ಗಡಿಯಲ್ಲಿ ದೇಶದ ರಕ್ಷಣೆ ಜೊತೆ ಯುಪಿಎಸ್‍ಸಿ ತಯಾರಿ – 5ನೇ ಪ್ರಯತ್ನದಲ್ಲಿ ಐಎಎಸ್ ಆಫೀಸರ್

Public TV
2 Min Read

ಚಂಡೀಗಢ: ನಿರಂತರ ಪ್ರಯತ್ನ, ಕಠಿಣ ಪರಿಶ್ರಮದಿಂದ ಜನರು ಏನೂ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಬಿಎಸ್‍ಎಫ್ ಯೋಧರೊಬ್ಬರು ಮಾದರಿಯಾಗಿದ್ದಾರೆ. ಗಡಿಯಲ್ಲಿ ದೇಶದ ರಕ್ಷಣೆ ಜೊತೆ ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸಿ 5ನೇ ಪ್ರಯತ್ನದಲ್ಲಿ ಬಿಎಸ್‍ಎಫ್ ಯೋಧ ಐಎಎಸ್ ಆಫೀಸರ್ ಆಗಿದ್ದಾರೆ.

ಹರ್‌ಪ್ರೀತ್ ಸಿಂಗ್ ಗಡಿಯಲ್ಲಿ ದೇಶದ ರಕ್ಷಣೆ ಮಾಡುತ್ತಾ ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಹರ್‌ಪ್ರೀತ್ ಅವರು ಗಡಿಯಲ್ಲಿ ತಮ್ಮ ಕರ್ತವ್ಯವನ್ನು ನಿಭಾಯಿಸಿದ ಬಳಿಕ ಬಿಡುವಿನ ಸಮಯದಲ್ಲಿ ಓದಿ 5ನೇ ಬಾರಿಗೆ ಐಎಎಸ್ ಪರೀಕ್ಷೆಯಲ್ಲಿ ಸಫಲರಾಗಿದ್ದಾರೆ. ಅಷ್ಟೇ ಅಲ್ಲದೆ ಹರ್‌ಪ್ರೀತ್ ಅವರು ದೇಶದ ಟಾಪ್ 20ಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

2016ರಲ್ಲಿ ಯುಪಿಎಸ್‍ಸಿ ಮೂಲಕ ನಾನು ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ಬಿಎಸ್‍ಎಫ್ ಸೇರಿದೆ. ಬಿಎಸ್‍ಎಫ್ ಸೇರಿದ ಬಳಿಕ ನನಗೆ ಭಾರತ ಹಾಗೂ ಬಾಂಗ್ಲಾದೇಶದ ಗಡಿಯಲ್ಲಿ ಪೋಸ್ಟಿಂಗ್ ಆಯ್ತು. ಗಡಿಯಲ್ಲಿ ನನ್ನ ಡ್ಯೂಟಿ ನನಗೆ ಇಷ್ಟವಾಗುತಿತ್ತು. ನಾನು ಆ ಕಷ್ಟದ ಕೆಲಸವನ್ನು ಇಷ್ಟಪಡಲು ಶುರು ಮಾಡಿದೆ. ಆದರೆ ನಾನು ಐಎಎಸ್ ಆಫೀಸರ್ ಆಗಬೇಕು ಎಂದು ಕನಸು ಕಂಡಿದ್ದೆ. ಹಾಗಾಗಿ ಗಡಿಯಲ್ಲಿ ನನ್ನ ಕೆಲಸ ಮುಗಿದ ನಂತರ ಬಿಡುವಿನ ಸಮಯದಲ್ಲಿ ನನ್ನ ಗುರಿಯತ್ತ ಗಮನ ಹರಿಸಿದೆ ಎಂದು ಹರ್‌ಪ್ರೀತ್ ಹೇಳಿದ್ದಾರೆ.

ನನ್ನ ಗುರಿ ನನ್ನ ತಲೆಯಲ್ಲಿ ಸ್ಪಷ್ಟವಾಗಿತ್ತು. ಹಾಗಾಗಿ ನನ್ನ ಗಮನ ಬೇರೆ ಕಡೆ ಹೋಗಲ್ಲ. ಕರ್ತವ್ಯ ಹೊರತಾಗಿ ನಾನು ನನ್ನ ಸಂಪೂರ್ಣ ಸಮಯವನ್ನು ನೋಟ್ಸ್ ಓದುತ್ತಿದ್ದೆ. ಹಾಗಾಗಿ ನಾನು 5ನೇ ಬಾರಿ ಯಶಸ್ಸು ಕಂಡಿದ್ದೇನೆ. ಪಬ್ಲಿಕ್ ಆಡ್ಮಿನಿಸ್ಟ್ರೇಷನ್ ನನ್ನ ಐಚ್ಚಿಕ ವಿಷಯವಾಗಿತ್ತು. ಬಲವಾದ ನಿರ್ಧಾರ ಹಾಗೂ ನನ್ನ ಕಠಿಣ ಪರಿಶ್ರಮ ಈ ಎರಡು ವಿಷಯಗಳನ್ನು ನನ್ನ ಯಶಸ್ಸಿನ ಮೂಲ ಮಂತ್ರ ಎಂದು ನಾನು ಪರಿಗಣಿಸುತ್ತೇನೆ. ನನ್ನ ಪ್ರಕಾರ ನಾವು ನಮ್ಮ ಕನಸ್ಸನ್ನು ಹಿಂದೆ ಬಿಡಬಾರದು. ಎಷ್ಟೇ ಕಷ್ಟ ಆದರೂ ನಾವು ಪ್ರಯತ್ನ ಪಡಬೇಕು ಎಂದರು.

ನಾನು ಮೂಲತಃ ಪಂಜಾಬ್‍ನವನಾಗಿದ್ದು, ಐಟಿಎಸ್ (ಇಂಡಿಯನ್ ಟ್ರೆಂಡ್ ಸರ್ವೀಸ್) ನಲ್ಲಿ ತೇರ್ಗಡೆಯಾದೆ. ಬಳಿಕ 2007ರಲ್ಲಿ ಸಿವಿಲ್ ಸೇವಾ ಪರೀಕ್ಷೆ ಬರೆದೆ. ಆಗ ನನಗೆ 454 ರ್‍ಯಾಂಕ್ ದೊರೆತಿದ್ದು, ನನ್ನನ್ನು ಭಾರತೀಯ ಟ್ರೆಂಡ್ ಸರ್ವಿಸ್‍ಗೆ ಆಯ್ಕೆ ಮಾಡಲಾಯಿತು. ಆ ಸಂದರ್ಭದಲ್ಲಿ ನಾನು ಬಿಎಸ್‍ಎಫ್ ತೊರೆದು ಐಟಿಎಸ್ ಸೇರಿಕೊಂಡೆ. ಮತ್ತೆ 2018ರಲ್ಲಿ ನಾನು 5ನೇ ಬಾರಿ ಸಿವಿಲ್ ಪರೀಕ್ಷೆ ಬರೆದೆ. ಈ ಬಾರಿ ನನಗೆ 19ನೇ ರ್‍ಯಾಂಕ್ ಬಂತು ಹಾಗೂ ನನ್ನ ಕನಸು ನನಸಾಯಿತು ಎಂದು ಹರ್‌ಪ್ರೀತ್ ಸಂತಸ ವ್ಯಕ್ತಪಡಿಸಿದ್ದಾರೆ.

ಹರ್‌ಪ್ರೀತ್ ಅವರಿಗೆ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಶನಲ್ ಆಕಾಡೆಮಿ ಆಫ್ ಆಡ್ಮಿನಿಸ್ಟ್ರೇಸನ್‍ನಲ್ಲಿ ಟ್ರೈನಿಂಗ್ ನಡೆಯಲಿದೆ. ಹರ್‌ಪ್ರೀತ್ ಗ್ರೀನ್ ಗ್ರೀವ್ ಪಬ್ಲಿಕ್ ಶಾಲೆಯಲ್ಲಿ ಓದಿದ ಬಳಿಕ ಎಲೆಕ್ಟ್ರಾನಿಕ್ಸ್ ನಲ್ಲಿ ಬಿಇ ಪದವಿ ಪಡೆದಿದ್ದಾರೆ. ಹರ್‌ಪ್ರೀತ್ ಅವರ ತಂದೆ ಉದ್ಯಮಿಯಾಗಿದ್ದು ತಾಯಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *