– ಗೃಹ ಖಾತೆಗಾಗಿ ಬಿಜೆಪಿ-ಜೆಡಿಯು ಗುದ್ದಾಟ
ಪಾಟ್ನಾ: ಬಿಹಾರದಲ್ಲಿ ಎನ್ಡಿಎ ಸರ್ಕಾರ (Bihar NDA Government) ರಚನೆಗೆ ಕ್ಷಣಗಣನೆ ಶುರುವಾಗಿದೆ. ನ.20 ರಂದು ಬೆಳಗ್ಗೆ 11 ರಿಂದ 12 ಗಂಟೆಯೊಳಗೆ ಪ್ರಧಾನಿ ಮೋದಿ ಸಮ್ಮುಖದಲ್ಲಿ ಪ್ರಮಾಣವಚನ ಸಮಾರಂಭ ನಡೆಯಲಿದ್ದು, ನಿತೀಶ್ ಕುಮಾರ್ ಸರ್ಕಾರದಲ್ಲಿ ಮಹಿಳೆಯೊಬ್ಬರು ಉಪಮುಖ್ಯಮಂತ್ರಿಯಾಗಿ (Women DCM) ಪ್ರಮಾಣ ಸ್ವೀಕರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಗೃಹ ಖಾತೆ ಬಿಡಲು ಒಪ್ಪದ ನಿತೀಶ್
ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿದ ಎನ್ಡಿಎ ಮೈತ್ರಿಕೂಟದಲ್ಲಿ ಈಗ ಸಚಿವ ಸ್ಥಾನಕ್ಕಾಗಿ ಹಗ್ಗ-ಜಗ್ಗಾಟ ಶುರುವಾಗಿದೆ. ಗೃಹ ಖಾತೆಗೆ ಬಿಜೆಪಿ (BJP) ಪಟ್ಟು ಹಿಡಿದಿದ್ದು, ಖಾತೆ ಬಿಟ್ಟು ಕೊಡಲು ನಿತೀಶ್ಕುಮಾರ್ ಒಪ್ಪಿಲ್ಲ. ಆರೋಗ್ಯ, ಹಣಕಾಸು ಖಾತೆ ಬಿಟ್ಟು ಕೊಡೋದಾಗಿ ಬಿಜೆಪಿ ಮುಂದಿಟ್ಟಿರೋ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.
ಇಬ್ಬರು ಡಿಸಿಎಂ
ಇಬ್ಬರು ಉಪಮುಖ್ಯಮಂತ್ರಿಗಳು ನೇಮಕವಾಗೋ ಸಾಧ್ಯತೆಗಳಿದ್ದು, ಮಹಿಳೆಯೊಬ್ಬರಿಗೆ ಅದೃಷ್ಟ ಒಲಿಯೋ ಸಾಧ್ಯತೆಗಳಿವೆ. ನಾಳೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಮೂವರು ಕೇಂದ್ರ ವೀಕ್ಷಕರನ್ನ ನೇಮಕ ಮಾಡಲಾಗಿದೆ.
ಇನ್ನೂ ಸರ್ಕಾರ ಅಧಿಕಾರಕ್ಕೆ ಬರೋ ಮುನ್ನ ಜನ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ಸವಾಲೊಂದನ್ನು ಹಾಕಿದ್ದಾರೆ. ಬಿಹಾರದಲ್ಲಿ ನಿತೀಶ್ 1.5 ಕೋಟಿ ಜನರಿಗೆ ತಲಾ 2 ಲಕ್ಷ ನೀಡಿದ್ರೆ ರಾಜಕೀಯ ತೊರೆಯುವುದಾಗಿ ಸವಾಲೆಸೆದಿದ್ದಾರೆ.
ಇನ್ನು, ಕುಟುಂಬ ಕಲಹದ ಬೆನ್ನಲ್ಲೇ ವಿಪಕ್ಷ ನಾಯಕನಾಗಲು ಒಪ್ಪದ ತೇಜಸ್ವಿ ಯಾದವ್ಗೆ ಲಾಲೂ ಒಪ್ಪಿಸಿದ್ದಾರೆ. ನನ್ನ ಆಪ್ತರನ್ನ ಟಾರ್ಗೆಟ್ ಮಾಡುವುದು ತಪ್ಪು ಅಂತ ತೇಜಸ್ವಿ ಯಾದವ್ ಗುಡುಗಿದ್ದಾರೆ. ಆದರೆ, ಬಹಿರಂಗ ವೇದಿಕೆಯಲ್ಲಿ ಚರ್ಚೆಗೆ ಬರುವಂತೆ ಹಾಗೂ ಕಿಡ್ನಿಯನ್ನ ದಾನ ಮಾಡುವಂತೆ ತೇಜಸ್ವಿ ಯಾದವ್ಗೆ ಸಹೋದರಿ ರೋಹಿಣಿ ಆಚಾರ್ಯ ಸವಾಲು ಹಾಕಿದ್ದಾರೆ.

