ಕೆಲಸದ ಜೊತೆ ಹಸಿದವರಿಗೆ ಊಟ ನೀಡುತ್ತಿರುವ ಪೊಲೀಸರಿಗೆ ಸೆಲ್ಯೂಟ್: ಕೊಹ್ಲಿ

Public TV
1 Min Read

ನವದೆಹಲಿ: ತಮ್ಮ ಕೆಲಸದ ಜೊತೆಗೆ ಹಸಿದವರಿಗೆ ಆಹಾರ ನೀಡುತ್ತಿರುವ ಪೊಲೀಸರಿಗೆ ಸೆಲ್ಯೂಟ್ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಕೊರೊನಾ ಭೀತಿಗೆ ಇಡೀ ದೇಶವೇ ನಲುಗಿಹೋಗಿದೆ. ಜನರು ಮನೆಯಿಂದ ಹೊರೆಗೆ ಬರಲು ಭಯಪಡುತ್ತಿದ್ದಾರೆ. ಈ ರೀತಿಯ ಪರಿಸ್ಥಿತಿಯಲ್ಲಿ ಪೊಲೀಸರು ಮತ್ತು ವೈದ್ಯರು ಮಾತ್ರ ಹೊರಗೆ ಇದ್ದು, ಕೊರೊನಾ ವಿರುದ್ಧ ದೇಶವನ್ನು ಗೆಲ್ಲಿಸಲು ಪಣತೊಟ್ಟು ನಿಂತಿದ್ದಾರೆ. ಇದರ ಜೊತೆಗೆ ಪೊಲೀಸರು ಬಡವರಿಗೆ, ನಿರ್ಗತಿಕರಿಗೆ ಆಹಾರ ಒದಗಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಪೊಲೀಸರ ಈ ಕೆಲಸವನ್ನು ಕೊಹ್ಲಿ ಅವರು ಹಾಡಿ ಹೊಗಳಿದ್ದಾರೆ.

ಈ ವಿಚಾರವಾಗಿ ವಿಡಿಯೋವೊಂದನ್ನು ಮಾಡಿರುವ ಕೊಹ್ಲಿ, ಸಂಪೂರ್ಣ ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದರ ಜೊತೆಗೆ ಬಡ ಜನರಿಗೆ ಪ್ರತಿದಿನವೂ ಆಹಾರವನ್ನು ನೀಡುತ್ತಿರುವ ದೆಹಲಿ ಪೊಲೀಸರ ಕೆಲಸವನ್ನು ನಾನು ಶ್ಲಾಘಿಸಲು ಬಯಸುತ್ತೇನೆ. ಈ ಕೆಲಸ ಈಗ ನಮಗೆ ಅತ್ಯಂತ ಅವಶ್ಯಕತೆಯಾಗಿದೆ. ಆದ್ದರಿಂದ ಈ ಸೇವೆಯನ್ನು ಚೆನ್ನಾಗಿ ಮಾಡಿ ಮತ್ತು ಮಾಡುತ್ತಲೇ ಇರಿ ಎಂದು ಕೊಹ್ಲಿ ಹೇಳಿದ್ದಾರೆ.

ಕೊಹ್ಲಿ ಅವರ ಈ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿರುವ ದೆಹಲಿ ಪೊಲೀಸರು, ನಮಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡುವ ಮಾತುಗಳನ್ನಾಡಿದಕ್ಕೆ ಕೊಹ್ಲಿ ಅವರಿಗೆ ಧನ್ಯವಾದಗಳು. ಕೊರೊನಾ ವಿರುದ್ಧದ ಹೋರಾಟದಲ್ಲಿ ನಮ್ಮ ನಾಗರಿಕರನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದು ಬರೆದುಕೊಂಡಿದೆ.

ಕೊಹ್ಲಿ ಅವರ ವಿಡಿಯೋದಂತೆ ಬೌಲರ್ ಇಶಾಂತ್ ಶರ್ಮಾ ಅವರ ವಿಡಿಯೋವನ್ನು ದೆಹಲಿ ಪೊಲೀಸರು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ನಮ್ಮ ಮನೆಗಳಲ್ಲಿ ಉಳಿದು ದೆಹಲಿ ಪೊಲೀಸರಿಗೆ ಸಹಾಯ ಮಾಡೋಣ ಮತ್ತು ಮುಖ್ಯವಾಗಿ ವದಂತಿಗಳನ್ನು ನಾವು ನಂಬಬಾರದು. ನಾವು ಒಟ್ಟಾಗಿ ಈ ಕೊರೊನಾ ವಿರುದ್ಧದ ಹೋರಾಟವನ್ನು ಗೆಲ್ಲುತ್ತೇವೆ ಎಂದು ಇಶಾಂತ್ ಜನರಲ್ಲಿ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *