ಭೂಮಿ ಖರೀದಿ ಮಾಡೋ ಮಂದಿಗೆ ಗುಡ್ ನ್ಯೂಸ್- ನಿಮ್ಮ ನೆರವಿಗೆ ಬರಲಿದೆ `ದಿಶಾಂಕ್’ ಆ್ಯಪ್

Public TV
3 Min Read

ಬೆಂಗಳೂರು: ಹೊಸ ಜಾಗ ಖರೀದಿ ಮಾಡಲು ನೀವು ಪ್ರಯತ್ನ ಮಾಡುತ್ತಿದ್ದೀರಾ? ನೀವು ಖರೀದಿ ಮಾಡಿದ ಜಾಗದಲ್ಲಿ ರಾಜಕಾಲುವೆ ಎಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳಬೇಕೇ? ಹಾಗಾದ್ರೆ ನೀವು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ನಿಮ್ಮ ಎಲ್ಲ ಸಂಶಯ, ಗೊಂದಲಗಳನ್ನು ಪರಿಹಾರ ಮಾಡುತ್ತೆ `ದಿಶಾಂಕ್’ ಆ್ಯಪ್. ಹೇಗೆ ಈ ಅಪ್ಲಿಕೇಶನ್ ಪರಿಹಾರ ಮಾಡುತ್ತೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ.

ಏನಿದು ಆ್ಯಪ್, ಯಾವ ಮಾಹಿತಿ ಸಿಗುತ್ತೆ?
ಕಂದಾಯ ಇಲಾಖೆಯಲ್ಲಿ ಲಭ್ಯವಿರುವ 1960ರ ಸರ್ವೆ ನಕಾಶೆಗಳ ಆಧಾರದಲ್ಲಿ ದಿಶಾಂಕ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್‍ನಲ್ಲಿರುವ ನಕಾಶೆಯನ್ನು ನೋಡಿ ಆಸ್ತಿಯ ಕುರಿತ ಮೂಲ ವಿವರಗಳನ್ನು ತಿಳಿದುಕೊಳ್ಳಬಹುದಾಗಿದೆ. ದಿಶಾಂಕ್ ಆ್ಯಪ್ ಬೆಂಗಳೂರು ಮಾತ್ರವಲ್ಲದೇ ರಾಜ್ಯದ 30 ಜಿಲ್ಲೆಯಗಳ ಪ್ರತಿ ಭೂ ಭಾಗದ ಮಾಹಿತಿಯನ್ನು ಹೊಂದಿದೆ.

ಯಾವುದಾದರೂ ಆಸ್ತಿಯ ನಿಖರವಾದ ಸರ್ವೆ ನಂಬರ್ ಹುಡುಕಲು ಹಾಗೂ ಆ ಭೂಮಿಯ ಬಗ್ಗೆ ವಿವರಗಳನ್ನು ಪಡೆಯಲು ದಿಶಾಂಕ್ ಆ್ಯಪ್ ಸಹಕಾರಿಯಾಗಲಿದೆ. ಭೂ ಭಾಗದ ವಿವರ, ರಾಜಕಾಲುವೆ, ಕೆರೆ ಕುಂಟೆ ಸುತ್ತಲಿನ ಪ್ರದೇಶ ಹಾಗೂ ಆಸ್ತಿಯ ಆಸುಪಾಸಿನಲ್ಲಿರುವ ಇತರೇ ಭೂ ಭಾಗದ ಮಾಹಿತಿಯನ್ನು ನೀಡಲಿದೆ. ಇದರಿಂದ ಭೂ ಒತ್ತುವರಿಯನ್ನೂ ಸುಲಭವಾಗಿ ಪತ್ತೆಹಚ್ಚಬಹುದುದಾಗಿದೆ.

