ಕೊರೊನಾ ವೈರಸ್ ವಿರುದ್ಧ ಸಾರ್ಕ್ ದೇಶಗಳ ಒಗ್ಗಟ್ಟಿನ ಹೋರಾಟ

Public TV
1 Min Read

ನವದೆಹಲಿ: ಭಾರತವೂ ಸೇರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಸಾರ್ಕ್ ದೇಶಗಳ ಮುಖ್ಯಸ್ಥರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.

ಸಂಜೆ ಐದು ಗಂಟೆಗೆ ಆರಂಭವಾದ ಸಭೆಯಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಭೂತಾನ್, ನೇಪಾಳ, ಅಪ್ಘಾನಿಸ್ತಾನ, ಮಾಲ್ಡೀವ್ಸ್ ಮತ್ತು ಶ್ರೀಲಂಕಾದ ಮುಖ್ಯಸ್ಥರು ಭಾಗಿಯಾಗಿ ಕೊರೊನಾ ವಿರುದ್ಧ ತೆಗೆದುಕೊಳ್ಳಬೇಕಿರುವ ಎಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಿದರು.

ಭಾರತದಲ್ಲಿ 150ಕ್ಕಿಂತಲೂ ಕಡಿಮೆ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಆದರೂ ನಾವು ಹೆಚ್ಚು ಜಾಗೃತರಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಜಾಗೃತರಾಗಿ, ಆತಂಕಗೊಳ್ಳಬೇಡಿ ಎಂಬ ಹೇಳಿಕೆಯ ಮೂಲಕ ಕೊರೊನಾ ವೈರಸ್ ವಿರುದ್ಧ ಹೋರಾಡಲು ಭಾರತ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿವರಿಸಿದರು.

ವಿದೇಶಗಳಿಂದ ಭಾರತಕ್ಕೆ ಆಗಮಿಸುವವರನ್ನು ಪರೀಕ್ಷೆ ಒಳಪಡಿಸುವ ಕಾರ್ಯಕ್ರಮವನ್ನು ಜನವರಿಯ ಮಧ್ಯ ಭಾಗದಿಂದ ಭಾರತ ಆರಂಭಿಸಿದೆ. ಅಲ್ಲದೆ ಪ್ರವಾಸದ ಮೇಲೆ ಸಾಕಷ್ಟು ನಿಯಮಗಳನ್ನು ವಿಧಿಸಿದೆ. ಆತಂಕ ನಿವಾರಿಸಲು ಹಂತ ಹಂತವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೊರ ದೇಶದಲ್ಲಿರುವ ಭಾರತೀಯರನ್ನು ದೇಶಕ್ಕೆ ಕರೆ ತರುವ ಪ್ರಯತ್ನಗಳನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ. ಈವರೆಗೆ 1,400 ಮಂದಿಯನ್ನು ಭಾರತಕ್ಕೆ ಕರೆತಂದಿದ್ದೇವೆ. ಇದೇ ವೇಳೆ ನೆರೆ ರಾಷ್ಟ್ರಗಳ ಕೆಲ ನಾಗರಿಕರನ್ನೂ ಸೋಂಕು ಪೀಡಿತ ದೇಶದಿಂದ ಭಾರತ ಕರೆ ತಂದಿದೆ ಎಂದು ಮೋದಿ ವಿಡಿಯೋ ಕಾನ್ಫರೆನ್ಸ್ ನಲ್ಲಿ ಹೇಳಿದರು.

ಬಳಿಕ ಸಭೆಯಲ್ಲಿ ಭಾಗಿಯಾಗಿದ್ದ ಎಲ್ಲ ದೇಶಗಳ ಮುಖ್ಯಸ್ಥರು ಆಯಾ ದೇಶಗಳಲ್ಲಿ ಕೊರೊನಾ ವೈರಸ್ ತಡೆಗೆ ತೆಗೆದುಕೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರಣೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *