ದೆಹಲಿಗೆ ಅಶ್ವಿನ್, ಕಿಂಗ್ಸ್​​ಗೆ ಕನ್ನಡಿಗ ರಾಹುಲ್ ಕ್ಯಾಪ್ಟನ್?

Public TV
2 Min Read

ನವದೆಹಲಿ: 2020ರ ಐಪಿಎಲ್ ಆವೃತ್ತಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕನಾಗುವ ಸಾಧ್ಯತೆಯಿದೆ.

ಕಿಂಗ್ಸ್ ಇಲೆವೆಲ್ ಪಂಜಾಬ್ ತಂಡದ ಆಡಳಿತ ಮಂಡಳಿ, ಕಳೆದ ಆವೃತ್ತಿಯಲ್ಲಿ ಆರಂಭಿಕನಾಗಿ ಉತ್ತಮವಾಗಿ ಬ್ಯಾಟ್ ಬೀಸಿದ ಕೆ.ಎಲ್ ರಾಹುಲ್ ಅವರಿಗೆ ನಾಯಕ ಸ್ಥಾನವನ್ನು ನೀಡಲು ತೀರ್ಮಾನ ಮಾಡಿದೆ. ಕಳೆದ ವರ್ಷ ಪಂಜಾಬ್ ತಂಡದ ನಾಯಕನಾಗಿದ್ದ ಅಶ್ವಿನ್ ದೆಹಲಿ ತಂಡಕ್ಕೆ ಹೋಗಲಿದ್ದಾರೆ ಎಂದು ವರದಿಯಾಗಿದೆ.

ದೆಹಲಿ ತಂಡ, ನಾಯಕ ಶ್ರೇಯಸ್ ಅಯ್ಯರ್, ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮತ್ತು ಮಾರ್ಗದರ್ಶಕ ಸೌರವ್ ಗಂಗೂಲಿಯವರ ನೇತೃತ್ವದಲ್ಲಿ ಒಳ್ಳೆಯ ಪ್ರದರ್ಶನ ನೀಡುತ್ತಿದೆ. ಆದರೆ ದೆಹಲಿ ತಂಡದಲ್ಲಿ ಅನುಭವಿ ಸ್ಪಿನ್ನರ್‍ ಗಳ ಕೊರತೆ ಇದ್ದು, ಆರ್ ಅಶ್ವಿನ್ ಅವರಿಗೆ ಅ ಸ್ಥಾನ ನೀಡಲು ದೆಹಲಿ ಕ್ಯಾಪಿಟಲ್ ತಂಡದ ಆಡಳಿತ ಮಂಡಳಿ ತೀರ್ಮಾನ ಮಾಡಿದೆ ಎಂದು ಹೇಳಲಾಗಿದೆ.

ಈಗ ಸದ್ಯ ದೆಹಲಿ ತಂಡದಲ್ಲಿ 36 ವರ್ಷದ ಸ್ಪಿನ್ನರ್ ಅಮಿತ್ ಮಿಶ್ರಾ ಇದ್ದು, ಅವರಿಂದ ನಿರೀಕ್ಷಿತ ಮಟ್ಟದ ಬೌಲಿಂಗ್ ಪ್ರದರ್ಶನ ಕಂಡು ಬಂದಿಲ್ಲ. ಅದ್ದರಿಂದ ಭಾರತ ತಂಡದಲ್ಲಿ ಹೆಚ್ಚು ಅನುಭವ ಇರುವ ಆರ್ ಅಶ್ವಿನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ತೀರ್ಮಾನವನ್ನು ದೆಹಲಿ ಕ್ಯಾಪಿಟಲ್ ಮಾಡಿದೆ. ಈ ಮೂಲಕ ಬೌಲಿಂಗ್ ವಿಭಾಗವನ್ನು ಬಲಪಡಿಸುವ ಪ್ರಯತ್ನ ಮಾಡುತ್ತಿದೆ ಎನ್ನಲಾಗಿದೆ.

ಕಳೆದ ಎರಡು ಆವೃತ್ತಿಯಲ್ಲಿ ಪಂಜಾಬ್ ತಂಡವನ್ನು ಮುನ್ನಡೆಸಿದ ಅಶ್ವಿನ್ ಅವರು, ತಂಡವನ್ನು ಫ್ಲೇ ಆಫ್ ಹಂತಕ್ಕೆ ಕರೆದುಕೊಂಡು ಹೋಗುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಕ್ಯಾಪ್ಟನ್ ಬದಲಾವಣೆಯ ಯೋಜನೆ ಮಾಡಿರುವ ಪಂಜಾಬ್ ತಂಡ ಆರಂಭಿಕನಾಗಿ ಉತ್ತಮ ಪ್ರದರ್ಶನ ನೀಡಿರುವ ಯುವ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್‍ಗೆ ಅ ಸ್ಥಾನವನ್ನು ನೀಡಲು ಮುಂದಾಗಿದೆ ಎಂದು ಹೇಳಲಾಗಿದೆ.

ಅಶ್ವಿನ್ ಐಪಿಎಲ್‍ನಲ್ಲಿ ಒಟ್ಟು 139 ಪಂದ್ಯಗಳನ್ನು ಆಡಿ 26.48 ಸರಾಸರಿಯಲ್ಲಿ 125 ವಿಕೆಟ್ ಪಡೆದಿದ್ದಾರೆ. 2018 ರಲ್ಲಿ ಚೆನ್ನೈ ತಂಡ ಇವರನ್ನು ಕೈಬಿಟ್ಟ ಮೇಲೆ ಪಂಜಾಬ್ 7.6 ಕೋಟಿ ರೂ. ನೀಡಿ ತಮ್ಮ ತಂಡಕ್ಕೆ ಖರೀದಿ ಮಾಡಿ ನಾಯಕ ಸ್ಥಾನ ನೀಡಿತ್ತು. ಆದರೆ ತಂಡವನ್ನು ಮುನ್ನಡೆಸುವಲ್ಲಿ ವಿಫಲರಾದ ಅಶ್ವಿನ್ ಕೆಳದ ಆವೃತ್ತಿಯಲ್ಲಿ ಆಡಿದ 14 ಪಂದ್ಯಗಳಲ್ಲಿ 15 ವಿಕೆಟ್ ಕಿತ್ತು ಕೇವಲ 42 ರನ್ ಗಳಿಸಿದ್ದರು. ಈ ಮೂಲಕ ಪಂಜಾಬ್ ತಂಡ ಅಂಕ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದುಕೊಂಡಿತ್ತು.

Share This Article
Leave a Comment

Leave a Reply

Your email address will not be published. Required fields are marked *