ಬಳಕೆ ಹೇಗೆ?
ಮೊಬೈಲ್ ಫೋನ್‍ಗಳಲ್ಲಿ ಈ ಆ್ಯಪ್ ಡೌನ್‍ಲೋಡ್ ಮಾಡಿ, ಲೊಕೇಷನ್ ವಿವರವನ್ನು ಅಪ್‍ಡೇಟ್ ಮಾಡಿಕೊಳ್ಳಬೇಕು. ಈ ವೇಳೆ ವ್ಯಕ್ತಿ ಯಾವ ಪ್ರದೇಶದಲ್ಲಿ ಇರುತ್ತಾರೆ ಆ ಸ್ಥಳದ ಯಾವ ಸರ್ವೆ ನಂಬರ್ ನಲ್ಲಿದೆ ಎಂಬುದನ್ನು ತಿಳಿಸುತ್ತದೆ. ಇದರೊಂದಿಗ ಯಾವುದೇ ಆಸ್ತಿಯ ಸರ್ವೆ ನಂಬರ್ ನಮೂದಿದರೆ ಆ ನಿರ್ದಿಷ್ಟ ಜಾಗಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಬಹುದು. ಆ ಜಾಗದಕ್ಕೆ ರಸ್ತೆ ಮಾರ್ಗ ಇದೆಯೇ ಎಂಬುದನ್ನೂ ತಿಳಿದುಕೊಳ್ಳಬಹುದಾಗಿದೆ.

ಕಾನೂನು ಬದ್ಧ ದಾಖಲೆ ಅಲ್ಲ:
ದಿಶಾಂಕ್ ಆ್ಯಪ್ ನೀಡುವ ಭೂಮಿಯ ವಿವರ ಕೇವಲ ಮಾಹಿತಿ ಆಗಿದೆ. ಇದನ್ನು ಕಾನೂನು ಬದ್ಧ ದಾಖಲೆ ಎಂದು ಪರಿಗಣಿಸಲಾಗುವುದಿಲ್ಲ.

ಯಾರಿಗೆ ಉಪಯುಕ್ತ?
ರಾಜ್ಯದ ಎಲ್ಲಾ ಸಾರ್ವಜನಿಕರು, ರಿಯಲ್ ಎಸ್ಟೇಟ್ ಉದ್ಯಮಿಗಳು ಸೇರಿಂತೆ ಎಲ್ಲರೂ ಭೂಮಿಯ ವಿವರ ಪಡೆಯಲು ಆ್ಯಪ್ ಉಪಯುಕ್ತವಾಗಿದೆ. ಆಸ್ತಿ ವ್ಯವಹಾರ, ಹೊಸ ಭೂಮಿ ಖರೀದಿ ಹಾಗೂ ಮಾರಾಟ ವೇಳೆ ಮಾಹಿತಿಗಾಗಿ ಆ್ಯಪ್ ಬಳಕೆ ಮಾಡಬಹುದು. ಭೂಮಿಯ ಖಾತೆ ವಿವರದಲ್ಲಿ ನಮೂದಿಸಿರುವ ಸರ್ವೆ ನಂಬರ್ ಸರಿಯಾಗಿದೆಯೇ ಎಂಬುದನ್ನೂ ಪರಿಶೀಲಿಸಬಹುದಾಗಿದೆ. ಆದರೆ ಇದರಲ್ಲಿ ಆಸ್ತಿಗಳ ಆಥವಾ ನಿವೇಶನಗಳ ಮೂಲ ಭೌಗೋಳಿಕ ವಿವರಗಳನ್ನು ಲಭಿಸುವುದಿಲ್ಲ.

ಆ್ಯಪ್ ಸಿದ್ಧಪಡಿಸಿದ್ದು ಯಾರು?
ದಿಶಾಂಕ್ ಆ್ಯಪ್ ಅನ್ನು ರಾಜ್ಯ ಸರ್ಕಾರದ ಕಂದಾಯ ಇಲಾಖೆ ಸತತ ಮೂರು ವರ್ಷಗಳಿಂದ ಪರಿಶ್ರಮವಹಿಸಿ ಸಿದ್ಧಪಡಿಸಿದೆ. ಇಲಾಖೆಯು 70 ಲಕ್ಷದಷ್ಟು ಸರ್ವೆನಂಬರ್‍ಗಳಿಗೆ ಸಂಬಂಧಿಸಿದ ವಿವರಗಳು ಇದರಲ್ಲಿ ಲಭ್ಯವಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಯಾವ ಭಾಗದಲ್ಲಿಯಾದರೂ ಭೂ ಮಾಹಿತಿ ಪಡೆಯುವವರ ನೆರವಿಗೆ ಬರಲು ಕಂದಾಯ ಇಲಾಖೆ `ದಿಶಾಂಕ್ ಆ್ಯಪ್’ ಬಿಡುಗಡೆಗೊಳಿಸಿದೆ.

ಆ್ಯಪ್ ಉದ್ದೇಶ ಏನು?
ಒಂದೇ ಆ್ಯಪ್‍ನಲ್ಲಿ ಭೂದಾಖಲೆಗಳಿಗೆ ಸಂಬಂಧಿಸಿದ ಎಲ್ಲ ಸೇವೆ ಸಿಗುವಂತೆ ಮಾಡುವುದು ಇಲಾಖೆಯ ಉದ್ದೇಶವಾಗಿದೆ. ದಿಶಾಂಕ್ ಆ್ಯಪ್ ತಯಾರಿಸಲು ಕಂದಾಯ ಇಲಾಖೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬಿಎಂಆರ್‍ಡಿಎ, ಬಿಬಿಎಂಪಿ ಮತ್ತು ಇತರ ನಗರ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವವನನ್ನು ಪಡೆದುಕೊಂಡಿದೆ. ಆ್ಯಪ್ ಮತ್ತಷ್ಟು ಜನ ಸ್ನೇಹಿಯಾಗಿ ಮಾಡಲು ಕಂದಾಯ ಇಲಾಖೆ ಚಿಂತನೆ ನಡೆಸಿದೆ. ಮುಂದಿನ ಹಂತದಲ್ಲಿ ಆ್ಯಪ್‍ನಲ್ಲಿ ಆಸ್ತಿ ಮಾಲೀಕರಿಗೆ ಸಂಬಂಧಿಸಿದ ವಿವರಗಳನ್ನೂ ಜೋಡಿಸುವ ಮೂಲಕ ಮತ್ತಷ್ಟು ಉಪಯುಕ್ತ ಮಹಿತಿ ಕೇಂದ್ರವಾಗಿ ರೂಪಿಸಲು ಇಲಾಖೆ ಚಿತಿಂಸಿದೆ.

ಎಲ್ಲಿ ಸಿಗುತ್ತೆ?
ಗೂಗಲ್ ಆಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿ ಈ ಆ್ಯಪ್ ಲಭ್ಯವಿದ್ದು 10 ಸಾವಿರಕ್ಕೂ ಹೆಚ್ಚು ಮಂದಿ ಡೌನ್‍ಲೋಡ್ ಮಾಡಿದ್ದಾರೆ. ಪ್ಲೇ ಸ್ಟೋರ್ ನಲ್ಲಿ ಲಭ್ಯವಿದ್ದರೂ, ಮಾಹಿತಿ ಕೊರತೆಯಿಂದ ಹೆಚ್ಚಿನ ಜನರು ಇದನ್ನು ಬಳಕೆ ಮಾಡಿಕೊಳ್ಳುತ್ತಿಲ್ಲ. ಆ್ಯಪ್ ಡೌನ್ ಲೋಡ್ ಮಾಡಲು ಕ್ಲಿಕ್ ಮಾಡಿ – ದಿಶಾಂಕ್ 

Share This Article
Leave a Comment

Leave a Reply

Your email address will not be published. Required fields are marked *