ನವದೆಹಲಿ: ನನ್ನ ಮೇಲೆ ಜಾಸ್ತಿ ಪ್ರೀತಿ ತೋರಿಸುತ್ತಿಲ್ಲ ಮತ್ತು ನನಗೆ ಪ್ರಾಮುಖ್ಯತೆ ನೀಡುತ್ತಿಲ್ಲ ಎಂದು ಮಗನೊಬ್ಬ ತಂದೆ-ತಾಯಿಗೆ ಚಾಕುವಿನಿಂದ ಇರಿದಿರುವ ಘಟನೆ ದೆಹಲಿಯ ಗುರುಗ್ರಾಮ್‍ನಲ್ಲಿ ನಡೆದಿದೆ.
ಕೊಲೆ ಮಾಡಿದ ಆರೋಪಿಯನ್ನು 32 ವರ್ಷದ ರಿಷಭ್ ಮೆಹ್ತಾ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಚಾಕು ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿರುವ ತಂದೆ ಸುಶೀಲ್ ಮೆಹ್ತಾ ಸಾವನ್ನಪ್ಪಿದ್ದಾರೆ. ತಾಯಿ ಚಂದರ್ ಮೆಹ್ತಾಗೆ ಗಂಭೀರ ಗಾಯವಾಗಿದ್ದು, ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಎಲ್ಲಾ ಘಟನೆಯನ್ನು ಕಣ್ಣಾರೆ ನೋಡಿರುವ ರಿಷಭ್‍ನ ಸಹೋದರ ಮಾಯಾಂಕ್ ಮೆಹ್ತಾ ಮಾತನಾಡಿ, ರಿಷಭ್ ಅಪ್ಪ ಅಮ್ಮನ ಜೊತೆ ದಿನ ಜಗಳವಾಡುತ್ತಿದ್ದನು. ಮಂಗಳವಾರ ಸಂಜೆಯೂ ರಿಷಭ್ ಜಗಳವಾಡುತ್ತಿದ್ದನು. ಆದರೆ ದಿನ ಹೀಗೆ ಮಾಡುತ್ತಾನೆ ಎಂದು ನಾನು ಹಣ್ಣುಗಳನ್ನು ತರಲು ಮಾರ್ಕೆಟ್‍ಗೆ ಹೋದೆ ಎಂದು ಹೇಳಿದ್ದಾನೆ.
ಮಾರ್ಕೆಟ್‍ನಲ್ಲಿ ಹಣ್ಣು ಖರೀದಿ ಮಾಡುವಾಗ ನನ್ನ ಚಿಕ್ಕಪ್ಪ ನನಗೆ ಕರೆ ಮಾಡಿ ನಿಮ್ಮ ಮನೆಯಲ್ಲಿ ತುಂಬಾ ಗಲಾಟೆಯಾಗುತ್ತದೆ ಎಂದು ಹೇಳಿದರು. ತಕ್ಷಣ ನಾನು ಮನೆಗೆ ಹೋದೆ ಅಲ್ಲಿ ರಿಷಭ್ ಅಪ್ಪನಿಗೆ ಚಾಕುವಿನಿಂದ ಇರಿಯುತ್ತಿದ್ದನು. ಅದನ್ನು ತಡೆಯಲು ಹೋದ ನನ್ನ ಕೈಗೂ ಚಾಕು ಇರಿದ. ನಂತರ ನಾನು ಬಿಡಿಸಿ ಅಪ್ಪ-ಅಮ್ಮನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆ. ಆದರೆ ಅಲ್ಲಿನ ವೈದ್ಯರು ಅಪ್ಪ ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಅಮ್ಮನಿಗೆ ಗಂಭೀರಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಯಾಂಕ್ ಹೇಳಿದ್ದಾನೆ.
ಅಪರಾಧ ಎಸಗಿದ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಮಂಗಳವಾರ ಮತ್ತೆ ಅವನು ಆ ಪ್ರದೇಶಕ್ಕೆ ಬಂದಿದ್ದು, ಅವನನ್ನು ಬಂಧಿಸಲಾಗಿದೆ. ಅವನ ಮೇಲೆ ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಗುರುಗ್ರಾಮ್‍ನ ಪೊಲೀಸ್ ಅಧಿಕಾರಿ ಸುಭಾಷ್ ಬೊಕಾನ್ ಹೇಳಿದ್ದಾರೆ.