ಬೆಂಗಳೂರು: ವಿಧಾನಸಭೆ ಚುನಾವಣೆಯ ಹೊತ್ತಲ್ಲಿಯೇ ಕಾಂಗ್ರೆಸ್ ಸರ್ಕಾರಕ್ಕೆ ಟಾಂಗ್ ಕೊಡಲು ಬಿಜೆಪಿ ಬಳಸಿದ ಪ್ರತ್ಯಾಸ್ತ್ರವೇ ಕೊಳಗೇರಿ ರಾಜಕೀಯ. ಆದರೆ ಬಿಎಸ್ ಯಡಿಯೂರಪ್ಪ ವಾಸ್ತವ್ಯ ವಿಚಾರದಲ್ಲಿ ವಿವಾದಕ್ಕೆ ಗುರಿಯಾಗಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕ್ಷೇತ್ರವಾಗಿರುವ ಗಾಂಧಿನಗರದ ಲಕ್ಷ್ಣಣಪುರಿ ಸ್ಲಂನಲ್ಲಿ ಬಿಎಸ್‍ವೈ ರಾತ್ರಿ ವಾಸ್ತವ್ಯ ಹೂಡಿದ್ದರು. ಬಿಎಸ್‍ವೈಗೆ ಸ್ಲಂ ನಿವಾಸಿಗಳು ಆರತಿ ಎತ್ತಿ, ಪೂರ್ಣಕುಂಭ ಸ್ವಾಗತ ಕೋರಿದ್ದರು. ಮುನಿರತ್ನ, ದೀಪಾ ದಂಪತಿ ಮನೆಯಲ್ಲಿ ವಾಸ್ತವ್ಯ ಹೂಡಿದ್ದು ರಾತ್ರಿ ಅನ್ನ ಸಾಂಬಾರ್ ಊಟ ಮಾಡಿದ್ದರು.
ಯಡಿಯೂರಪ್ಪ ತಂಗಿದ್ದ ಮನೆಯಲ್ಲಿ ಹೈಟೆಕ್ ವೆಸ್ಟರ್ನ್ ಟಾಯ್ಲೆಟ್ ಸಿದ್ಧಪಡಿಸಲಾಗಿತ್ತು. ಹೊಸ ಮಂಚ, ಹೊಸ ಬೆಡ್ ಕೂಡಾ ತಂದು ಹಾಕಲಾಗಿತ್ತು. ಬಿಎಸ್ ವೈ ವಾಸ್ತವ್ಯ ಮಾಡಿದ ಮನೆಯಲ್ಲಿ ಈ ಹಿಂದೆ ವೆಸ್ಟರ್ನ್ ಟಾಯ್ಲೆಟ್ ಇರಲಿಲ್ಲ. ಎರಡು ದಿನಗಳ ಹಿಂದೆ ನೂತನವಾಗಿ ಈ ಟಾಯ್ಲೆಟ್ ರೆಡಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದೇ ಸಂದರ್ಭದಲ್ಲಿ ಅದೇ ಸ್ಲಂ ನ ಕೆಲ ಕಾಂಗ್ರೆಸ್ ನಿರುದ್ಯೋಗಿ ಯುವಕರು ಪಕೋಡ ಮಾರಾಟ ಮಾಡಿ ಪ್ರತಿಭಟನೆ ಮಾಡಿದ್ರು. ನಾವೆಲ್ಲ ಇದೇ ಸ್ಲಂನ ವಾಸಿಗಳು. ಮೋದಿ ಅವರು ನಿರುದ್ಯೋಗ ಸಮಸ್ಯೆ ಬಗ್ಗೆ ಕೇಳಿದ್ರೆ ಪಕೋಡ ಮಾರಾಟ ಮಾಡಿ ಜೀವನ ಮಾಡಿ ಅಂತಾರೆ. ನಾವೆಲ್ಲ ಕಷ್ಟ ಪಟ್ಟು ಓದಿ ವಿದ್ಯಾವಂತರಾಗಿದ್ದು, ಪಕೋಡ ಮಾರಾಟ ಮಾಡೋಕಾ ಅಂತಾ ಯುವಕರು ಆಕ್ರೋಶ ವ್ಯಕ್ತಪಡಿಸಿ, ಮೋದಿ ಮತ್ತು ಯಡಿಯೂರಪ್ಪನ ವಿರುದ್ಧ ಧಿಕ್ಕಾರ ಕೂಗಿದ್ರು. ಇದನ್ನೂ ಓದಿ: ಹೊಸ ಎಸಿ, ಹೊಸ ಮಂಚ, ಹೊಸ ಟಾಯ್ಲೆಟ್- ರಾಹುಲ್ ಗಾಂಧಿ ಮೆಚ್ಚಿಸಲು ಸಚಿವರ ಸರ್ಕಸ್