ಕೊಪ್ಪಳ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಜಿಲ್ಲೆಯ ಪ್ರವಾಸಿ ಮಂದಿರವನ್ನ ನವೀಕರಣ ಮಾಡಿಸುತ್ತಿದ್ದು ಸರ್ಕಾರದ ಹಣ ಪೋಲು ಮಾಡಲಾಗ್ತಿದೆ ಅನ್ನೋ ಆರೋಪ ಕೇಳಿಬಂದಿದೆ.
ಫೆ. 10 ರಂದು ಕೊಪ್ಪಳದ ಕುಕನೂರಿನ ಪ್ರವಾಸಿ ಮಂದಿರದಲ್ಲಿ ರಾಹುಲ್ ಗಾಂಧಿ ವಾಸ್ತವ್ಯ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದಷ್ಟೇ ಹೊಸದಾಗಿ ಲೋಕಾರ್ಪಣೆಗೊಂಡಿದ್ದ ಪ್ರವಾಸಿ ಮಂದಿರದಲ್ಲಿ ಹಾಕಲಾಗಿದ್ದ ಉಪಕರಣಗಳನ್ನು ತೆಗೆದು ಹಾಕಿ ಮತ್ತೆ ಹೊಸ ಎಸಿ, ಹೊಸ ಮಂಚ ಹಾಕಿದ್ದು, ಹೊಸ ಟಾಯ್ಲೆಟ್ ನಿರ್ಮಿಸಲಾಗ್ತಿದೆ. ಇದಕ್ಕಾಗಿಯೇ 25 ಲಕ್ಷ ರೂಪಾಯಿ ಖರ್ಚು ಮಾಡಲಾಗ್ತಿದೆ.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ತಮ್ಮ ನಾಯಕ ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಇಷ್ಟೆಲ್ಲಾ ಕಸರತ್ತು ಮಾಡ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಸಿಎಂ ಹಾಗೂ ಸಂಪುಟ ದರ್ಜೆಯ ಸಚಿವರ ಆಗಮನದ ಹಿನ್ನೆಲೆಯಲ್ಲಿ ಸಹ ಎಲ್ಲಾ ರೂಂಗಳಲ್ಲಿ ಎಸಿ ಅಳವಡಿಕೆ ಮಾಡಿ ಸಚಿವರು ದುಂದು ವೆಚ್ಚ ಮಾಡ್ತಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.