ಬಂಟ್ವಾಳದಲ್ಲಿ ಮತ್ತೊಂದು ಪ್ರಕರಣ – ಮೃತ ಮಹಿಳೆಯ ಅತ್ತೆಗೆ ಸೋಂಕು

Public TV
2 Min Read

ಮಂಗಳೂರು/ಹುಬ್ಬಳ್ಳಿ: ಬಂಟ್ವಾಳದಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಮೃತ ಮಹಿಳೆಯ ಅತ್ತೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಏಪ್ರಿಲ್ 19 ರಂದು ಬಂಟ್ವಾಳದ ಮಹಿಳೆ ಮೃತರಾಗಿದ್ದರು. ಇದೀಗ ಮಹಿಳೆಯ ಅತ್ತೆಗೆ ಕೊರೊನಾ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ. 75 ವರ್ಷದ ವೃದ್ಧೆಗೆ ಮಂಗಳೂರಿನ ಕೋವಿಡ್-19 ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೃದ್ಧೆ ಏಪ್ರಿಲ್ 18 ರಿಂದ ಪಾರ್ಶ್ವವಾಯುಗೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಕೋವಿಡ್-19 ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವೃದ್ಧೆಗೆ ಸೋಂಕು ತಗುಲಿರುವುದು ದೃಢಪಡುತ್ತಿದ್ದಂತೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆ ಏರಿಯಾವನ್ನು ಕ್ವಾರಂಟೈನ್ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 75ರ ಕೆಲ ಭಾಗವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಪಡೀಲು ಬಳಿಯ ಹೆದ್ದಾರಿಯನ್ನೂ ಬಂದ್ ಮಾಡುವ ಸಾಧ್ಯತೆ ಇದೆ.

ಇತ್ತ ಹುಬ್ಬಳ್ಳಿಯಲ್ಲಿಯೂ ಕೊರೊನಾ ವ್ಯಾಪಕವಾಗಿ ಹಬ್ಬುತ್ತಿದ್ದು, ದೆಹಲಿಗೆ ವ್ಯಾಪಾರಕ್ಕಾಗಿ ಹೋಗಿ ಬಂದಿದ್ದ ಹುಬ್ಬಳ್ಳಿಯ ಮುಲ್ಲಾ ಓಣಿಯ ನಿವಾಸಿ ರೋಗಿ ನಂಬರ್-194ರ ಸಂಪರ್ಕದಿಂದ ಇದೀಗ ಹುಬ್ಬಳ್ಳಿಯಲ್ಲಿ ಮತ್ತೆ ಎರಡು ಕೊರೊನಾ ಪಾಸಿಟಿವ್ ಬಂದಿದೆ. ಈ ಮೂಲಕ ಒಬ್ಬನಿಂದ ಒಂದೇ ಕುಟುಂಬದ ಏಳು ಜನರಿಗೆ ಸೋಂಕು ತಗುಲಿದೆ. ಇದನ್ನೂ ಓದಿ: ಹುಬ್ಬಳ್ಳಿಯ ಒಂದೇ ಕುಟುಂಬದ 7 ಮಂದಿಗೆ ಕೊರೊನಾ ಸೋಂಕು

ತಮ್ಮನಿಂದಾಗಿ ಸಹೋದರ, ಸಹೋದರಿಯರ ಮಕ್ಕಳಿಗೂ ಸೋಂಕು ತಗುಲಿದೆ. ಕೊರೊನಾ ವೈರಸ್ ಮುಲ್ಲಾ ಓಣಿಯ ಕುಟುಂಬಕ್ಕೆ ಸಂಕಷ್ಟವನ್ನು ತಂದೊಡ್ಡಿದ್ದು, ಈಗ ಒಂದೇ ಕುಟುಂಬದಲ್ಲಿಯೇ 7 ಜನರಿಗೆ ಸೋಂಕು ತಗುಲುವ ಮೂಲಕ ಕೊರೊನಾ ವೈರಸ್ ರೌದ್ರನರ್ತನ ಮೆರೆದಿದೆ.

ದೆಹಲಿಗೆ ವ್ಯಾಪಾರಕ್ಕಾಗಿ ಹೋಗಿದ್ದ ಹುಬ್ಬಳ್ಳಿಯ ಮುಲ್ಲಾ ಓಣಿಯ ವ್ಯಕ್ತಿಯಲ್ಲಿ ಏಪ್ರಿಲ್ 09ರಂದು ಸೋಂಕು ಇರುವುದು ದೃಢಪಟ್ಟಿತ್ತು. ಅಂದಿನಿಂದ ಸೋಂಕಿತನ ಕುಟುಂಬದ ಸದಸ್ಯರನ್ನ ಕ್ವಾರಂಟೈನ್ ಮಾಡಲಾಗಿತ್ತು. ಅಲ್ಲದೆ ಏಪ್ರಿಲ್ 14ರಂದು ಅದೇ ಕುಟುಂಬದ ಅಣ್ಣ ಹಾಗೂ ಅಣ್ಣನ ಮೂವರು ಮಕ್ಕಳಲ್ಲೂ ಸೊಂಕು ಕಾಣಿಸಿಕೊಂಡಿತ್ತು.

ಧಾರವಾಡ ಜಿಲ್ಲೆಯಲ್ಲಿ ಇಂದು ಮತ್ತಿಬ್ಬರಿಗೆ ಸೋಂಕು ತಗುಲಿರುವುದರಿಂದ ಸೋಂಕಿತರ ಸಂಖ್ಯೆ 9ಕ್ಕೆ ಏರಿದ್ದು, ಈ ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವವರಿಗೆ ಜಿಲ್ಲಾಡಳಿತ ಇದೀಗ ಹುಡುಕಾಟ ನಡೆಸುತ್ತಿದೆ. ಆ ಹಿನ್ನೆಲೆಯಲ್ಲಿ ಸೋಂಕಿತರಿಬ್ಬರ ಫೋನ್ ಕಾಲ್ ಹಿಸ್ಟರಿ ನೀಡುವಂತೆ ಜಿಲ್ಲಾಧಿಕಾರಿ ದೀಪಾ ಚೋಳನ್ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಒಂದೇ ಕುಟುಂಬದ ಏಳು ಜನರಿಗೆ ಸೋಂಕು ಹರಿಡಿದ್ದಲ್ಲದೇ ಮುಲ್ಲಾ ಓಣಿ ಹಾಗೂ ಕರಾಡಿ ಓಣಿಗೆ ಮಾತ್ರ ಸಿಮೀತವಾಗಿದ್ದ ಸೋಂಕು ಇದೀಗ ಹುಬ್ಬಳ್ಳಿ ಕೇಶ್ವಾಪುರದ ಆಜಾದ ನಗರಕ್ಕೂ ಆವರಿಸಿರುವುದರಿಂದ ಹುಬ್ಬಳ್ಳಿಯಲ್ಲಿ ಆತಂಕ ಮತ್ತಷ್ಟು ಮನೆ ಮಾಡಿದೆ. ಹೀಗಾಗಿ ಧಾರವಾಡ ಜಿಲ್ಲಾಡಳಿತ ಜನರು ಮನೆಯಲ್ಲೆ ಇದ್ದು ಸೊಂಕು ಹರಡುವುದನ್ನ ತಡೆಗಟ್ಟಲು ನೆರವಾಗಬೇಕೆಂದು ಮನವಿ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *