ನಾನು ಅಂಬೇಡ್ಕರ್ ಗೆ ಅವಮಾನ ಮಾಡಿಲ್ಲ: ಪೇಜಾವರಶ್ರೀ

Public TV
1 Min Read

ಉಡುಪಿ: ನಾನು ಸಂವಿಧಾನ ಬದಲಿಸಿ ಎಂದು ಧರ್ಮ ಸಂಸದ್ ನಲ್ಲಿ ಹೇಳಿಲ್ಲ. ಅಂಬೇಡ್ಕರ್ ಗೆ ಅಪಮಾನ ಮಾಡಿಲ್ಲ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸ್ವಾಮೀಜಿ, ಸಂವಿಧಾನದಲ್ಲಿ ತಿದ್ದುಪಡಿ ಆಗಬೇಕೆಂದು ನಾನು ಹೇಳಿದೆ. ಆದರೆ ದಲಿತರ ಮೀಸಲಾತಿ ವಿಚಾರ ನಾನು ಮಾತನಾಡಲೇ ಇಲ್ಲ. ದಲಿತರಿಗೆ ಮೀಸಲಾತಿ ವಿಸ್ತರಿಸಬೇಕು ಎಂದು ಹೇಳುವವರಲ್ಲಿ ನಾನು ಒಬ್ಬ. ಸಂವಿಧಾನಕ್ಕೆ ಅಪಮಾನ ಮಾಡಿದರೆ ದೇಶಕ್ಕೆ ಅಪಮಾನ ಮಾಡಿದಂತೆ ಎಂದರು.

ವೇದಿಕೆಯಲ್ಲಿದ್ದ ಸಾಹಿತಿಗಳಿಗೂ ಇದು ಅರ್ಥವಾಗಲಿಲ್ಲವಲ್ಲ ಅನ್ನುವುದೇ ವಿಪರ್ಯಾಸ. ಸಂವಿಧಾನ ಅಂಬೇಡ್ಕರ್ ಒಬ್ಬರೇ ರಚನೆ ಮಾಡಿದ್ದಲ್ಲ. ಸಂವಿಧಾನ ರಚನಾ ಸಮಿತಿಯಲ್ಲಿ ದೇಶದ ಎಲ್ಲಾ ಪ್ರತಿನಿಧಿಗಳು ಇದ್ದರು. ಸಂವಿಧಾನ ರಚನಾ ಸಮಿತಿಯಲ್ಲಿ ಅಲ್ಲಾಡಿ ಕೃಷ್ಣಸ್ವಾಮಿ, ಅಯ್ಯರ್, ಕೆ.ಎಂ ಮುನ್ಶಿ, ಬೆನಗಲ್, ಅಂಬೇಡ್ಕರ್ ಕೆಲಸಕ್ಕೆ ಕೈಜೋಡಿಸಿದ್ದ ಪ್ರಮುಖರು. ತಮ್ಮ ಹೇಳಿಕೆ ಹೋರಾಟಗಾರ ದ್ವಾರಕನಾಥ್ ರಂತ ದೊಡ್ಡ ವಕೀಲರಿಗೂ ಅರ್ಥವಾಗಲಿಲ್ಲ ಎಂಬುವುದೇ ವಿಪರ್ಯಾಸ ಎಂದು ಹೇಳಿದರು.

ಧರ್ಮದ ಹೆಸರಲ್ಲಿ ವಿಭಜನೆ ಬೇಡ. ಚರ್ಚ್-ಮಸೀದಿಗಿರುವ ಸ್ವಾಯತ್ತತೆ ಎಲ್ಲರಿಗೂ ಬರಲಿ. ಶಾದಿಭಾಗ್ಯ ದಲಿತರಿಗೆ ಯಾಕಿಲ್ಲ, ದಲಿತರಲ್ಲಿ ಬಡವರು ಇಲ್ವಾ ಎಂದು ಇದೇ ವೇಳೆ ಪ್ರಶ್ನಿಸಿದರು.

ಉಡುಪಿ ಧರ್ಮ ಸಂಸದ್ ಯಶಸ್ವಿಯಾಗಿದೆ. ಧರ್ಮ ಸಂಸದ್ ಯಶಸ್ವಿಯಾದದ್ದನ್ನು ಬುದ್ಧಿ ಜೀವಿಗಳಿಗೆ, ಸಾಹಿತಿಗಳಿಗೆ ಸಹಿಸಲಾಗುತ್ತಿಲ್ಲ. ಸಾಹಿತಿಗಳಿಂದ ಮೊಸರಲ್ಲಿ ಕಲ್ಲು ಹುಡುಕುವ ಕೆಲಸವಾಗುತ್ತಿದೆ. ಪಾಪದ ದಲಿತರನ್ನು ಇವರು ವಿವಾದವೆಂದು ಹೇಳಿ ಎಳೆದು ತರುತ್ತಿದ್ದಾರೆ ಎಂದು ಆರೋಪಿಸಿದರು.

ಪೇಜಾವರ ಶ್ರೀ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯಾದ್ಯಂತ ಹಲವು ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

 


Share This Article
Leave a Comment

Leave a Reply

Your email address will not be published. Required fields are marked *