಿದೆ. 22 ಗಂಟೆಗಳ ಟಾಕ್ ಟೈಂ ನೀಡಿದ್ದು, 1 ತಿಂಗಳ ಕಾಲ ಸ್ಟ್ಯಾಂಡ್ ಬೈ ಟೈಂ ಹೊಂದಿದೆ.

ಎಫ್‍ಎಂ ರೇಡಿಯೋ, 16 ಎಂಬಿ ಆಂತರಿಕ ಮೆಮೊರಿ ಹೊಂದಿದ್ದು, ಗ್ರಾಹಕರು ಎಸ್‍ಡಿ ಕಾರ್ಡ್ ಮೂಲಕ 32 ಜಿಬಿವರೆಗೆ ಮಮೊರಿಯನ್ನು ವಿಸ್ತರಿಸಬಹುದು. ಹಿಂದುಗಡೆ ಕವರ್ ತೆಗೆದು ಮೈಕ್ರೋ ಎಸ್‍ಡಿ ಕಾರ್ಡನ್ನು ಹಾಕಬಹುದಾಗಿದೆ. ಮೇಲುಗಡೆ ಹೆಡ್‍ಫೋನ್ ಜ್ಯಾಕ್ ಮತ್ತು ಮೈಕ್ರೋ ಯುಎಸ್‍ಬಿ ಚಾರ್ಜಿಂಗ್ ಪೋರ್ಟ್ ಹೊಂದಿದೆ.

ಬಹಳ ಪ್ರಸಿದ್ಧವಾಗಿರುವ ಸ್ನೇಕ್ ಆಟವನ್ನು ಈ ಫೋನಿಗೆ ನೋಕಿಯಾ ನೀಡಿದ್ದು, ನೀಲಿ, ಹಳದಿ, ಕೆಂಪು, ಬೂದು ಬಣ್ಣದಲ್ಲಿ ಬಿಡುಗಡೆಯಾಗಿದೆ.

ಹಳೆ ನೋಕಿಯಾ ಹೀಗಿತ್ತು:
2000 ಇಸ್ವಿಯ ಸೆಪ್ಟೆಂಬರ್ 1ರಂದು ಈ ಫೋನ್ ಬಿಡುಗಡೆಯಾಗಿದ್ದು, ವಿಶ್ವದಲ್ಲಿ 12.6 ಕೋಟಿ ಫೋನ್‍ಗಳು ಮಾರಾಟ ಕಂಡಿತ್ತು. ಈ ಮೂಲಕ ವಿಶ್ವದ ಶ್ರೇಷ್ಟ ಫೀಚರ್ ಫೋನ್ ಎಂಬ ಹೆಗ್ಗಳಿಕಗೆ ಪಾತ್ರವಾಗಿತ್ತು. 1000 ಎಂಎಎಚ್ ಬ್ಯಾಟರಿ, ಸ್ನೇಕ್ ಆಟ, ವೆಲ್‍ಕಂ ಸ್ಕ್ರೀನ್ ಅಲ್ಲದೇ ಈ ಫೋನ್ ದೇಹ(ಬಾಡಿ) ಬಹಳ ಗಟ್ಟಿಯಾಗಿತ್ತು. ಮೇಲಿನಿಂದ ಬಿದ್ದರೂ ಫೋನಿನ ಒಳಗಡೆ ಭಾಗಕ್ಕೆ ಯಾವುದೇ ಹಾನಿ ಆಗುತ್ತಿರಲಿಲ್ಲ. ಹೀಗಾಗಿ ನೋಕಿಯಾ 3310ನ್ನು ಶಕ್ತಿಶಾಲಿ ಫೋನ್ ಎಂದು ಜನ ಕರೆಯುತ್ತಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *