ಪ್ರಿಯಾಂಕಾ ಗಾಂಧಿ ಬಳಿ 2 ಕೋಟಿ ಕೊಟ್ಟು ಪೇಂಟಿಂಗ್ ಖರೀದಿಸಿದ್ದ ಯೆಸ್ ಬ್ಯಾಂಕ್ ಮುಖ್ಯಸ್ಥ

Public TV
2 Min Read

ನವದೆಹಲಿ: ಅಕ್ರಮ ಹಣ ರವಾನೆ ಆರೋಪದ ಮೇಲೆ ಇಡಿ ವಶದಲ್ಲಿರುವ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಬಳಿ 2 ಕೋಟಿ ರೂ.ಮೌಲ್ಯದ ಪೇಂಟಿಂಗ್ ಖರೀದಿ ಮಾಡಿದ್ದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಖರೀದಿಸಿದ್ದು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ಈಗ ಮಾಧ್ಯಮಗಳಿಗೆ ಪೇಂಟಿಂಗ್ ಖರೀದಿಸಲು 2010ರಲ್ಲಿ ರಾಣಾ ಕಪೂರ್ ಪ್ರಿಯಾಂಕಾ ಗಾಂಧಿ ಅವರಿಗೆ ನೀಡಿರುವ ಚೆಕ್‍ನ ಪ್ರತಿ ಕೂಡ ಸಿಕ್ಕಿದೆ. ಜೊತೆಗೆ ಪೇಂಟಿಂಗ್ ಖರೀದಿ ವಿಚಾರವಾಗಿ ರಾಣಾ, ಪ್ರಿಯಾಂಕಾಗೆ ಪತ್ರ ಬರೆದಿರುವುದು ಕೂಡ ಬೆಳಕಿಗೆ ಬಂದಿದೆ. ಇದನ್ನೇ ಅಸ್ತ್ರವಾಗಿಸಿದ ಬಿಜೆಪಿ ರಾಣಾ ಕಪೂರ್ ಗೂ ಮತ್ತು ಕಾಂಗ್ರೆಸ್ಸಿಗೂ ಸಂಬಂಧವಿದೆ ಎಂದು ಆರೋಪ ಮಾಡಿದೆ.

ಕಾಂಗ್ರೆಸ್ಸಿನ 100 ವರ್ಷದ ಸಂಭ್ರಮದ ಸಲುವಾಗಿ ಎಂಎಫ್ ಹುಸೇನ್ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಚಿತ್ರ ಬಿಡಿಸಿದ್ದರು. ಈ ಪೇಂಟಿಂಗ್ ಅನ್ನು 2010ರಲ್ಲಿ ಪ್ರಿಯಾಂಕಾ ಗಾಂಧಿ ಅವರು ಯೆಸ್ ಬ್ಯಾಂಕ್ ಮಾಲೀಕ ರಾಣಾ ಕಪೂರ್ ಅವರಿಗೆ ಮಾರಿದ್ದರು. ಈ ಚಿತ್ರ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರೂ ಪ್ರಿಯಾಂಕಾ ಗಾಂಧಿ ಚೆಕ್ ಮೂಲಕ 2 ಕೋಟಿ ಹಣ ಪಡೆದಿದ್ದರು.

ಈಗ ಅಕ್ರಮ ಹಣ ರವಾನೆ ಆರೋಪದ ಮೇಲೆ ಇಡಿ ವಶದಲ್ಲಿರುವ ರಾಣಾ ಕಪೂರ್ ಅವರ ವಿಚಾರಣೆ ವೇಳೆ ಈ ಸತ್ಯ ಹೊರಗೆ ಬಂದಿದ್ದು, ಈ ನಿಟ್ಟಿನಲ್ಲಿ ಇಡಿ ಪೇಂಟಿಂಗ್ ಬಗ್ಗೆ ವಿಚಾರಣೆ ನಡೆಸುತ್ತಿದೆ. ರಾಜೀವ್ ಗಾಂಧಿ ಅವರ ಈ ಪೇಂಟಿಂಗ್ ಬೆಲೆ ಯಾರಿಗೂ ಗೊತ್ತಿಲ್ಲ. ಅದರೂ ಪ್ರಿಯಾಂಕಾ ಗಾಂಧಿ ಅವರಿಗೆ ರಾಣಾ ಕಪೂರ್ ಅವರು 2 ಕೋಟಿ ನೀಡಿದ್ದು, ಯಾಕೆ ಎಂಬ ಪ್ರಶ್ನೆ ಮೂಡಿದೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ಭಾರತದ ಪ್ರತಿಯೊಂದು ಆರ್ಥಿಕ ಅಪರಾಧಗಳಿಗೂ ಮತ್ತು ಗಾಂಧಿ ಕುಟುಂಬಕ್ಕೂ ಆಳವಾದ ಸಂಬಂಧವಿದೆ. ವಿಜಯ್ ಮಲ್ಯ ಸೋನಿಯಾ ಗಾಂಧಿ ಅವರಿಗೆ ಫ್ಲೈಟ್ ಅಪ್‍ಗ್ರೇಡ್ ಟಿಕೆಟ್‍ಗಳನ್ನು ಕಳುಹಿಸಿದ್ದ. ಅವನು ದೇಶಬಿಟ್ಟು ಹೋದ. ನೀರವ್ ಮೋದಿಯ ಅಭರಣ ಮಳಿಗೆಯನ್ನು ರಾಹುಲ್ ಗಾಂಧಿ ಉದ್ಘಾಟನೆ ಮಾಡಿದ್ದರು. ಅವನು ದೇಶ ಬಿಟ್ಟು ಹೋದ. ಈಗ ನೋಡಿದರೆ ರಾಣಾ ಪ್ರಿಯಾಂಕ ಬಳಿ ಪೇಂಟಿಂಗ್ ಖರೀದಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಬಿಜೆಪಿಯವರ ಈ ಆರೋಪಕ್ಕೆ ಟಾಂಗ್ ನೀಡಿರುವ ಕಾಂಗ್ರೆಸ್, ಮೋದಿ ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಈ ರೀತಿಯ ಆರೋಪ ಮಾಡುತ್ತಿದೆ. ಕಾಂಗ್ರೆಸ್ ಮತ್ತು ಅದರ ನಾಯಕತ್ವದ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ಎಂಎಫ್ ಹುಸೇನ್ ಅವರ ಪೇಂಟಿಂಗ್ ಅನ್ನು ಪ್ರಿಯಾಂಕ ಗಾಂಧಿ ರಾಣಾ ಅವರಿಗೆ ಮಾರಿರುವುದು ನಿಜ. ಅದನ್ನು ಅವರು ವಾರ್ಷಿಕ ತೆರಿಗೆಯಲ್ಲಿ ನಮೂದಿಸಿದ್ದಾರೆ. ಇದಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಏನ್ ಸಂಬಂಧ ಎಂದು ಪ್ರಶ್ನಿಸಿ ಕಿಡಿಕಾರಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಣ್‍ದೀಪ್ ಸುರ್ಜೇವಲಾ, ರಾಣಾ ಕಪೂರ್ ಅವರಿಗೆ ಪ್ರಿಯಾಂಕ ಗಾಂಧಿ ಅವರು ಪೇಂಟಿಂಗ್ ಕೊಟ್ಟಿರುವುದು ನಿಜ. ಅದನ್ನು ಅವರು ವಾರ್ಷಿಕ ತೆರಿಗೆಯಲ್ಲಿ ಉಲ್ಲೇಖಿಸಿದ್ದಾರೆ. 10 ವರ್ಷದ ಹಿಂದೆ ನಡೆದ ಘಟನೆಯ ಮೇಲೆ ಆರೋಪ ಮಾಡುತ್ತಿರುವ ಬಿಜೆಪಿಯವರು, 5 ವರ್ಷದ ಹಿಂದೆ ಯೆಸ್ ಬ್ಯಾಂಕ್‍ಗೆ ಮೋದಿ ಸರ್ಕಾರ 20 ಲಕ್ಷ ಕೋಟಿ ಸಾಲವನ್ನು ಹೇಗೆ ನೀಡಿದೆ ಎಂದು ಪ್ರಶ್ನೆ ಮಾಡಿ ತಿರುಗೇಟು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *